ಹುಳಿಯಾರು :
ಗ್ರಾಮೀಣ ಭಾಗದ ಜನರಿಗೆ ತಮ್ಮ ಆರ್ಥಿಕತೆಯ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿಸಿದಾಗ ಮಾತ್ರ ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ ದುಡಿಯುವ ಕಡೆಗೆ ಹೆಚ್ಚಿನ ಗಮನಹರಿಸುವ ಮೂಲಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತುಮಕೂರಿನ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹೆಚ್.ಕೆ.ಕಾವ್ಯ ತಿಳಿಸಿದರು.
ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಹಾಗೂ ಬಿಳಿಕಲ್ಲು ಗೊಲ್ಲರಟ್ಟಿಯಲ್ಲಿ ತುಮಕೂರಿನ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರಾದೇಶಿಕ ಚಟುವಟಿಕೆ ಕಾರ್ಯದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ಇಂದಿಗೂ ಹಲವಾರು ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದ್ದು, ಸರ್ಕಾರದಿಂದ ಬರುವಂತಹ ಯಾವುದೇ ಸೌಕರ್ಯಗಳನ್ನು ಬಳಸಿಕೊಳ್ಳುವಂತಹ ಸಾಮಥ್ರ್ಯವನ್ನು ಬೆಳೆಸಿಕೊಮಡಿರುವುದಿಲ್ಲ. ಅಲ್ಲದೇ ತಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಕಿಂಚಿತ್ತು ಮಾಹಿತಿಯನ್ನು ಹೊಂದಿರುವುದಿಲ್ಲ. ಅಂತಹ ಜನರಿಗೆ ತಮ್ಮ ಕುಟುಂಬ ಆರ್ಥಿಕತೆಯ ಬಗ್ಗೆ ಮನವರಿಕೆ ಮಾಡಿಕೊಡುವ ಜೊತೆಗೆ ಗ್ರಾಮಿಣ ಭಾಗದಲ್ಲಿರುವ ಮೌಡ್ಯತೆಗಳಿಂದ ದೂರವಾಗುವ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಪ್ರಾದೇಶಿಕ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ಇಲ್ಲಿನ ಜನರಿಗೆ ಬರುವಂತಹ ಆದಾಯದ ಮೂಲಗಳನ್ನು ಬಲಪಡಿಸಿಕೊಳ್ಳುವ ಬಗ್ಗೆ ತಮ್ಮ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಮಾಹಿತಿಯ ಕೊರತೆಯಿರುವುದು ಕಾಣಸಿಗುತ್ತಿದೆ. ದುಡಿದ ಹಣವನ್ನೆಲ್ಲಾ ವೆಚ್ಚಮಾಡುವ ಬದಲು ಉಳಿತಾಯ ಮಾಡುವುದರಿಮದ ಆಗುವಂತಹ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಎಲ್ಲರೂ ಅದನ್ನು ತಮ್ಮ ಕುಟುಂಬದಲ್ಲಿ ಅಳವಡಿಸಿಕೊಂಡರೆ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಾಮಸ್ಥ ಕೃಷ್ಣಮೂರ್ತಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಸಮುದಾಯದವರು ಮೌಡ್ಯತೆಯಿಂದ ಹೊರ ಬಂದಿದ್ದು ಹೊಸ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸಮುದಾಯದ ಜನರಿಗೆ ಶಿಕ್ಷಣದ ವಿಚಾರವಾಗಿ ಅನೇಕ ಮಾಹಿತಿಗಳನ್ನು ನೀಡಿ ಅದರ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡುವಂತಹ ಕೆಲವಾಗಿದೆ. ಆದರೆ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯ ಸರಿಯಾಗಿ ದೊರೆಯದ ಹಿನ್ನೆಲೆಯಲ್ಲಿ ಇಂದಿಗೂ ಹಿಂದುಳಿದಿದ್ದೇವೆ. ಕಾಡುಗೊಲ್ಲ ಸಮುದಾಯಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಮೂಲಭೂತ ಸೌಕರ್ಯವನ್ನು ಸರ್ಕಾರ ಒದಗಿಸಿಕೊಟ್ಟರೆ ಮಾತ್ರವೇ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.
ತುಮಕೂರಿನ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿ ಗೀತಾ ಮಾತನಾಡಿ ಅಧ್ಯಯನದ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯದ ಸಾಮಾಜಿಕ, ಆರ್ಥಿಕ ಜೀವನ ಶೈಲಿಯ ಅನೇಕ ಅಗತ್ಯ ಮಾಹಿತಿಗಳು ನಮಗೆ ತಿಳಿದು ಬಂದಿದ್ದು, ಈ ಸಮುದಾಯಕ್ಕೆ ಸಿಗುವಂತಹ ಸೌಕರ್ಯಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂಬುದರ ಅರಿವೂ ಕಡಿಮೆಯಿದ್ದು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿಯನ್ನು ವಹಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತುಮಕೂರಿನ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಪ್ರೊ.ಗಂಗಪ್ರಸಾದ್, ಸಮಾಜಕಾರ್ಯ ವಿಭಾಗದ ಪ್ರೊ.ರಾಜು, ಅರ್ಥಶಾಸ್ತ್ರ ವಿಭಾಗದ ಪ್ರೊ.ಜೀವಿತಾ.ಕೆ.ಎನ್., ಪ್ರೊ.ಆಫ್ಸರಿ ಕೌಸರ್, ಗ್ರಾಮಸ್ಥರುಗಳಾದ ದೇವರಾಜು, ಕದಿರೆಗೌಡ್ರು, ಮಹಲಿಂಗಯ್ಯ, ಕರಿಯಪ್ಪ, ತಬಲ ಕಾಟಯ್ಯ, ಮಡ್ಡಿ ಕೃಷ್ಣಯ್ಯ, ಗಂಗಾಧರ್, ಹೇಮಂತ್, ಶ್ರೀನಿವಾಸ್ ಸೇರಿದಂತೆ ಮತ್ತಿತರರಿದ್ದರು.