ದಾಖಲಾತಿ ಪರಿಶೀಲಿಸಿ ವಾರದೊಳಗೆ ಕ್ರಮ- ಡಿಸಿ 

ತುಮಕೂರು
    ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿರುವ 7 ಧಾರ್ಮಿಕ ಕಟ್ಟಡಗಳ ಒತ್ತುವರಿ ತೆರವಿನ ಬಗ್ಗೆ ಲಭ್ಯವಿರುವ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ, ಒಂದು ವಾರದ ಒಳಗೆ ಮುಂದಿನ ಕ್ರಮವನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಪ್ರಕಟಿಸಿದರು.
    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳಲ್ಲಿ, ಸಾರ್ವಜನಿಕ ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ 7 ಧಾರ್ಮಿಕ ಕಟ್ಟಡಗಳಿಗೆ ಸಂಬಂಧಪಟ್ಟ ಮುಖಂಡರುಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
     ಸುಪ್ರಿಂ ಕೋರ್ಟ್ ಆದೇಶ ಮತ್ತು ಹೈಕೋರ್ಟ್ ನಿರ್ದೇಶನದ ಅನುಸಾರ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮನುಷ್ಯ ಮುಖ್ಯ, ಧರ್ಮ ಬಳಿಕ ಎಂದು ಹೇಳಿದ ಅವರು, ನಗರದ 7 ಧಾರ್ಮಿಕ ಕಟ್ಟಡಗಳ ಮುಖಂಡರು ಒದಗಿಸಿರುವ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕ ರಸ್ತೆಗಳಲ್ಲಿ ಒತ್ತುವರಿ ಆಗಿದ್ದರೆ, ಅಗತ್ಯವಿದ್ದರೆ ಪರಿಹಾರ ಕೊಟ್ಟಾದರೂ ತೆರವಿಗೆ ಕ್ರಮ ಜರುಗಿಸಲಾಗುವುದು. ಇನ್ನೊಂದು ವಾರದೊಳಗೆ ಈ ಬಗೆಗಿನ ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದರು. 
     ಈ ಸ್ಥಳಗಳಿಗೆ ಮೊದಲಿಗೆ ನಾವು ಬೀಗ ಹಾಕುತ್ತೇವೆ. ನಂತರ ಮುಂದಿನ ಕ್ರಮ ಜರುಗಿಸುತ್ತೇವೆ. ಇದು ಯಾವುದೇ ಧರ್ಮದ ವಿರುದ್ಧವಾದ ಕ್ರಮವಲ್ಲ. ಕೇವಲ ಸಾರ್ವಜನಿಕ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದಷ್ಟೇ ಎಂದು ಅವರು ಒತ್ತಿ ಹೇಳಿದರು.
ಈ ವಿಚಾರದಲ್ಲಿ ಯಾರೊಬ್ಬರೂ ಗೊಂದಲ ಮಾಡಿಕೊಳ್ಳುವುದು ಬೇಡ. ತಪ್ಪು ಮಾಹಿತಿ ಹರಡುವುದು ಬೇಡ. ಊಹಾಪೋಹ ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್  ಮನವಿ ಮಾಡಿಕೊಂಡರು. 
ರಸ್ತೆಗೆ ಅಡ್ಡಿಯಿದ್ದರೆ ತೆಗೆಯಿರಿ
      ಮಾಜಿ ಟೂಡಾ ಸದಸ್ಯ ಹಾಗೂ ವಿಶ್ವಹಿಂದು ಪರಿಷತ್ ಮುಖಂಡ ಜಿ.ಕೆ.ಶ್ರೀನಿವಾಸ್ ಮೊದಲಿಗೆ ಮಾತನಾಡುತ್ತ, ಈ ಹಿಂದೆ ಇದೇ ರೀತಿಯ ಎರಡು ಸಭೆಗಳು ನಡೆದಿವೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಈಗಲೂ ಆ ರೀತಿ ಆಗುವುದು ಬೇಡ. ರಸ್ತೆ ಜಾಗ ಒತ್ತುವರಿ ಆಗಿರುವುದು ಕಂಡುಬಂದರೆ, ಯಾರನ್ನು ಕೇಳುವುದೇನಿದೆ? ಒತ್ತುವರಿ ತೆರವುಗೊಳಿಸಬೇಕಷ್ಟೇ ಎಂದು ಅಭಿಪ್ರಾಯಪಟ್ಟರು.
       ಶ್ರೀಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಅಲ್ಲ್ಲಾ ಸಾಬರ ದರ್ಗಾದ ಅಧ್ಯಕ್ಷ ಅಹಮದ್ ವಿವಿಧ ದಾಖಲಾತಿಗಳನ್ನು ಸಲ್ಲಿಸುತ್ತ, ಈ ದರ್ಗಾಕ್ಕೆ ಸ್ವಾತಂತ್ರ್ಯಪೂರ್ವದಲ್ಲೇ ಅಂದರೆ, 1945 ರಲ್ಲೇ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಲಾಗಿದೆ. ಸಂಬಂಧಿಸಿದ ಪ್ರಾಧಿಕಾರಗಳಿಂದ ಪರವಾನಗಿ ಪಡೆದು ಕಟ್ಟಡ ನಿರ್ಮಿಸಲಾಗಿದೆ. ಈ ದರ್ಗಾದಿಂದ ಟ್ರಾಫಿಕ್ ವ್ಯವಸ್ಥೆಗೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ವಾದಿಸಿದರು. 
      ಹಿಂದು ಜಾಗರಣ ವೇದಿಕೆ ಮುಖಂಡ ಜಿ.ಎಸ್.ಬಸವರಾಜು ಇದಕ್ಕೆ ಆಕ್ಷೇಪಿಸುತ್ತ, ಬೇರೊಂದು ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಕಂದಾಯಾಧಿಕಾರಿ ಜಗದೀಶ್ ಸ್ಪಷ್ಟನೆ ಕೊಡುತ್ತ, ದಾಖಲಾತಿ ಪ್ರಕಾರ ಈ ದರ್ಗಾದ ನಿಗದಿತ ಜಾಗಕ್ಕೂ, ಈಗಿರುವ ಜಾಗಕ್ಕೂ ವ್ಯತ್ಯಾಸ ಇದ್ದು ಹೆಚ್ಚುವರಿಯಾಗಿರುವ ಜಾಗವನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಧ್ಯೆಪ್ರವೇಶಿಸಿ, ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
   
     ನಗರದ ಕುಣಿಗಲ್ ರಸ್ತೆಯ ಬನಶಂಕರಿ ದೇವಾಲಯದ ಪರವಾಗಿ ಮಾತನಾಡಿದ ರೇವಣಸಿದ್ದಯ್ಯ, ಈ ದೇವಾಲಯ 400-500 ವರ್ಷಗಳಷ್ಟು ಪುರಾತನವಾದುದು. ಈಗ ಇಲ್ಲಿ 4 ಮೀಟರ್ ಒತ್ತುವರಿಯೆಂದು ಗುರುತು ಮಾಡಲಾಗಿದೆ. ಆದರೆ ನಾವು 3 ಮೀಟರ್‍ಗಳಷ್ಟು ಜಾಗವನ್ನು ತೆರವು ಮಾಡಿಕೊಡಲು ಸಿದ್ಧರಿದ್ದೇವೆ ಎಂದು ಹೇಳಿದರು. 
     ಇದಕ್ಕೆ ಪ್ರತಿಕ್ರಿಯಿಸಿದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದ ಆಯುಕ್ತ ಯೋಗಾನಂದ್, ನಾವು 4 ಮೀಟರ್ ಎಂದು ಗುರುತು ಮಾಡಿದ್ದೇವೆ. ಆದರೂ ಸಹ ಮತ್ತೊಮ್ಮೆ ದಾಖಲಾತಿಗಳನ್ನು ಪರಿಶೀಲಿಸಿ ಮುಂದಿನ ನಿಲುವು ತಾಳಲಾಗುವುದು ಎಂದರು. 
      ನಗರದ ಟೌನ್ ಹಾಲ್ ವೃತ್ತದ ದರ್ಗಾಕ್ಕೆ ಸಂಬಂಧಿಸಿದಂತೆ ವಕೀಲರಾದ ಫರ್ಹಾನ್ ಮತ್ತು ಇಂತಿಯಾಜ್ ದಾಖಲಾತಿಗಳನ್ನು ನೀಡುತ್ತ, ಈ ದರ್ಗಾ ವಕ್ಫ್ ಆಸ್ತಿಯಾಗಿದೆ. 1947ಕ್ಕೆ ಮೊದಲೇ ಇದು ಅಸ್ತಿತ್ವದಲ್ಲಿದ್ದು, ಈಗಿನ ಸುಪ್ರೀಂ ಕೋರ್ಟ್ ಆದೇಶ ಇದಕ್ಕೆ ಅನ್ವಯಿಸುವುದಿಲ್ಲ ಎಂದರು. ಈ ವಿಷಯದ ಬಗೆಗೂ ಹಿಂದು ಜಾಗರಣ ವೇದಿಕೆಯ ಜಿ.ಎಸ್.ಬಸವರಾಜು ಆಕ್ಷೇಪಿಸಿದರಲ್ಲದೆ, ಕೆಲವು ದಾಖಲಾತಿ ಒದಗಿಸುತ್ತ ಇದು ರಸ್ತೆಯ ಜಾಗ ಎಂದು ವಾದಿಸಿದರು. 
      ವಿ.ಹಿಂ.ಪ. ಮುಖಂಡ ಜಿ.ಕೆ.ಶ್ರೀನಿವಾಸ್, ಟೌನ್‍ಹಾಲ್ ವೃತ್ತದ ನಾಗರಕಟ್ಟೆಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳೂ ಇದ್ದು, ಅವನ್ನು ಹಾಜರುಪಡಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜೆ.ಸಿ. ರಸ್ತೆಯ ಅನ್ನಪೂರ್ಣೇಶ್ವರಿ ದೇವಾಲಯದ ಬಗ್ಗೆ ದೇವರಾಜ್ ಮಾತನಾಡಿ ಮಾರ್ಕ್ ಮಾಡಿಕೊಡುವಂತೆ ಕೋರಿದರು. ಆಗ ಟೂಡಾ ಆಯುಕ್ತ ಯೋಗಾನಂದ್ ಪ್ರತಿಕ್ರಿಯಿಸುತ್ತ, ಈ ದೇವಾಲಯವನ್ನು ಚರಂಡಿ ಮೇಲೆ ನಿರ್ಮಿಸಿರುವುದು ಕಂಡುಬಂದಿದೆ ಎಂದರು.
 
    ಸೋಮೇಶ್ವರ ಪುರಂನ ಅರಳಿಕಟ್ಟೆಯ ಉಮಾಮಹೇಶ್ವರಿ ದೇವಾಲಯದ ಪರವಾಗಿ ಸಮಿತಿಯವರು ಆಗಮಿಸಿ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಂಶಿಕೃಷ್ಣ ವೇದಿಕೆಯಲ್ಲಿದ್ದರು. 7 ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸುಮಾರು 50 ಕ್ಕೂ ಅಧಿಕ ಜನರು ಸಭೆಯಲ್ಲಿ ಭಾಗವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳೂ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link