ಹೊಸವರ್ಷದ ಸಂಭ್ರಮದಲ್ಲಿ ಮತ್ತೆ ಮರುಕಳಿಸಿದ ಅಸಭ್ಯ ವರ್ತನೆ ಪ್ರಕರಣಗಳು

ಬೆಂಗಳೂರು

   ಉತ್ಸಾಹ,ಉಲ್ಲಾಸ ಹರ್ಷೊದ್ಗಾರ, ಕುಣಿತ, ಮೋಜು ಮಸ್ತಿಯೊಂದಿಗೆ 2020ರ ಹೊಸ ವರ್ಷವನ್ನು ಮಂಗಳವಾರ ಮಧ್ಯರಾತ್ರಿ ಸಂತೋಷದಿಂದ ಬರಮಾಡಿಕೊಳ್ಳುವ ವೇಳೆ ನೈತಿಕತೆಯನ್ನು ಮರೆತು ರಸ್ತೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿರುವ ಘಟನೆಗಳು ನಗರದಲ್ಲಿ ನಡೆದಿವೆ.

    ಚರ್ಚ್ ಸ್ಟ್ರೀಟ್ ಎಂಜಿ ರಸ್ತೆ,ಕೋರಮಂಗಲ ಇನ್ನಿತರ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ನಡೆದಿರುವ ಅಸಭ್ಯ ವರ್ತನೆಯನ್ನು ನೋಡಿದರೆ ಮುಂದಿನ ವರ್ಷ ಎಂಜಿ ರಸ್ತೆ ಅಲ್ಲದೇ ಸುತ್ತಮುತ್ತಲ ರಸ್ತೆಗಳಲ್ಲಿ ಹೊಸ ವರ್ಷ ಆಚರಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

   ಚರ್ಚ್ ಸ್ಟ್ರೀಟ್ ಬಳಿ ಮದ್ಯದ ಅಮಲಿನಲ್ಲಿ ಎಲ್ಲಿದ್ದೇವೆ ಎನ್ನುವುದನ್ನು ಮರೆತ ಯುವ ಜೋಡಿಯೊಂದು ಅರೆಬೆತ್ತಲೆಯಾಗಿ ರೊಮ್ಯಾನ್ಸ್ ಮಾಡಿದ್ದಾರೆ.ಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಜೋಡಿ ರೊಮ್ಯಾನ್ಸ್‌ನಲ್ಲಿ ತೊಡಗಿದ್ದನ್ನು ಕಂಡ ಪೊಲೀಸರು ಅವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

   ಮತ್ತೊಂದೆಡೆ ಹೊಸ ವರ್ಷದ ಪಾರ್ಟಿ ಮುಗಿಸಿ ಚರ್ಚ್ ಸ್ಟ್ರೀಟ್‌ನ ಪಬ್ ನಿಂದ ಹೊರ ಬಂದ ಜೋಡಿಯೊಂದು ರಸ್ತೆ ಮಧ್ಯದಲ್ಲಿ ನಿಂತು ಲಿಪ್‌ಲಾಕ್ ಮಾಡಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ.ಚರ್ಚ್ ಸ್ಟ್ರೀಟ್ ಎಂಪೇರ್ ಹೋಟೆಲ್ ಮುಂಭಾಗ ಪಾರ್ಟಿ ಮುಗಿಸಿ ಪ್ರಿಯಕರನ ಜೊತೆ ಯುವತಿ ವಾಪಸ್ ಹೋಗುತ್ತಿದ್ದಾಗ ಯುವತಿಯ ಗುಪ್ತಾಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಹಿಂಬದಿಯಿಂದ ಬಂದು ಗುಪ್ತಾಂಗ ಮುಟ್ಟಿದ ಯುವಕನಿಗೆ ತಲೆಗೆ ಆಕೆ ಹೊಡೆದಿದ್ದು ಅಲ್ಲಿಂದ ಯುವಕ ಪರಾರಿಯಾಗಿದ್ದಾನೆ.

ಮಂಗಳಮುಖಿ ಕಾಟ

     ಹೊಸ ವರ್ಷದ ಸಂಭ್ರಮದಲ್ಲಿ ಸಾವಿರಾರು ಮಂದಿ ಎಂಜಿ ರಸ್ತೆಯಲ್ಲಿ ಸೇರಿದ್ದಾಗ ಕುಡಿದ ಅಮಲಿನಲ್ಲಿ ಮಂಗಳಮುಖಿ ರಂಪಾಟ ಮಾಡಿದ್ದಾಳೆ. ಮಂಗಳಮುಖಿ ಕಂಡ ಕಂಡವರ ಕೆನ್ನೆಗೆ ಬಾರಿಸಿ ಪುಂಡಾಟ ಮೆರೆದಿದ್ದಾಳೆ. ರಸ್ತೆಯಲ್ಲಿ ಬರುವವರನ್ನೆಲ್ಲಾ ತಬ್ಬಿಕೊಳ್ಳಲು ಮುಂದಾಗಿದ್ದು, ಪೊಲೀಸರಿಗೂ ಅವಾಜ್ ಹಾಕಿ ಬಟ್ಟೆ ತೆಗೆದು ಅಸಭ್ಯವಾಗಿ ವರ್ತಿಸಿದ್ದಾಳೆ.ಮಂಗಳಮುಖಿ ವರ್ತನೆ ನೋಡಿ ಪೊಲೀಸರು ಇಲ್ಲಿಂದ ಹೋಗಿ ಎಂದು ಎಷ್ಟೇ ಮನವೊಲಿಸಿದರು ಮೊಂಡುತನ ಪ್ರದರ್ಶಿಸಿದ್ದಾಳೆ. ಕೊನೆಗೂ ಮಹಿಳಾ ಪೊಲೀಸರು ಮಂಗಳಮುಖಿಯನ್ನು ಕಳುಹಿಸಿದರು.

ಬ್ಯಾಗ್ ಕಂಡು ಆತಂಕ

     ಹೊಸ ವರ್ಷ ಆಚರಣೆಗೆ ಸಾವಿರಾರು ಮಂದಿ ಸೇರಿದ್ದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಮಧ್ಯರಾತ್ರಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಶಂಕಾಸ್ಪದವಾಗಿದ್ದ ಬ್ಯಾಗ್ ಕಂಡು ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದರು.

      ಅಲ್ಲದೆ ಯಾರು ಕೂಡ ಈ ರಸ್ತೆಗೆ ಬರಬೇಡಿ ಎಂದು ಸೂಚನೆ ನೀಡಿದರು ಭದ್ರತೆ ಕೈಗೊಂಡರು ಚರ್ಚ್ ಸ್ಟ್ರೀಟ್ ರಸ್ತೆಗೆ ಬರುವವರನ್ನು ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಂತೆ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿತ್ತು.ಅನುಮಾನಾಸ್ಪದ ಬ್ಯಾಗ್ ಪರಿಶೀಲಿಸಿದಾಗ ಪೊಲೀಸರಿಗೆ ಖಾಲಿ ಟಿಫನ್ ಬಾಕ್ಸ್ ಪತ್ತೆಯಾಗಿದೆ.

     ಯಾರೋ ಬಿಟ್ಟು ಹೋಗಿರುವ ಖಾಲಿ ಬಾಕ್ಸ್ ಬ್ಯಾಗ್‌ನಿಂದ ಕೆಲಕಾಲ ನಿರ್ಮಾಣವಾಗಿದ್ದ ಆತಂಕಕ್ಕೆ ತೆರೆ ಬಿತ್ತು.ಆಗ ಪೊಲೀಸರು ಹಾಗೂ ಜನ ನಿಟ್ಟುಸಿರು ಬಿಟ್ಟರು.

ಚಪ್ಪಲಿ ಸೇವೆ

      ಒಪೆರಾ ಜಂಕ್ಷನ್ ಹೌಸ್ ನಲ್ಲಿ ಎದುರಿನಿಂದ ಬಂದ ಯುವಕ, ಯುವತಿಯ ಮೈಗೆ ಕೈ ಹಾಕಿದ್ದಾರೆ. ಆತ ಯಾರು ಎಂಬುದನ್ನು ಅರಿತುಕೊಂಡ ಯುವತಿ ಆ ಬೀದಿ ಕಾಮುಕನಿಗೆ ಸ್ಥಳದಲ್ಲೇ ಚಪ್ಪಲಿ ಸೇವೆ ಮಾಡಿದ್ದಾಳೆ. ಇತ್ತ ಸ್ನೇಹಿತನ ಜೊತೆ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಯುವತಿಗೆ, ಎದುರಿನಿಂದ ಬಂದಾತ ಆಕೆಯ ಮೈ ಮುಟ್ಟಿದ್ದಾನೆ. ಆ ಯುವತಿ ತಿರುಗಿ ಆತನಿಗೆ ಹೊಡೆಯೋ ಪ್ರಯತ್ನ ಕೂಡ ಮಾಡಿದ್ದಾಳೆ. ಆದರೆ ಜೊತೆಯಲ್ಲಿದ್ದ ಸ್ನೇಹಿತ ಆಕೆಯನ್ನ ತಡೆದು ಕರೆದೊಯ್ದ ಪ್ರಸಂಗ ನಡೆದಿದೆ.
ಇದಲ್ಲದೇ ಪಾನಮತ್ತಳಾಗಿದ್ದ ಯುವತಿ ಹಿಂಬದಿ ಮುಟ್ಟಿದ್ದ ಯುವಕನಿಗೂ ಗೂಸಾ ನೀಡಿದ್ದಾರೆ ತನ್ನ ಪಾಡಿಗೆ ತಾನು ಕುಣಿಯುತ್ತಾ ಹೋಗುತ್ತಿದ್ದಾಗ ಮತ್ತಿಬ್ಬರು ಮುಟ್ಟಿದರು. ಅವರಿಗೂ ಯುವತಿ ಸಖತ್ ಗೂಸಾ ನೀಡಿದ್ದಾಳೆ. ಕೊನೆಗೆ ಆಕೆಯನ್ನ ಕೆಳಗೆ ತಳ್ಳಿ

ಕಾಮುಕರು ಬೀಳಿಸಿ ಪರಾರಿಯಾಗಿದ್ದಾರೆ

       ಬ್ರಿಗೇಡ್ ರಸ್ತೆಯಲ್ಲಿ ಮನೆಗೆ ಹೋಗಲು ಹೊರಟು ನಿಂತಿದ್ದ ಯುವತಿಯನ್ನ ಮೂವರು ಕಾಮುಕರು ಚುಡಾಯಿಸ್ತಾ ನಿಂತಿದ್ದರು. ಹೂವು ಕೊಟ್ಟು ಆಕೆಯನ್ನ ಪ್ರಪೋಸ್ ಮಾಡುತ್ತಾ, ಮಾನಸಿಕ ಕಿರಿಕಿರಿ ನೀಡುತ್ತಿದ್ದರು. ಕ್ಯಾಮೆರಾದಿಂದ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಗೊತ್ತಾದ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಕಾಮುಕರಿಗೆ ಶೋಧ ಕೋರಮಂಗಲದ 5ನೇ ಬ್ಲಾಕ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಕೋರಮಂಗಲ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಯುವತಿಯೋರ್ವಳು ಸಮೀಪದಲ್ಲೇ ಕರ್ತವ್ಯ ನಿರತರಾಗಿದ್ದ ಪೊಲೀಸರ ಎದುರು ಕಣ್ಣೀರು ಹಾಕಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ತಿಳಿಸಿದ್ದಾಳೆ. ಯುವತಿ ದೂರು ನೀಡುತ್ತಿದ್ದಂತೆ ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

     ಸಂತ್ರಸ್ಥ ಯುವತಿ ಜೊತೆ ಡಿಸಿಪಿ ಇಶಾ ಪಂಥ್ ಮಾತುಕತೆ ನಡೆಸಿದ್ದು,ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಾಮುಕರ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳ ಪರಿಶೀಲನೆ ನಡೆಸಿದ್ದಾರೆ.

    ಬ್ರಿಗೇಡ್ ರಸ್ತೆಯಲ್ಲಿ ಸಹ ಹೊಸ ವರ್ಷದ ಜೋಶ್‌ನಲ್ಲಿದ್ದ ಯುವತಿಯೊಬ್ಬಳು ನೃತ್ಯ ಮಾಡುತ್ತಿರುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

     ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಉತ್ತರ ಭಾರತದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಬಾಯಿ ಹಾಗೂ ಮೂಗಿನಲ್ಲಿ ರಕ್ತ ಬರುವ ಹಾಗೆ ಯುವಕನನ್ನು ಥಳಿಸಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ನೇಹಿತನ ಸಹಾಯದಿಂದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕಮೀಷನರ್ ಮೆಚ್ಚುಗೆ

     ಹೊಸ ವರ್ಷದ ಆಚರಣೆ ವೇಳೆ ನಡೆದಿರುವ ಘಟನೆಗಳ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಇನ್ನಿತರ ಕಡೆಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಂದಿ ಸೇರಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ತಿಳಿಸಿದರು.

     ಅಸಭ್ಯವಾಗಿ ವರ್ತಿಸಿದ ಕಾಮುಕರಿಗೆ ಚಪ್ಪಲಿಯಿಂದ ಹೊಡೆದ ಯುವತಿಯನ್ನು ಭಾಸ್ಕರ್‌ರಾವ್ ಹೊಗಳಿ ನಗರದ ಜನತೆಗೆ ಹೊಸ ವರ್ಷದ ಶುಭಾಷಯ ಕೋರಿದ್ದಾರೆ.ಹೊಸ ವರ್ಷದ ಸಂಭ್ರಮದ ವೇಳೆ ನಿನ್ನೆ ರಾತ್ರಿ ನಗರದಲ್ಲಿ ಕುಡಿದು ವಾಹನ ಚಲಾಯಿಸಿದ 426 ಮಂದಿ ಚಾಲಕರನ್ನು ಪತ್ತೆ ಹಚ್ಚಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ .ಪೂರ್ವ ವಿಭಾಗದಲ್ಲಿ 99, ಪಶ್ಚಿಮ ವಿಭಾಗದಲ್ಲಿ 254, ಉತ್ತರ ವಿಭಾಗದಲ್ಲಿ 73 ಸೇರಿ 426 ಪಾನಮತ್ತ ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸಿ ಚಾಲಕರ ಮೇಲೆ ಕ್ರಮಕೈಗೊಳ್ಳಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link