ಪಟ್ಟಣ ಪಂಚಾಯ್ತಿಯಾದರೂ ಇಲ್ಲಿ ಮೂಲ ಸೌಲಭ್ಯಗಳಿಲ್ಲ

ಹುಳಿಯಾರು:

      ಹುಳಿಯಾರಿನ ಇತಿಹಾಸದಲ್ಲಿ ಪ್ರಪ್ರಥಮ ಎನ್ನುವಂತೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪಟ್ಟಣ ಪಂಚಾಯ್ತಿ ಜನಪ್ರತಿನಿಧಿಗಳ ಸಾಮಾನ್ಯ ಸಭೆ ಜ.9 ರಂದು ನಡೆಯುತ್ತಿದೆ. ಅಲ್ಲದೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ವರ್ಷದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಸಹಜವಾಗಿ ಇಲ್ಲಿನ ಜನ ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡು ಕುತುಹಲದಿಂದ ಕಾಯುತ್ತಿದ್ದಾರೆ. ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೆ ಜಿಲ್ಲಾಧಿಕಾರಿಗಳು ಕೊನೆಯಾಡುವರೇ ಎಂದು ಭರವಸೆಯ ಆಶಾಗೋಪುರ ಕಟ್ಟಿಕೊಂಡಿದ್ದಾರೆ.

       ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಪ್ರಯತ್ನದ ಫಲವಾಗಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈ ಸಭೆ ನಡೆಯುತ್ತಿದೆ. ಗ್ರಾಪಂನಿಂದ ಪಪಂ ಆಗಿ ಮೇಲ್ದರ್ಜೆಗೇರಿದ್ದರೂ ಆಡಳಿತ ನಡೆಸುವವರಾರು, ಇರುವ ಹಣ ಡ್ರಾ ಮಾಡುವವರಾರು ಎನ್ನುವ ಗೊಂದಲದಿಂದ ಬರೋಬ್ಬರಿ ಒಂದು ವರ್ಷ ಕಳೆದಿದೆ. ಪರಿಣಾಮ ಮೂಲ ಸೌಕರ್ಯಗಳಿಲ್ಲದೆ ಇಲ್ಲಿನ ನಿವಾಸಿಗಳು ಅಕ್ಷರಶಃ ನರಳುತ್ತಿದ್ದಾರೆ. ಹಾಗಾಗಿ ಸಭೆಯಲ್ಲಿ ಕೈಗೊಳ್ಳುವ ನಿರ್ಣಯ ಊರಿನ ಅಭಿವೃದ್ಧಿಯ ದಿಕ್ಸೂಚಿ ಎನ್ನುವ ಕಾರಣದಿಂದ ಜನರ ಚಿತ್ತ ಈಗ ಜಿಲ್ಲಾಧಿಕಾಗಳತ್ತ ಎನ್ನುವಂತ್ತಾಗಿದೆ.

 ಶುದ್ಧ ನೀರಿಗೆ ಮೊದಲ ಆಧ್ಯತೆ

      ಹುಳಿಯಾರು ಪಟ್ಟಣಕ್ಕೆ ಬೋರನಕಣಿವೆ ಜಲಾಶಯದಿಂದ ನೀರು ಪೂರೈಸುತ್ತಿದ್ದರೂ ಶುದ್ಧ ಹಾಗೂ ಸಮರ್ಪಕವಾಗಿ ಸರಬರಾಜು ಇಲ್ಲದೆ ಜನ ದುಡ್ಡು ಕೊಟ್ಟು ನೀರು ಖರಿಧಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ಅದೂ ಇತ್ತೀಚೆಗಷ್ಟೆ 80 ಲಕ್ಷ ರೂ. ವೆಚ್ಚದಲ್ಲಿ ಘಟಕದ ಸ್ವಚ್ಚತಾ ಕಾರ್ಯ ಮಾಡಿದ ಬಳಿಕವೂ ಈ ಸಮಸ್ಯೆ ಮುಂದುವರಿದಿದೆ. ನೀರಿಗೆ ಮೊದಲ ಆಧ್ಯತೆ ಕೊಟ್ಟು ಶುದ್ಧ ಹಾಗೂ ಸಮರ್ಪಕ ನೀರು ಸರಬರಾಜಿಗಾಗಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕಿದೆ.

 ರಸ್ತೆಗಳಿಗೆ ದುರಸ್ಥಿ ಭಾಗ್ಯ ಕರುಣಿಸಲಿ

         ಹುಳಿಯಾರು ಪಟ್ಟಣವು ತಾಲೂಕಿಗೆ ಸರಿಸಮನಾಗಿ ಬೆಳೆದು ನಿಂತಿದೆ. ಆದಾಯದಲ್ಲೂ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ಪಟ್ಟಣದ ಒಳ ರಸ್ತೆಗಳು ಕುಗ್ರಾಮದ ರಸ್ತೆಗೂ ಕಡೆಯಾಗಿವೆ. ಎಲ್ಲಾ ರಸ್ತೆಗಳಲ್ಲೂ ಆಳುದ್ದ ಗುಂಡಿಗಳು ಬಿದ್ದಿವೆ. ಈ ಹಿಂದೆ ಹಾಕಿದ್ದ ಡಾಂಬಾರು ಹೋಗಿ ಜಿಲ್ಲಿಗಳು ಎದ್ದಿವೆ. ಪರಿಣಾಮ ಕಳೆದ ಹತ್ತದಿನೈದು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿಕೊಂಡು ಜನ ಓಡಾಡುವಂತ್ತಾಗಿದೆ. ವಿಶೇಷ ಅನುದಾನದಲ್ಲಿ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಅಥವಾ ಉದ್ಯೋಗಖಾತ್ರಿಯಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

 ಒಳ ಚರಂಡಿ ವ್ಯವಸ್ಥೆ ಕಲ್ಪಿಸಲಿ

       ಹುಳಿಯಾರು ಪಟ್ಟಣದ ಮತ್ತೊಂದು ಬಹುಮುಖ್ಯ ಸಮಸ್ಯೆಯೆಂದರೆ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದು. ಇರುವ ಚರಂಡಿ ಮೇಲೆ ಕಾಂಪೌಂಡ್, ಶೌಚಾಲಯ ಕಟ್ಟಿಕೊಂಡಿದ್ದಾರೆ. ಪ್ಲಾಸ್ಟಿಕ್, ಕಸ, ಕಲ್ಲು ಹಾಕಿ ಮುಚ್ಚಿದ್ದಾರೆ. ಹಾಗಾಗಿ ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಕಟ್ಟಿಕೊಂಡು ಸೊಳ್ಳೆಯ ಆಶ್ರಯ ತಾಣವಾಗಿ ಮಾರ್ಪಟ್ಟಿವೆ. ಕೆಲವು ಬಡಾವಣೆಗಳಿಗೆ ಹೋದರಂತೂ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಹಾಗಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಇಲ್ಲಿನ ನಿವಾಸಿಗಳಿಗೆ ಖಾಯಿಲೆಗಳಿಂದ ಮುಕ್ತಿ ಕೊಡಬೇಕಿದೆ.

 ಇ-ಸ್ವತ್ತು ಸೇರಿದಂತೆ ಅಗತ್ಯ ಸೇವೆ ನೀಡಲಿ

         ಈಗಂತೂ ನಿವೇಶನ ಮತ್ತು ಮನೆಗಳನ್ನು ಕೊಳ್ಳಲು ಮತ್ತು ಮಾರಲು ಇ-ಸ್ವತ್ತು ಮುಖ್ಯವಾಗಿದೆ. ಆದರೆ ಪಟ್ಟಣ ಪಂಚಾಯ್ತಿ ಘೋಷಣೆಯಾದ ದಿನಗಳಿಂದ ಇ-ಸ್ವತ್ತು ನೀಡದೆ ಸತಾಯಿಸುತ್ತಿದ್ದಾರೆ. ಪರಿಣಾಮ ಕಷ್ಟದಲ್ಲಿರುವವರಿಗೆ ಭಾರಿ ತೊಂದರೆಯಾಗಿದೆ. ಅಲ್ಲದೆ ಖಾತೆ ನಕಲು, ವಾಸಸ್ಥಳ ಹೀಗೆ ವಿವಿಧ ಅಗತ್ಯ ದಾಖಲೆಗಳನ್ನು ಸುಲಭವಾಗಿ ಸಿಗದಂತ್ತಾಗಿದೆ. ಇದರಿಂದ ಅನೇಕರಿಗೆ ತೊಂದರೆಯಾಗಿದ್ದು ಈ ಸೇವೆಗಳು ಸಭೆ ನಡೆದ ಮರುಕ್ಷಣದಿಂದಲೇ ಜನರ ಕೈಗೆಟಕುವಂತ್ತಾಗಲಿ.

         ಉಳಿದಂತೆ ಗ್ರಾಪಂ ಅವಧಿಯಲ್ಲಿ ನಿರ್ಮಿಸಿದ್ದ ಶೌಚಾಲಯ, ದನದ ಕೊಟ್ಟಿಗೆ ಹಣ ಇನ್ನೂ ಕೆಲವರಿಗೆ ಬಂದಿಲ್ಲ. 14 ನೇ ಹಣಕಾಸು ಯೋಜನೆಯಲ್ಲಿ ಮಾಡಿದ ಕಾಮಗಾರಿಯ ಹಣ ಪಾವತಿಯಾಗಿಲ್ಲ. ಹೆಚ್ಚು ಜನಸಂದಣೆ ಇರುವ ಬಸ್ ನಿಲ್ದಾಣ, ರಾಮ್ ಗೋಪಾಲ್ ಸರ್ಕಲ್ ಹಾಗೂ ರಾಜ್‍ಕುಮಾರ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಸಾರ್ವಜನಿಕ ಶೌಚಾಲಯ ಸ್ವಚ್ಚತೆ ಸೇರಿದಂತೆ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಪ್ಲಾಸಿಕ್ ನಿಷೇಧವಿದ್ದರೂ ಇಲ್ಲಿ ರಾಜಾರೋಷವಾಗಿ ಮಾರುತ್ತಿದ್ದಾರೆ. ರಸ್ತೆಗೆ ಅಂಗಡಿಗಳನ್ನು ವಿಸ್ತರಿಸಿ ಸಂಚಾರಕ್ಕೆ ಕಿರಿಕಿರಿಯೊಡ್ಡಿದ್ದಾರೆ. ಕೆಲ ಬೀದಿಗಳ ಕಂಬಳಲ್ಲಿ ಬಲ್ಫ್‍ಗಳೇ ಇಲ್ಲದಾಗಿದೆ. ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ ಮೀರಿದ್ದು ಮರು ಹರಾಜು ಮಾಡಿ ಹೊಸಬರಿಗೆ ಅವಕಾಶ ಕೊಡಿ ಎಂದು ಇಪ್ಪತ್ತಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

           ಒಟ್ಟಾರೆ ಸಮಸ್ಯೆಗಳ ಸರಮಾಲೆಗಳಿರುವ ಈ ಊರಿಗೆ ಜಿಲ್ಲಾಧಿಕಾರಿಗಳಾದರೂ ಪಪಂನ ಮೊದಲ ಸಭೆಯಲ್ಲಿ ಒಳ್ಳೆಯ ಅಡಿಪಾಯ ಹಾಕಿ ಊರಿನ ಏಳಿಗೆಗೆ ಕಾರಣರಾಗಲಿ ಎಂಬುದು ಇಲ್ಲಿನ ನಿವಾಸಿಗಳ ಬಯಕೆಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link