ಪೌರಕಾರ್ಮಿಕರ ಕೆಲಸದ ವೇಳೆಯಲ್ಲಿ ಬದಲಾವಣೆ

ತುಮಕೂರು

     ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು ಈ ಕಾರಣದಿಂದ ತಮ್ಮ ಸುರಕ್ಷತೆಗೂ ಗಮನ ಕೊಡಬೇಕೆಂದು ಪೌರಕಾರ್ಮಿಕರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು, ಅವರ ಕೆಲಸದ ಅವಧಿಯನ್ನು ಮೊಟಕುಗೊಳಿಸಿ ಆದೇಶ ಹೊರಡಿಸಿದೆ.

      ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ (ಪಿ.ಕೆ.ಎಸ್.) ದಿನನಿತ್ಯದ ಕರ್ತವ್ಯದ ಅವಧಿಯಲ್ಲಿ ಬದಲಾವಣೆ ಆಗಿದ್ದು, ಏಪ್ರಿಲ್ 1 ರಿಂದಲೇ ಜಾರಿಗೆ ಬಂದಿದೆ.ಬೆಳಗ್ಗೆ 6 ರಿಂದ ಬೆಳಗ್ಗೆ 10-30 ರವರೆಗೆ ಮಾತ್ರ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುವರು. ಈ ಹಿಂದೆ ಇದ್ದಂತೆ ಮಧ್ಯಾಹ್ನದವರೆಗಿನ ಕೆಲಸ ಈಗ ಇರುವುದಿಲ್ಲ. ಬೆಳಗ್ಗೆ ತಮ್ಮ ಕರ್ತವ್ಯದ ಸ್ಥಳಕ್ಕೆ ಆಗಮಿಸಿ, ನಿಗದಿತ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿ ನಿರ್ಗಮಿಸುವರು.

ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ

      “ಪಾಲಿಕೆಯಲ್ಲಿ ಪ್ರಸ್ತುತ 507 ಪೌರಕಾರ್ಮಿಕರು (ಖಾಯಂ ಮತ್ತು ನೇರ ಪಾವತಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈಗ ಪ್ರತಿಯೊಬ್ಬರಿಗೂ ಅವರು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಅವರ ದೈಹಿಕ ಉಷ್ಣಾಂಶವನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಲಾಗುತ್ತಿದೆ” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ತಿಳಿಸಿದ್ದಾರೆ.

     “ಸುರಕ್ಷತೆ ದೃಷ್ಟಿಯಿಂದ ಎಲ್ಲ ಪೌರಕಾರ್ಮಿಕರಿಗೂ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಗಮ್ ಬೂಟುಗಳನ್ನು ಒದಗಿಸಿದ್ದು, ಕರ್ತವ್ಯ ನಿರ್ವಹಿಸುವಾಗ ಎಲ್ಲರೂ ಅದನ್ನು ಧರಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 9 ಗಂಟಗೆ ಇವರೆಲ್ಲರಿಗೂ ಉಪಹಾರವನ್ನು ಸರಬರಾಜು ಮಾಡಲಾಗುತ್ತಿದೆ” ಎಂದರು.

    “ಪೌರಕಾರ್ಮಿಕರಿಗೆ ಫೆಬ್ರವರಿ ಮಾಸದವರೆಗೆ ವೇತನವನ್ನು ಪಾವತಿ ಮಾಡಲಾಗಿದೆ. ಮಾರ್ಚ್ ತಿಂಗಳ ವೇತನವನ್ನು ಸದ್ಯದಲ್ಲೇ ಪಾವತಿ ಮಾಡಲಿದ್ದು. ಪೌರಕಾರ್ಮಿಕರ ವೇತನ ಪಾವತಿಯಲ್ಲಿ ತುಮಕೂರು ಪಾಲಿಕೆಯು ಅಗ್ರಸ್ಥಾನದಲ್ಲಿದೆ” ಎಂದು ಡಾ.ನಾಗೇಶ್‍ಕುಮಾರ್ ಹೇಳಿದ್ದಾರೆ. ಮಿಕ್ಕಂತೆ ನಗರದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ