ದಾವಣಗೆರೆ:
ವಿದ್ಯಾರ್ಥಿಗಳ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು, ನಾವು ಪೊಲೀಸರು ನಿಮ್ಮ ವೀಡಿಯೋವನ್ನು ನಮ್ಮ ಮೇಲಾಧಿಕಾರಿಗಳಿಗೆ ನೀಡಬಾರದೆಂದರೆ, 10 ಸಾವಿರ ರೂ. ನೀಡಬೇಕು. ಇದಾಗದಿದ್ದರೆ, ನಿನ್ನ ಜತೆಯಲ್ಲಿರುವ ವಿದ್ಯಾರ್ಥಿನಿಯನ್ನು ನಮ್ಮ ಜೊತೆಗೆ ಕಳುಹಿಸಿಕೊಡಬೇಕೆಂದು ಬ್ಲಾಕ್‍ಮೇಲ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಡಿಸಿಐಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹರಿಹರ ತಾಲೂಕಿನ ಮಲೆಬೆನ್ನೂರು ನಿವಾಸಿಗಳಾದ ಎಂ.ವಜೀರ್ ಬಾಷಾ(34 ವರ್ಷ) ಹಾಗೂ ಅಬ್ದುಲ್ ಕರೀಂ(32) ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಭಾನುವಾರ ಕಾಲೇಜಿಗೆ ರಜೆ ಇದ್ದ ಕಾರಣಕ್ಕೆ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹರಿಹರ ತಾಲೂಕಿನ ದೇವರಬೆಳೆಕೆರೆ ಡ್ಯಾಂ ಬಳಿ ಹೋಗಿದ್ದರು. ಈ ವಿದ್ಯಾರ್ಥಿಗಳು ಜೊತೆಗಿರುವ ದೃಶ್ಯಗಳನ್ನು ಬಂಧಿತ ಆರೋಪಿಗಳು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.
ತಮ್ಮ ವೀಡಿಯೋ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗಳನ್ನು ವಿದ್ಯಾರ್ಥಿಗಳು ಏಕೆ ವೀಡಿಯೋ ಮಾಡಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಇವರಿಬ್ಬರು ನಾವು ಪೊಲೀಸರು, ನಿವಿಬ್ಬರು ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿಗಳು ನಾವು ಭಾನುವಾರ ರಜೆ ಇದ್ದ ಕಾರಣ ಡ್ಯಾಮ್ ನೋಡಲು ಬಂದಿರುವುದಾಗಿ ಹೇಳಿದಾಗ, ವೀಡಿಯೋ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯು ನಿಮ್ಮ ವೀಡಿಯೋವನ್ನು ನಮ್ಮ ಮೇಲಾಧಿಕಾರಿಗಳಿಗೆ ನೀಡಬಾರದು ಎಂದರೆ, ಹತ್ತು ಸಾವಿರ ರೂ. ನೀಡಬೇಕೆಂದು ಬ್ಲಾಕ್‍ಮೇಲ್ ಮಾಡಿದ್ದಾರೆ.
ಅಲ್ಲದೆ, ನಿಮಗೆ ಹಣಕೊಡಲಾಗದಿದ್ದರೆ, ನಿನ್ನೊಂದಿಗಿರುವ ವಿದ್ಯಾರ್ಥಿನಿಯನ್ನು ನಮ್ಮೊಂದಿಗೆ ಕಳುಹಿಸು ಎಂದು ವಿದ್ಯಾರ್ಥಿನಿಯನ್ನು ಪೊಲೀಸ್ ಎಂಬುದಾಗಿ ಹೇಳಿಕೊಂಡಿದ್ದ ವ್ಯಕ್ತಿಯೂ ಎಳೆದಾಡಿದ್ದಾನೆ. ಆಗ ವಿದ್ಯಾರ್ಥಿನಿ ಜೊತೆಗಿದ್ದ ವಿದ್ಯಾರ್ಥಿಯು ಪ್ರತಿರೋಧವೊಡ್ಡಿ ಬಿಡಿಸಿಕೊಂಡಿದ್ದಾನೆ.
ನಂತರ ಪೊಲೀಸರು ಎಂಬುದಾಗಿ ಹೇಳಿಕೊಂಡಿದ್ದ ಆರೋಪಿಗಳು, ವೀಡಿಯೋವನ್ನು ನಮ್ಮ ಮೇಲಾಧಿಕಾರಿಗಳಿಗೆ ಹಾಗೂ ನಿಮ್ಮ ತಂದೆ, ತಾಯಿಗಳಿಗೆ ನೀಡುವುದಾಗಿ ಬೆದರಿಸಿದ್ದಾರೆ. ಆಗ ವಿದ್ಯಾರ್ಥಿಗಳು ದಯವಿಟ್ಟು ಹಾಗೇ ಮಾಡಬೇಡಿ, ನಮ್ಮ ಬಳಿ ಇರುವುದು ಈ 400 ರೂ. ನೀಡಿದ್ದಾರೆ. ಆದರೆ, ಆರೋಪಿಗಳು ನೀವು 10 ಸಾವಿರ ರೂ. ಕೊಡುವ ವರೆಗೂ ನಿಮ್ಮನ್ನು ಇಲ್ಲಿಂದ ಕದಲು ಬಿಡುವುದಿಲ್ಲ ಎಂಬುದಾ ಹೇಳಿ ಅಡ್ಡಗಟ್ಟಿ ನಿಂತಿದ್ದಾರೆ.
ಆಗ ದಾರಿ ತೋಚದಂತಾದ ವಿದ್ಯಾರ್ಥಿಗಳು ತಮಗೆ ಪರಿಚಯಸ್ಥ ಹಿರಿಯ ವಿದ್ಯಾರ್ಥಿನಿಯೊಬ್ಬರಿಗೆ ಫೋನ್ ಮಾಡಿ, ವಿಷಯ ಮುಟ್ಟಿಸಿದ್ದಾರೆ. ಆಗ ಸ್ವಲ್ಪ ಹೊತ್ತಿನಲ್ಲೇ ಹಿರಿಯ ವಿದ್ಯಾರ್ಥಿನಿಯು ತನ್ನ ತಂದೆ ಸಮೇತ ಸ್ಥಳಕ್ಕೆ ಧಾವಿಸಿದ್ದಾರೆ. ಅದನ್ನು ನೋಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ವಿದ್ಯಾರ್ಥಿಗಳ ಕೈಯಲ್ಲಿದ್ದ ವಾಚನ್ನು ಬಲವಂತವಾಗಿ ಕಿತ್ತುಕೊಂಡು ಓಡಿ ಹೋಗಿದ್ದಾರೆ. ಆರೋಪಿಗಳು ಓಡುವ ಭರದಲ್ಲಿ ವೀಡಿಯೋ ಮಾಡಿದ್ದ ಮೊಬೈಲ್ ಬೀಳಿಸಿಕೊಂಡು ಹೋಗಿದ್ದಾರೆ.
ನಂತರ ವಿದ್ಯಾರ್ಥಿಗಳು ದೇವರ ಬೆಳಕೆರೆ ಡ್ಯಾಂ ಬಳಿ ಆದ ಘಟನೆ ಬಗ್ಗೆ ತಮ್ಮ ಪಾಲಕರ ಗಮನಕ್ಕೆ ತಂದಿದ್ದಾರೆ. ನಂತರ ಪಾಲಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಡ್ಯಾಂ ಬಳಿ ತಮ್ಮ ವೀಡಿಯೋ ಮಾಡಿಕೊಂಡು, ಹಣ ಕೊಡುವಂತೆ ಬೆದರಿಕೆಯೊಡ್ಡಿದ್ದು, ವಾಚ್ ಕಿತ್ತುಕೊಂಡ ವ್ಯಕ್ತಿಗಳು ತಾವು ಪೊಲೀಸರೆಂದು ಸುಲಿಗೆ ಮಾಡಲೆತ್ನಿಸಿದ್ದವರ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಯಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಹಿಳಾ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರು ಹಾಗೂ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಲಕ್ಷ್ಮಣ ನಾಯ್ಕ ನೇತೃತ್ವದ ವಿಶೇಷ ತಂಡವನ್ನು ರಚಿಸಿ, ಆರೋಪಿಗಳ ಪತ್ತೆಗೆ ಆದೇಶಿಸಿದ್ದರು.
ಆರೋಪಿಗಳಿಗಾಗಿ ಜಾಲ ಬೀಸಿದ ಡಿಸಿಐಬಿ ಇನ್ಸಪೆಕ್ಟರ್ ಲಕ್ಷ್ಮಣ ನಾಯ್ಕ ಮತ್ತು ತಂಡವು ಮಲೆಬೆನ್ನೂರಿನ ಅರಳಹಳ್ಳಿ ರಸ್ತೆಯ ವಾಸಿಯಾದ ಎಂ.ವಜೀರ್ ಸಾಬ್, ವಾಲ್ಮೀಕಿ ನಗರ ತರಗಾರ ಕೆಲಸಗಾರ ಅಬ್ದುಲ್ ಕರೀಂ ಎಂಬ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಯಾದ ಎಚ್‍ಸಿ ರಸೂಲ್ ಸಾಬ್, ಅಶೋಕ, ಸಿದ್ದೇಶ, ಶಾಂತರಾಜಾ, ಚಾಲಕ ನಾಗರಾಜ ಮತ್ತಿತರರು ಭಾಗಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ