ಸಣ್ಣ ಕೈಗಾರಿಕೆಗಳ ನೆರವಿಗೆ ವಿಶೇಷ ಯೋಜನೆ ಅಗತ್ಯವಿದೆ : ಸಿದ್ದರಾಮಯ್ಯ

ಬೆಂಗಳೂರು :

     ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ನಷ್ಟಕ್ಕೆ ಒಳಗಾಗಿರುವ ರಾಜ್ಯದ ಸಣ್ಣ ಕೈಗಾರಿಕೆಗಳ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುವ ಅಗತ್ಯವಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

     ಕಳೆದ ನಲವತ್ತು ದಿನಗಳಿಂದ ಸಣ್ಣ ಕೈಗಾರಿಕೆಗಳಲ್ಲಿ ಉತ್ಪಾದನಾ ಚಟುವಟಿಕೆ ಬಂದ್ ಆಗಿದ್ದು, ಸರ್ಕಾರಕ್ಕೆ ಬರಬೇಕಾದ ಆದಾಯವೂ ನಿಂತು ಹೋಗಿದೆ. ಸಣ್ಣ ಕೈಗಾರಿಕೆಗಳಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾಗಬೇಕಾದರೆ ಸರ್ಕಾರ ಆರ್ಥಿಕ ನೆರವು ಒದಗಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದರು. ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ. ಇದುವರೆಗೂ ಸಂಘಗಳ ಪದಾಧಿಕಾರಿಗಳ ಜೊತೆ ಸರ್ಕಾರ ಮಾತುಕತೆ ನಡೆಸಿಲ್ಲ. ನಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳು ಚೇತರಿಸಿಕೊಳ್ಳಬೇಕಾದರೆ ಕೆಲವೊಂದು ರಿಯಾಯಿತಿಗಳನ್ನು ಸರ್ಕಾರ ಘೋಷಣೆ ಮಾಡಬೇಕು.

    ಕಾರ್ಖಾನೆ ಮಾಲೀಕರು ಬ್ಯಾಂಕ್‍ಗಳ ಮೂಲಕ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ, ಮಾಸಿಕ ಕಂತು ಪಾವತಿಗೆ ವಿನಾಯಿತಿ, ಉತ್ಪನ್ನಗಳ ರಫ್ತಿಗೆ ಉತ್ತೇಜನ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಸಣ್ಣ ಕೈಗಾರಿಕೆಗಳು ಮತ್ತು ಆ ಕೈಗಾರಿಕೆಗಳನ್ನು ಅವಲಂಬಿಸಿರುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

    ಈಗಾಗಲೇ ನಷ್ಟ ಅನುಭವಿಸಿರುವ ಕೆಲ ಕಾರ್ಖಾನೆಗಳು ಮತ್ತೆ ಉತ್ಪಾದನೆ ಆರಂಭಿಸಬೇಕಾದರೆ ಬಂಡವಾಳ ಅಗತ್ಯ. ಅದರ ಕಡೆಗೂ ಸರ್ಕಾರ ಗಮನ ಹರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದರು.

    ಸರ್ಕಾರ ನೆರವು ಒದಗಿಸದಿದ್ದರೆ ಸಾವಿರಾರು ಕಾರ್ಖಾನೆಗಳು ಮುಚ್ಚುವುದರ ಜೊತೆಗೆ ಆ ಕಾರ್ಖಾನೆಗಳನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ಕಾರ್ಮಿಕರು ಬೀದಿಪಾಲಾಗಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್. ರಾಜು, ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಹಾಗೂ ಉಭಯ ಸಂಘಗಳ ಇತರ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಂಘಗಳ ಪ್ರಮುಖ ಬೇಡಿಕೆಗಳು :

      ಎಫ್ ಐ ಆರ್ ಸಿ ಬಿಲ್ಲುಗಳನ್ನು ಪಾವತಿ ಮನಾಡಲು ಅವಧಿ ವಿಸ್ತರಣೆ. ಮಾಸಿಕ ವಿದ್ಯುತ್ ಶುಲ್ಕ ಪಾವತಿ ಒಂದು ವರ್ಷದವರೆಗೆ ಮನ್ನಾ. ಕಾರ್ಮಿಕರ ಇಎಸ್‍ಐ, ಪಿಎಫ್ ವಂತಿಗೆ ಪಾವತಿ ಆರು ತಿಂಗಳ ವರೆಗೆ ಮನ್ನಾ.  ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಮನ್ನಾ, ಬಂಡಿ ಮತ್ತು ದಂಡ ಬಡ್ಡಿ ಕೈ ಬಿಡುವುದು,ಬಿಬಿಎಂಪಿಗೆ ಸಂದಾಯ ಮಾಡಬೇಕಿರುವ ಆಸ್ತಿ ತೆರಿಗೆಯ ನಿಧಾನ ಪಾವತಿಯ ಮೇಲಿನ ಬಡ್ಡಿ/ನಿಗದಿತ ಮೊಬಲಗನ್ನು ಡಿಸೆಂಬರ್ ವರೆಗೆ ಮುಂದೂಡುವುದು. ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವೇತನವನ್ನು ರಾಜ್ಯ ಸರ್ಕಾರ ಶೇ. 50ರಷ್ಟು ಭರಿಸುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap