ಅಸಹಾಯಕರಿಗೆ ನೆರವಾಗುವುದು ಶ್ಲಾಘನೀಯ ಕಾರ್ಯ

ತುಮಕೂರು

        ಕೊರೋನ ವೈರಸ್ ಹರಡುವ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಈ ವೇಳೆ ಜಿಲ್ಲೆಯಲ್ಲಿ ಅಸಹಾಯಕರು ಯಾವುದೇ ರೀತಿಯ ಕೊರತೆಯನ್ನು ಅನುಭವಿಸಬಾರದು ಎಂದು ಆರ್.ಆರ್. ಅಭಿಮಾನಿ ಬಳಗವು ಪ್ರತಿನಿತ್ಯ ದಾಸೋಹದ ರೀತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕರು ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತಿಳಿಸಿದರು.

      ನಗರದ ಬೀರೇಶ್ವರ ಕನ್ವೆಷನ್ ಹಾಲ್‍ನಲ್ಲಿ ಬುಧವಾರ ಆರ್.ಆರ್. ಅಭಿಮಾನಿ ಬಳಗದಿಂದ ನಿರಾಶ್ರಿತರಿಗೆ, ಅಸಹಾಯಕರಿಗೆ ಹಮ್ಮಿಕೊಂಡಿದ್ದ ಊಟದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರಿಗೆ ಏನು ಅವಶ್ಯಕತೆ ಇದೆ ಎಂಬುದನ್ನು ಅರಿತು, ಯಾರೂ ತೊಂದರೆಯಲ್ಲಿ ಸಿಕ್ಕಿಕೊಳ್ಳಬಾರದೆಂಬ ದೃಷ್ಠಿಯಿಂದ ಊಟದ ವ್ಯವಸ್ಥೆಯನ್ನು ಆರ್.ಆರ್. ಅಭಿಮಾನಿ ಬಳಗ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

     ಕೊರೋನ ವೈರಸ್ ಭೀತಿಯಿಲ್ಲದೇ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ತಮ್ಮ ಜೀವನವನ್ನು ಪಣಕ್ಕಿಟ್ಟು ಧೈರ್ಯವಾಗಿ ರೋಗಿಗಳಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದ್ದಾರೆ ನಿಜಕ್ಕೂ ಅವರನ್ನು ಅಭಿನಂಧಿಸಬೇಕು. ಹೋಟೆಲ್‍ಗಳು ಬಂದಾಗಿ ಅವರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಅವರನ್ನೇ ಕೇಂದ್ರವಾಗಿಟ್ಟುಕೊಂಡು ಆರ್ ಆರ್ ಅಭಿಮಾನಿ ಬಳಗ ಇಂದು ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ.

      ಇಲ್ಲಿ ಕೆಲಸ ಮಾಡುತ್ತಿರುವ ಯುವಕರು ಸ್ವಯಂ ಪ್ರೇರಿತರಾಗಿ ಬಂದು ಸ್ವಯಂ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಹೆಚ್ಚಿನ ಸೇವಾ ಮನೋಭಾವ ಈ ಯುವಕರಲ್ಲಿ ಬೆಳೆಯಲಿ ಎಂಬುದು ನನ್ನ ಆಶಯ ಎಂದು ಹೇಳಿದರು.ಇಂದು ಕೊರೋನ ವೈರಸ್ ಬಂದು ಯಾವುದೋ ಒಂದು ಸಮುದಾಯವನ್ನು ದ್ವೇಷ ಮಾಡುವ ರೀತಿಯಲ್ಲಿ ಇಂದು ಬೆಳವಣಿಗೆಗಳಾಗುತ್ತಿವೆ. ಇದು ಆಗಬಾರದು, ಯಾರದ್ದು, ತಪ್ಪು ಇರುತ್ತದೋ ಆ ತಪ್ಪನ್ನು ದ್ವೇಷ ಮಾಡಬೇಕೆ ಹೊರತು ತಪ್ಪು ಮಾಡಿದವರನ್ನಲ್ಲ, ಯಾರೋ ಕೆಲವು ಜನರರಿಂದ ತೊಂದರೆಯಾಗಿರಬಹುದು, ಆದರೆ ಸಮಾಜದಲ್ಲಿ ಜಾತಿ ನೋಡಿ ರೋಗ ಬರುವುದಿಲ್ಲ, ಬೇರೆ ಬೇರೆ ಕಾರಣಗಳಿಂದ ರೋಗ ಬರುತ್ತದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದೂಷಣೆ ಮಾಡುವಂತಹದ್ದು ತರವಲ್ಲ, ಇಂದು ಸುಳ್ಳು ಸುದ್ದಿಗಳನ್ನು ಹರಡುವಂತಹದ್ದು, ಒಂದು ಜಾತಿಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ದ್ವೇಷ ಮಾಡುವಂತಹದ್ದು ಸರಿಯಾದುದಲ್ಲ ಎಂದರು.

     130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಕೊರೋನ ವೈರಸ್‍ನಿಂದ ಸಾವಾಗಲೀ, ಸೋಂಕಿತರಾಗಲೀ ಕಡಿಮೆ, ಕೇವಲ ಕರ್ನಾಟಕ ರಾಜ್ಯದ ಜನಸಂಖ್ಯೆಯಷ್ಟಿರುವ ಸ್ಪೇನ್ ದೇಶದಲ್ಲಿ ಪ್ರಪಂಚದಲ್ಲೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನಮ್ಮ ದೇಶದಲ್ಲಿ ನಮ್ಮ ಜನರಲ್ಲಿರುವ ಮಾನಸಿಕ ಸ್ಥೈರ್ಯ ಮತ್ತೆ ರೋಗ ರುಜಿನಗಳನ್ನು ತಡಿಯುವಂತಹ ಶಕ್ತಿ ಭಗವಂತ ಕೊಟ್ಟಿರುವಂತಹದ್ದು, ನಾವೇನು ಈ ಶಕ್ತಿ ಬೆಳೆಸಿಕೊಳ್ಳಬೇಕೆಂದು ಮಾತ್ರೆ ತೆಗೆದುಕೊಂಡು ಬೆಳೆಸಿಕೊಂಡಿದ್ದಲ್ಲ, ಸ್ವಾಭಾವಿಕವಾಗಿ ರೋಗ ನಿರೋಧಕ ಶಕ್ತಿ ನಮ್ಮಲ್ಲಿದೆ. ಕೊರೊನಾ ಪ್ರಪಂಚದಿಂದಲೇ ತೊಲಗಬೇಕು, ಎಲ್ಲಾ ಜನರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ಸೃಷ್ಠಿಯಾಗಬೇಕೆನ್ನುವುದು ನಮ್ಮ ಆಶಯ ಎಂದರು.

       ಎರಡು ತಿಂಗಳ ಪಡಿತರ ಒಟ್ಟಿಗೆ ವಿತರಣೆ ಮಾಡಲು ಮುಖ್ಯಮಂತ್ರಿಗಳೇ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ವಿಎಸ್‍ಎಸ್‍ಎನ್ ಸೊಸೈಟಿಗಳಲ್ಲಿ ಪಡಿತರ ವಿತರಣೆಯಾಗುತ್ತಿದೆ. ಇದರ ಜೊತೆಗೆ ಮಾಸ್ಕ್ ಧರಿಸಿ ಪಡಿತರ ನೀಡಬೇಕೆಂದು ಸೂಚನೆ ಕೂಡ ನೀಡಲಾಗಿದ್ದು, ಈಗಾಗಲೇ 1 ಲಕ್ಷ ಮಾಸ್ಕನ್ನು ತರಿಸಿ 50 ಸಾವಿರ ಮಾಸ್ಕನ್ನು ಮಧುಗಿರಿ ತಾಲ್ಲೂಕಿನಲ್ಲಿ ಸೊಸೈಟಿ ಮೂಲಕ ಹಂಚಲಾಗಿದೆ. ಇನ್ನುಳಿದ 50 ಸಾವಿರ ಮಾಸ್ಕನ್ನು ಇಡೀ ಜಿಲ್ಲೆಯಾದ್ಯಂತ ಸೊಸೈಟಿಗಳ ಮೂಲಕ ಹಂಚಲಾಗುತ್ತಿದೆ. ಇನ್ನೂ ಎಷ್ಟೇ ಮಾಸ್ಕ್ ಬೇಡಿಕೆ ಬಂದರೂ ಸಹ ಮಾಸ್ಕ್ ಪೂರೈಸಲು ನಾವು ಸಿದ್ದರಿದ್ದೇವೆ ಎಂದು ನುಡಿದರು.

ಶ್ಲಾಘನೀಯ

         ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕೆ.ಎನ್. ರಾಜಣ್ಣ ಮತ್ತು ರಾಜೇಂದ್ರ ಬಳಗದ ವ್ಯವಸ್ಥೆ ಬಹಳ ಅತ್ಯುತ್ತಮವಾಗಿ ನಡೆಯುತ್ತಿದೆ. ಪೊಲೀಸರಿಗೆ, ಆಸ್ಪತ್ರೆ ವೈದ್ಯರಿಗೆ, ಸಿಬ್ಬಂದಿವರ್ಗದವರಿಗೆ, ನಾನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ, ಬಡವರಿಗೆ, ಕೂಲಿಕಾರ್ಮಿಕರಿಗೆ ಯಾರಿಗೆ ಊಟವಿಲ್ಲವೋ ಅಂತಹವರಿಗೆ ಪ್ರತಿನಿತ್ಯ 2000 ಮಂದಿಗೆ ಊಟದ ವ್ಯವಸ್ಥೆಯನ್ನು ಆರ್.ಆರ್. ಅಭಿಮಾನಿ ಬಳಗ ಮಾಡುತ್ತಿರುವ ಈ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದರು.ಕೊರೋನ ಪಿಡುಗನ್ನು ದೂರ ಮಾಡಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸಬೇಕು, ಇದೇ ರೀತಿ ರಾಜಣ್ಣ ಮತ್ತು ರಾಜೇಂದ್ರ ಅವರ ಸೇವೆ ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದರು.

      ಮಲೇರಿಯಾ ಔಷಧಿಯನ್ನು ಬೇರೆ ದೇಶದವರು ಕೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಸವರಾಜು, ನಮ್ಮ ದೇಶದಲ್ಲಿ ಮಲೇರಿಯಾ ಔಷಧಿ ಅಗತ್ಯಕ್ಕಿಂತ ಹೆಚ್ಚಿದ್ದು, ದಿನಕ್ಕೆ 1 ಲಕ್ಷ ಮಂದಿಗೆ ಔಷಧಿ ತಯಾರು ಮಾಡುವಂತಹ ಸಾಮಥ್ರ್ಯ ನಮ್ಮ ದೇಶ ಹೊಂದಿದೆ. ಬರೀ ಅಮೇರಿಕಾ ದೇಶಕ್ಕಷ್ಟೇ ಅಲ್ಲ ಇಡೀ ಪ್ರಪಂಚಕ್ಕೇ ಸರಬರಾಜು ಮಾಡುವಷ್ಟು ಔಷಧಿಯನ್ನು ನಮ್ಮ ಭಾರತ ದೇಶದಲ್ಲಿ ತಯಾರಾಗುತ್ತದೆ ಎಂದು ಹೇಳಿದರು.

      ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಎಲ್ಲಾ ಹೋಟೆಲ್‍ಗಳು ಬಂದ್ ಆಗಿರುವ ಕಾರಣ ಕಳೆದ ಮಾರ್ಚ್ 26 ರಿಂದಲೂ ಆರ್.ಆರ್. ಅಭಿಮಾನಿ ಬಳಗದಿಂದ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಸಿಬ್ಬಂದಿ, ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿವರ್ಗದವರಿಗೆ, ಹೋಂಗಾಡ್ರ್ಸ್‍ಗಳಿಗೆ ನಿರಂತರವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.ಇದರ ಜೊತೆಗೆ ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನಿರಾಶ್ರಿತರು, ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.

       ಈ ವೇಳೆ ಆರ್.ಆರ್.ಬಳಗದ ಆರ್.ರವೀಂದ್ರ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‍ಕುಮಾರ್, ಆರ್‍ಐ ಜಯಪ್ರಕಾಶ್, ಕಲ್ಲಳ್ಳಿ ದೇವರಾಜ್, ಆರ್.ಆರ್. ಅಭಿಮಾನಿ ಬಳಗದ ರಾಜೇಶ್ ದೊಡ್ಮನೆ, ಶಶಿ ಹುಲಿಕುಂಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link