ತುರುವೆಕೆರೆ:
ಕೆಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕ್ರೀಡಾಂಗಣದ ತುಂಬೆಲ್ಲ ಮಳೆಯ ನೀರು ನಿಂತು ಕೆರೆಯಂತಾಗಿದೆ. ಬೆಳಗಿನ ವೇಳೆ ವಾಯುವಿಹಾರಕ್ಕೆಂದು ಬರುವ ನಾಗರೀಕರು ಕ್ರೀಡಾಂಗಣದಲ್ಲಿ ನಿಂತಿರುವ ನೀರನ್ನು ನೋಡಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಪ್ರತಿ ದಿನ ಮುಂಜಾನೆಯೇ ನಾಗರೀಕರು, ವಯೋವೃದ್ದರು, ಯುವಕರಾದಿಯಾಗಿ ನೂರಾರು ಜನ ಕ್ರೀಡಾಂಗಣಕ್ಕೆ ಭೇಟಿ ನೀಡುತ್ತಾರೆ.
ಕ್ರಿಕೆಟ್ ಆಟಗಾರರು, ವಾಯುವಿಹಾರ ಮಾಡುವವರು, ಕುದುರೆ ಸವಾರಿ ಹಾಗೂ ವಾಹನ ಕಲಿಯುವವರಿಗೆ ಏಕೈಕ ಸ್ಥಳವೆಂದರೆ ಇದೊಂದೆ. ಈ ಕ್ರೀಡಾಂಗಣವೊಂದನ್ನು ಬಿಟ್ಟರೆ ಮತ್ಯಾವ ವಿಶಾಲವಾದ ಮೈದಾನವಾಗಲೀ, ಉಧ್ಯಾನವನಗಳಾಗಳೀ ಇಲ್ಲಿಲ್ಲ. ಆದ್ದರಿಂದ ಪಟ್ಟಣದ ನಾಗರೀಕರಿಗೆ ಇದೊಂದೇ ಆಟೋಟಗಳ ಸ್ಥಳವಾಗಿದ್ದು ಮಳೆ ಬಂದ ಸಂಧರ್ಭದಲ್ಲಿ ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಬೇಸರಗೊಳ್ಳುವಂತಾಗಿದೆ. ಕೆಲವು ವಾಯುವಿಹಾರಿಗಳು ವಿಧಿಯಿಲ್ಲದೆ ಕೆಸರಿನಲ್ಲಿಯೇ ವಾಕ್ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಕೊನೆ ಪಕ್ಷ ತಗ್ಗು ಪ್ರದೇಶಗಳಿಗೆ ಮಣ್ಣಾದರೂ ಹಾಕಿ ಓಡಾಡಲು ಅನುವು ಮಾಡಿಕೊಟ್ಟಿದ್ದರೆ ಸಾಕಿತ್ತು ಎಂದು ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರೀಡಾಂಗಣದ ನವೀಕರಣಕ್ಕೆ ಸುಮಾರು 50 ಲಕ್ಷ ಅನುದಾನದಲ್ಲಿ ನಾಗರೀಕರೊಂದಿಗೆ ರೂಪುರೇಷೆ ಬಗ್ಗೆ ಚರ್ಚಿಸಿ ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಶಾಸಕ ಮಸಾಲ ಜಯರಾಂ ತಿಳಿಸಿದ್ದು, ಆದಷ್ಟು ಬೇಗ ಕ್ರೀಡಾಂಗಣ ನವೀಕರಿಸಿ ನಾಗರೀಕರಿಗೆ ಹಾಗೂ ವಾಯುವಿಹಾರಿಗಳಿಗೆ ಅನುವು ಮಾಡಿಕೊಡಲಿ ಎಂದು ಮುಂಜಾನೆ ಗೆಳೆಯರ ಬಳಗದ ಸದಸ್ಯರು ಶಾಸಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ