ಇನ್ನೂ ನಿಲ್ಲದ ದಲಿತರ ಮೇಲಿನ ದೌರ್ಜನ್ಯ..!

ಚಿತ್ರದುರ್ಗ:

     ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಮತದಾನದ ಅಸ್ತ್ರವನ್ನು ಸರಿಯಾಗಿ ಬಳಸಿಕೊಳ್ಳದ ಪರಿಣಾಮವಾಗಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಜಾತಿ ನಿಂದನೆ ಅತ್ಯಾಚಾರ, ಕೊಲೆ ಇನ್ನು ನಿಂತಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಿಷಾಧಿಸಿದರು.

     ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಜಿಲ್ಲೆಯ ಎಲ್ಲಾ ತಾಲೂಕಿನ ಸೆಕ್ಟರ್ ಬೂತ್ ಮಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

     ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಭೂಮಿ, ಆಸ್ತಿ, ಸಂಪತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕೆಂದು ಅಂಬೇಡ್ಕರ್ ಹೋರಾಟ ನಡೆಸಿದ ಫಲವಾಗಿ ಇಂದು ದೇಶದಲ್ಲಿ ಎಲ್ಲಾ ಜಾತಿಯವರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಾಗಿದ್ದಾರೆ. ಗಂಡು ಹೆಣ್ಣೆಂಬ ತಾರತಮ್ಯವಿಲ್ಲದೆ 1935 ರಲ್ಲಿ ಎಲ್ಲರಿಗೂ ಓಟಿನ ಹಕ್ಕು ನೀಡಿದ್ದಾರೆ. ಆದರೆ ನೀವುಗಳು ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ, ಸೀರೆ, ಕುಪ್ಪಸಕ್ಕಾಗಿ ಮತಗಳನ್ನು ಮಾರಿಕೊಳ್ಳುತ್ತಿರುವುದರಿಂದ ಇನ್ನು ಸಂವಿಧಾನ ಸರಿಯಾಗಿ ಜಾರಿಗೆ ಬಂದಿಲ್ಲ.

       ಶಿಕ್ಷಣ, ಸಂಘಟನೆ ಹೋರಾಟದ ಮೂಲಕ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಜಾತಿ ಗಲಭೆ, ಕೋಮು ಗಲಭೆ, ಪ್ರಾಂತೀಯ ಗಲಭೆಗಳು ಎಲ್ಲಿಯೂ ಆಗಬಾರದು. ಆದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯ ನಡೆಯುವುದು ನಿಂತಿಲ್ಲ. ಇದಕ್ಕೆ ನಿಮ್ಮಲ್ಲಿರುವ ಕೀಳರಿಮೆಯೇ ಕಾರಣ ಎಂದು ಎಚ್ಚರಿಸಿದರು.

     12 ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಜಾತಿ ಪದ್ದತಿಯನ್ನು ನಿರ್ಮೂಲನೆಗೊಳಿಸುವುದಕ್ಕಾಗಿ ವೀರಶೈವ ಲಿಂಗಾಯಿತ ಧರ್ಮವನ್ನು ಹುಟ್ಟು ಹಾಕಿದರು. ಆದರೆ ಜಾತಿ ಪದ್ದತಿ ಇನ್ನು ಜೀವಂತವಾಗಿದೆ. ಅಂಬೇಡ್ಕರ್ ಕೂಡ ಜಾತಿಯನ್ನು ಅಳಿಸಿ ಹಾಕುವುದಕ್ಕಾಗಿಯೇ ಹೋರಾಡಿದರು. ಮೌರ್ಯರ ಹತ್ಯೆಯಾದ ಮೇಲೆ ದೇಶದಲ್ಲಿ ಜಾತಿ ಸೃಷ್ಟಿಯಾಯಿತು. ಓಟನ್ನು ವ್ಯಾಪಾರಕ್ಕಿಟ್ಟಿರುವುದರಿಂದ ಸಂವಿಧಾನ ಜಾರಿಯಾಗಿಲ್ಲ. ಮನುವಾದಿಗಳು ಸಂವಿಧಾನದ ವಿರುದ್ದವಾಗಿದ್ದಾರೆ. ಅಮೂಲ್ಯವಾದ ಮತವನ್ನು ಚುನಾವಣೆಯಲ್ಲಿ ಯೋಗ್ಯರಿಗೆ ಚಲಾಯಿಸಿ ನೀವುಗಳು ಅಧಿಕಾರಕ್ಕೆ ಬಂದಾಗ ಮಾತ್ರ ದೇಶ ಸುಧಾರಣೆಯಾಗಲಿದೆ ಎಂದರು.

     ಮಾಜಿ ಶಾಸಕ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್, ಡಾ.ಕೃಷ್ಣಮೂರ್ತಿ, ರಾಜ್ಯ ಕಾರ್ಯದರ್ಶಿ ಎನ್.ಪ್ರಕಾಶ್, ಜಿಲ್ಲಾಧ್ಯಕ್ಷ ಎಸ್.ವೆಂಕಟೇಶ್ ಐಹೊಳೆ, ಉಪಾಧ್ಯಕ್ಷ ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಕಾರ್ಯದರ್ಶಿಗಳಾದ ಕೆ.ಎನ್.ದೊಡ್ಡೊಟ್ಟೆಪ್ಪ, ಕೆ.ತಿಮ್ಮಪ್ಪ, ಟಿ.ರುದ್ರಮುನಿ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link