ತುಮಕೂರು

ವಸತಿ ರಹಿತ, ನಿವೇಶನ ರಹಿತರಿಗೆ ಸೂರು ಕಲ್ಪಿಸುವುದಕ್ಕೆ ಒತ್ತಾಯಿಸಿ ಸಿಪಿಐ ರಾಜ್ಯಮಂಡಳಿ ವತಿಯಿಂದ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದ್ದು, ಈಗಾಗಲೇ ಬಳ್ಳಾರಿಯಿಂದ ಹೊರಟ ಜಾಥಾವು ಮಾ.17ಕ್ಕೆ ಶಿರಾಕ್ಕೆ ಬಂದು ತಲುಪಲಿದೆ ಎಂದು ಸಿಪಿಐ ಮುಖಂಡ ಎನ್.ಶಿವಣ್ಣ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ನಿರ್ಮಾಣಕ್ಕೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಕನಿಷ್ಠ ಐದು ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಫೆಬ್ರುವರಿ 2ರಂದು ಬಳ್ಳಾರಿಯಿಂದ ಬೆಂಗಳೂರಿನವರೆಗೆ 921 ಕಿಮೀ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಈ ಜಾಥಾ ಹನ್ನೊಂದು ದಿನ ಸಂಚರಿಸಲಿದೆ ಎಂದರು.
17ನೆ ಮಾರ್ಚ್ಗೆ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಡ್ಯಾಗೇರಹಳ್ಳಿಗೆ ಪ್ರವೇಶಿಸುವ ಜಾಥಾ ಅಲ್ಲಿಂದ ಯರವರಹಳ್ಳಿ, ಹೊಸೂರು, ಸಿದ್ದಾಪುರ, ಬೇವಿನಹಳ್ಳಿ, ಹೊನ್ನೇನಹಳ್ಳಿ, ಗೌಡಗೆರೆ, ಕಗ್ಗಲೋಡು, ಭೂತಕಾಟನಹಳ್ಳಿ ಹೀಗೆ ಮಧುಗಿರಿ, ಕೊರಟಗೆರೆ ನಂತರ ತುಮಕೂರಿಗೆ ಆಗಮಿಸಲಿದೆ. ಇಲ್ಲಿಂದ ನೆಲಮಂಗಲದ ಗೊಲ್ಲಹಳ್ಳಿ ರೈಲ್ವೇ ನಿಲ್ದಾಣದ ಬಳಿ ಸಮಾವೇಶಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರದ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಮೂವತ್ತು ಲಕ್ಷ ಮಂದಿ ನಿವೇಶನ ಹಾಗೂ ವಸತಿ ರಹಿತರು ನೋದಂಣಿ ಮಾಡಿಕೊಂಡಿದ್ದಾರೆ, ಸಿಎಂ ಯಡಿಯೂರಪ್ಪ ಅವರು ನೋದಂಣಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅವಕಾಶ ಕಲ್ಪಿಸಿರುವುದು ಗ್ರಾಮ ಪಂಚಾಯತಿ ಚುನಾವಣೆಯನ್ನು ಗುರಿಯಾಗಿಸಿಕೊಂಡಂತಿದೆ. ಇದು ಚುನಾವಣಾ ಪ್ರೇರಿತವಾಗದೆ, ತಾಲ್ಲೂಕು ಮಟ್ಟ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವರದಿಗಳ ಪ್ರಕಾರ ಅಂದಾಜು 30 ಲಕ್ಷ ಜನ ನಿವೇಶರಹಿತರಿದ್ದಾರೆ. ನೋಂದಣಿಯಾಗದೆ ಇರುವವರು ಸೇರಿದರೆ ಅಂದಾಜು 60 ಲಕ್ಷಕ್ಕೂ ಹೆಚ್ಚಿದ್ದಾರೆ. ಸಂವಿಧಾನದ ಆಶಯದಂತೆ ಸೂರು ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ರಾಜ್ಯದಲ್ಲಿ ಎರಡು ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಸಚಿವ ಸೋಮಣ್ಣ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ ನೀಡಿರುವ ಆಶ್ವಾಸನಗಳು ಆಶ್ವಾಸನೆಗಳಾಗಿಯೆ ಉಳಿಯಲಿದೆ ಎಂದರು.
ಇದೀಗ ಎಲ್ಲರಿಗೂ ಸೂರು ಕಲ್ಪಿಸಲು ಜಾಗವಿಲ್ಲ ಎಂದು ಸರ್ಕಾರ ಹೇಳುತ್ತಿದೆ, ಡಾ.ಬಾಲಸುಬ್ರಮಣ್ಯಂ ಅವರ ವರದಿ ಪ್ರಕಾರ ಒತ್ತುವರಿಯಾಗಿರುವ 40ಸಾವಿರ ಎಕರೆ ಸರ್ಕಾರದ ಜಾಗವನ್ನು ತೆರವುಗೊಳಿಸಬೇಕಿದೆ. ಅದನ್ನು ತೆರವುಗೊಳಿಸಿದರೆ ತಳಸಮುದಾಯ ಗಳಿಗೆ ವಸತಿ ನೀಡಲು ಅನುಕೂಲವಾಗಲಿದೆ. ಅಲ್ಲದೆ ವಸತಿ ರಹಿತರ ನೋಂದಣಿಗೆ ನೀಡಿರುವ ಸಮಾಯಾವಕಾಶ ಕಡಿಮೆಯಿದ್ದು, ಅದನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ ಜಿಲ್ಲೆಯಲ್ಲಿ ಒಂದು ಲಕ್ಷ ಮೂವತ್ತೈದು ಸಾವಿರ ನಿವೇಶನ, ವಸತಿ ರಹಿತರು ನೋಂದಣಿ ಮಾಡಿಕೊಂಡಿದ್ದು, ನೋಂದಾಯಿಸಿಕೊಂಡಿರುವ ಅಂಗವಿಕಲರಿಗೂ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಜಿಲ್ಲಾಡಳಿತ ಕಲ್ಪಿಸುವಲ್ಲಿ ವಿಫಲವಾಗಿದೆ. ಕಾಲ್ನಡಿಗೆ ಜಾಥಾ ಆರಂಭಗೊಂಡ ಒಂದು ತಿಂಗಳ ನಂತರ ಸರ್ಕಾರ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಸರ್ಕಾರ ಹೋರಾಟಕ್ಕೆ ಹೆದರಿ ನೋಂದಣಿಗೆ ಅವಕಾಶ ಕಲ್ಪಿಸಿದೆ, ಜಿಲ್ಲೆಯ ನಗರ ಪ್ರದೇಶದಲ್ಲಿ ವಸತಿ, ನಿವೇಶನಕ್ಕೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 60 ಮಾತ್ರ ಇದ್ದು, ನಗರ ಪ್ರದೇಶದಲ್ಲಿ ವಾಸಿಸುವವರಿಗೆ ನಿವೇಶನ ಸಿಗುವ ಭರವಸೆ ಇಲ್ಲ ಎಂದು ಹೇಳಿದರು.
ಡಾ.ಬಾಲಸುಬ್ರಮಣ್ಯಂ ವರದಿಯಲ್ಲಿ ಜಿಲ್ಲೆಯಲ್ಲಿ 11 ಸಾವಿರ ಸರ್ಕಾರಿ ಭೂಮಿ ಒತ್ತುವರಿಯಾಗಿದೆ, ಅದನ್ನು ತೆರವುಗೊಳಿಸಿದರೆ ಎಲ್ಲರಿಗೂ ನಿವೇಶನ, ಸೂರು ಒದಗಿಸಬಹುದಾಗಿದೆ. ವರ್ಷಕ್ಕೆ 2ಲಕ್ಷ ಮನೆ ನಿರ್ಮಿಸುವುದಾಗಿ ಹೇಳಿರುವ ಬಿಎಸ್ ವೈ ಈ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 28 ಸಾವಿರ ಕೋಟಿ ಹಣವನ್ನು ಎಲ್ಲಿಂದ ತರುತ್ತಾರೆ. ಅದಕ್ಕಾಗಿ 2 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟಿದ್ದು, ಇದರಿಂದ 2 ಲಕ್ಷ ಮನೆಗಳ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಇನ್ನೂ ಮೂರು ವರ್ಷ ಆಡಳಿತ ನಡೆಸಬಹುದು. ಇವರು ಒಂದು ವರ್ಷದಲ್ಲಿ 2 ಲಕ್ಷ ಮನೆ ಕಟ್ಟಿಕೊಡುತ್ತೇವೆ ಎಂದರೂ 36 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಸುಮಾರು 18 ವರ್ಷ ಬೇಕಾಗಿತ್ತದೆ. ಇವರು ಹೇಳುವ ಪ್ರಕಾರ ನಿವೇಶನ ರಹಿತರಿಗೆ ಮನೆಗಳು ಸಿಗುತ್ತವೆ ಎಂಬ ನಂಬಿಕೆ ಇಲ್ಲವಾಗಿದೆ ಎಂದರು.
ಸಿರಾ ತಾಲ್ಲೂಕಿನ ಡ್ಯಾಗೇರಹಳ್ಳಿಯಲ್ಲಿ ಜಾಥಾವನ್ನು ಸ್ವಾಗತಿಸಲಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಜಾಥದಲ್ಲಿಯೇ ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುವುದು. ಒಂದು ವೇಳೆ ಯಾರಾದರೂ ನಿವೇಶನ ಕೊಡಿಸುವುದಾಗಿ ಅಮಾಯಕರನ್ನು ದುರುಪಯೋಗ ಪಡಿಸಿಕೊಂಡರೆ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಮನೆ ಕಟ್ಟಲು ನೀಡುವ ಸಹಾಯಧನವನ್ನು ಐದು ಲಕ್ಷ ರೂ ನೀಡಬೇಕು ಹಾಗೂ ಬಜೆಟ್ನಲ್ಲಿ ನೀಡಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಮುಖಂಡರಾದ ಶಶಿಕಾಂತ, ಸತ್ಯನಾರಾಯಣ, ಶಬ್ಬೀರ್, ಕಲಾವತಿ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








