ಬೆಂಗಳೂರು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಸಂಬಂಧಿಸಿದ ಮಾನಹಾನಿಕರ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸದಂತೆ ಸಿವಿಲ್ ಕೋರ್ಟ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ರಾಜ್ಯ ಹೈಕೋರ್ಟ್ ತೆರವುಗೊಳಿಸಿದೆ.
ಮಾಧ್ಯಮಗಳ ಮೇಲೆ ಈ ರೀತಿಯ ನಿರ್ಬಂಧ ಹೇರಲು ಸಾಧ್ಯ ಇಲ್ಲ, ಇದು ಸಿವಿಲ್ ಕೋರ್ಟ್ ವ್ಯಾಪ್ತಿಯನ್ನು ಮೀರಿದ್ದಾಗಿದೆ. ಅರ್ಜಿದಾರರಿಗೆ ಪತ್ರಿಕಾ ವರದಿಗಳ ಬಗ್ಗೆ ಆಕ್ಷೇಪ ಇದ್ದಿದ್ದರೆ ಅವರು ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದಾಗಿದೆ ಎಂದು ರಾಜ್ಯ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್)ಯ ಅಧ್ಯಕ್ಷ ತ್ರಿಲೋಚನಾ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸುದ್ದಿ ಪ್ರಕಟವಾದ ಮೇಲಷ್ಟೇ ಮಾನಹಾನಿಕರ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಸಾಧ್ಯ. ಆದರೆ ಅರ್ಜಿದಾರರು ತಾವೇ ಮುಂದಾಗಿ ಊಹಿಸಿಕೊಂಡು ಸುದ್ದಿಪ್ರಕಟಣೆಗೆ ತಡೆಯಾಜ್ಞೆ ಕೋರಿರುವುದು ಸರಿ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಎಡಿಆರ್ ಸಂಸ್ಥೆಯ ವಕೀಲ ಹರೀಶ್ ನರಸಪ್ಪ ವಾದಿಸಿದರು.
ಚುನಾವಣೆ ನಡೆಯುತ್ತಿರುವಾಗ ಪ್ರತಿಯೊಬ್ಬ ಮತದಾರನಿಗೆ ಕಣದಲ್ಲಿರುವ ಅಭ್ಯರ್ಥಿ ಬಗ್ಗೆ ತಿಳಿದುಕೊಳ್ಳುವ ಹಕ್ಕು ಇದೆ. ಇಂತಹ ತಡೆಯಾಜ್ಞೆಯಿಂದ ಆತನ ಹಕ್ಕು ಚ್ಯುತಿಯಾಗುತ್ತದೆ. ಆದ್ದರಿಂದ ಈ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಅವರು ಹೇಳಿದರು.
ಇತ್ತೀಚೆಗೆ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡಿದ ನಂತರ ಅವರ ಗೆಳತಿಯೆಂದು ಹೇಳಿಕೊಂಡ ಹುಡುಗಿ ವಂಚನೆಯ ಆರೋಪ ಹೊರಿಸಿದ್ದು ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಗೊಳಗಾಗಿತ್ತು. ಇದರಿಂದ ಕಳವಳಕ್ಕೀಡಾಗಿದ್ದ ತೇಜಸ್ವಿ ಸೂರ್ಯ ಅವರು ಸಿವಿಲ್ ಕೋರ್ಟ್ ನಲ್ಲಿ ತನ್ನ ವಿರುದ್ದ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಸಿವಿಲ್ ಕೋರ್ಟ್ ಅದನ್ನು ಒಪ್ಪಿಕೊಂಡು ತಡೆಯಾಜ್ಞೆಯನ್ನು ನೀಡಿತ್ತು.