ಜುಲೈ ,ಆಗಸ್ಟ್ ನಲ್ಲಿ ಕೊರೋನಾ ಹೆಚ್ಚಾಗುವ ಸಾಧ್ಯತೆ :ಆರ್ ಅಶೋಕ್

ಬೆಂಗಳೂರು

   ಜುಲೈ ಮತ್ತು ಆಗಸ್ಟ್ ನಲ್ಲಿ ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕಂದಾಯ ಸಚಿವ ಆರ್ ಅಶೋಕ್, ಸೋಂಕಿತರ ಶುಶ್ರೂಷೆಗೆ ಮಾನಸಿಕವಾಗಿ ಸಿದ್ಧರಾಗಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

   ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರದ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯಿಂದ ರಾಜ್ಯಕ್ಕೆ 742 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ 232 ಕೋಟಿ ರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 70 ಕೋಟಿ ರೂ, ಬಿಬಿಎಂಪಿಗೆ 50 ಕೋಟಿ ರೂ, ಪೆÇಲೀಸ್ ಇಲಾಖೆಗೆ 12 ಕೋಟಿ ರೂ, ರೈಲ್ವೇಗೆ 13 ಕೋಟಿ ರೂ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2.89 ಕೋಟಿ ರೂ ಸೇರಿ ಒಟ್ಟು 379.89 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಇನ್ನೂ 362.11 ಕೋಟಿ ರೂ ಲಭ್ಯವಿದ್ದು ಇದನ್ನೂ ಕೂಡಾ ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಹೆಚ್ಚು ಮಾಡಲು ಈಗಾಗಲೇ ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದು, ಇಲ್ಲಿ 176 ಹಾಸಿಗೆಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಹಜ್ ಭವನದಲ್ಲಿ 432 ಹಾಸಿಗೆಗಳು, ಕೃಷಿ ವಿಶ್ವವಿದ್ಯಾಲಯದಲ್ಲಿ 1000 ಹಾಸಿಗಗಳು, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಹಾಸಿಗೆಗಳು, ಸರ್ಕಾರಿ ಆರ್ಯುವೇದ ವಸತಿ ನಿಲಯದಲ್ಲಿ 300 ಹಾಸಿಗೆಗಳು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1000 ಹಾಸಿಗೆಗಳು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ 5000 ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಾಖಲಾಗುವ ರೋಗಿಗಳಿಗೆ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಒಳ್ಳಯ ಊಟದ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ. ಬೆಂಗಳೂರಿನ ತಾಜ್ ಹೋಟೆಲ್, ಹೋಟೆಲ್ ಏಟ್ರಿಯ ಹಾಗೂ ಇಸ್ಕಾನ್ ನಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಶೋಕ್ ಮಾಹಿತಿ ನೀಡಿದರು.

   ನಗರದಲ್ಲಿ ಸೋಂಕಿತರಿಗೆ ಹಾಸಿಗೆಯ ಲಭ್ಯತೆ ಇಲ್ಲದ ಪ್ರಕರಣಗಳು ವರದಿಯಾಗುತ್ತಿದ್ದು, ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಗೊಂದಲಗಳನ್ನು ನಿವಾರಿಸಲಾಗುವುದು. ಕೋವಿಡ್ ತಪಾಸಣಾ ವರದಿಗಳನ್ನು ರೋಗಿಗಳಿಗೆ ನೇರವಾಗಿ ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಲಾಗಿದೆ. ತಪಾಸಣಾ ವರದಿಯ ಮಾಹಿತಿಯನ್ನು ಯಾರಾದರೂ ನೇರವಾಗಿ ರೋಗಿಯೊಂದಿಗೆ ಹಂಚಿಕೊಂಡರೆ ಸರ್ಕಾರದ ನಿಯಮಗಳ ರೀತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

     ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಆರೋಗ್ಯ ಅಧಿಕಾರಿಗಳು ಕೋವಿಡ್ ಲಕ್ಷಣಗಳನ್ನು ಹೊಂದಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಶಂಕಿತ ಸೋಂಕಿತರನ್ನು ಖುದ್ದಾಗಿ ಭೇಟಿ ಮಾಡಬೇಕು. ಸೋಂಕು ಕಂಡುಬಂದಲ್ಲಿ ಕೋವಿಡ್ ಆಸ್ಪತ್ರೆ ಇಲ್ಲವಾದಲ್ಲಿ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ. ರೋಗ ಲಕ್ಷಣವುಳ್ಳವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲು ಹಾಗೂ ರೋಗ ಲಕ್ಷಣಗಳು ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಸೋಂಕಿತರೊಂದಿಗೆ ಸಂಯಮದಿಂದ ಮಾತನಾಡಿ ಧೈರ್ಯ ಹೇಳುವ ಕೆಲಸ ಮಾಡಬೇಕು. ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ? 19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವ ದೂರು ಕೇಳಿ ಬಂದಿದ್ದು, ನಿರಾಕರಣೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದರು,

     ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರು ವೈದ್ಯಕೀಯೇತರ ಸಿಬ್ಬಂದಿ ಎಲ್ಲರೂ ವೈಯುಕ್ತಿಕ ರಕ್ಷಣಾ ಉಪಕರಣ ( ಪಿ ಪಿ ಇ ) ಕಿಟ್ ಧರಿಸುತ್ತಿರುವ ಹಿನ್ನೆಲೆಯಲ್ಲಿ ಯಾರು ವೈದ್ಯರು ಯಾರು ವೈದ್ಯಕೀಯೇತರ ಸಿಬ್ಬಂದಿ ಎಂಬುದು ತಿಳಿಯುತ್ತಿಲ್ಲ. ಕೆಲವೊಮ್ಮೆ ವೈದ್ಯರು ಇಲ್ಲ ಎಂದೂ ಹಾಗೂ ಮತ್ತೆ ಕೆಲವೊಮ್ಮೆ ಅರೆ ವೈದ್ಯಕೀಯ ಸಿಬ್ಬಂದಿ ಬಂದಿಲ್ಲ ಎಂದೂ ದೂರುಗಳು ಕೇಳಿ ಬರುತ್ತಿವೆ. ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಗುರುತನ್ನು ಸುಲಭವಾಗಿ ಪತ್ತೆ ಹಚ್ಚಲು ಪಿಪಿಪಿ ಕಿಟ್ ಮೇಲೆ ಸ್ಟಿಕರ್ ಹಾಕಿಕೊಂಡು ಓಡಾಡಲು ಸೂಚನೆ ನೀಡಲಾಗಿದೆ. ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಣಾ ರಿಜಿಸ್ಟರ್ ಇರಿಸಿ ದಾಖಲಿಸುವ ಜತೆಗೆ ವೀಡಿಯೋ ಮಾಡುವಂತೆ ಸೂಚಿಸಲಾಗಿದೆ. ಆದರೆ, ವೀಡಿಯೋವನ್ನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದು ಅಥವಾ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಾರದು ಎಂದು ನಿರ್ದೇಶನ ನೀಡಲಾಗಿದೆ ಎಂದರು.

       ದೂರುಗಳು ಬಂದಾಗ ಇಲ್ಲವೇ, ತುರ್ತು ಸಂದರ್ಭಗಳಲ್ಲಿ ಪರಿಶೀಲನೆ ಮಾಡಲಾಗುವುದು. ಯಾರಾದರೂ ವೈದ್ಯರೇ ಇರಲೀ ಅಥವಾ ವೈದ್ಯಕೀಯೇತರ ಸಿಬ್ಬಂದಿಯೇ ಇರಲಿ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ರೋಗಿಗಳನ್ನು ದಾಖಲು ಮಾಡಲಾಗುವ ಎಲ್ಲಾ ಹಾಸಿಗೆಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲಾಗುವುದು. ಇದರಿಂದ ಎಷ್ಟು ಜನ ರೋಗಿಗಳಿದ್ದಾರೆ ? ಎಷ್ಟು ರೋಗಿಗಳು ಬಿಡುಗಡೆಯಾಗಿದ್ದಾರೆ ? ಎಷ್ಟು ಹಾಸಿಗೆಗಳು ಲಭ್ಯವಿದೆ ? ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳಿಗೂ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

      ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ಕ್ವಾರೆಂಟೈನ್ ಮಾಡಲು ಹೋಟಲ್‍ಗಳನ್ನು ಗುರುತಿಸಲಾಗಿದೆ. ಇದರಿಂದ ಸಾರ್ವಜನಿಕರು, ವಿಶೇಷವಾಗಿ, ನೆರೆಹೊರೆಯವರಿಂದ ಆಗುವ ಮುಜುಗರ ಹಾಗೂ ಮಾನಸಿಕ ವೇದನೆ ತಪ್ಪಿಸಬಹುದಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ, ವಿಶೇಷವಾಗಿ ಅರೆ ವೈದ್ಯಕೀಯ ಸಿಬ್ಬಂದಿ, ಲಿಫ್ಟ್ ಆಪರೇಟರ್ ಹಾಗೂ ಸ್ವಚ್ಛತಾಗಾರರ ಶ್ರಮವನ್ನು ಗಮನಿಸಿ ಅವರ ವೇತನವನ್ನು ಹೆಚ್ಚು ಮಾಡುವ ಸಂಬಂಧ ಈಗಾಗಲೇ ಮಾತುಕತೆ ನಡೆದಿದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಹೆಚ್ಚು ಮಾಡಲು ಕೂಡಲೇ ಕ್ರಮ ವಹಿಸಲಾಗುವುದು ಎಂದರು.

     ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಉತ್ತಮ ಚಿಕಿತ್ಸೆ, ಗುಣಮಟ್ಟದ ಊಟ ದೊರೆಯುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಖುದ್ಧು ಭೇಟಿ ನೀಡಿ ಊಟದಲ್ಲಿ ತುಪ್ಪ, ಉಪ್ಪಿನ ಕಾಯಿ, ಚಪಾತಿ, ರಾಗಿ ಮುದ್ದೆ, ಅನ್ನ ಮತ್ತು ಸಾಂಬಾರ್ ಹೀಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪೂರಕವಾದ ಆಹಾರ ಪದಾರ್ಥಗಳನ್ನು ನೀಡಲು ಸೂಚಿಸಿರುವುದಾಗಿ ತಿಳಿಸಿದರು.

     ಶಾಂತಿನಗರದಲ್ಲಿರುವ 20 ಹಾಸಿಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 40 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಶಾಂತಿನಗರದಲ್ಲಿ ಏಡ್ಸ್ ನಿಯಂತ್ರಣಾ ಸಂಸ್ಥೆಯ ಕಚೇರಿಯನ್ನು 75 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ 40 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಶಾಶ್ವತವಾಗಿ ಆಂಬುಲೆನ್ಸ್ ಖರೀದಿಸಲು ಅನುಮತಿ ನೀಡಲಾಗಿದೆ. ಅಲ್ಲದೆ, ವಿಕ್ಟೋರಿಯ ಆಸ್ಪತ್ರೆಯಲ್ಲಿ ಆರು ಆಂಬ್ಯುಲೆನ್ಸ್‍ಗಳನ್ನು ಆರು ತಿಂಗಳ ಮಟ್ಟಿಗೆ ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದರು.

     ಆಯುಷ್ ಇಲಾಖೆಯ 85 ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ವಾರಾಂತ್ಯದೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳ ಸದಸ್ಯರುಗಳ ಸಭೆ ಕರೆಯಲಾಗುತ್ತಿದೆ. ಮಾಹಾನಗರ ಪಾಲಿಕೆಯಲ್ಲಿ 198 ವಾರ್ಡುಗಳಿದ್ದು, ಪ್ರತಿ 70 ಸದಸ್ಯರನ್ನು ಒಳಗೊಂಡ ಮೂರು ವಿಭಾಗಗಳನ್ನಾಗಿ ಮಾಡಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಪ್ರತಿ ವಾರ್ಡ್‍ನಲ್ಲಿ ಆಯಾ ವಾರ್ಡಿನ ಕಾರ್ಪೋರೇಟರ್ ಕೋವಿಡ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆದು, ಕೋವಿಡ್ ? 19 ರೋಗ ಪತ್ತೆಯಾದವರನ್ನು ಆಸ್ಪತ್ರೆಗೆ ಕಳುಹಿಸುವುದು, ಅವರ ಮನೆಯ ಹಾಗೂ ಆ ಪ್ರದೇಶವನ್ನು ಸೀಲ್‍ಡೌನ್ ಮಾಡಿ ಆ ಪ್ರದೇಶಕ್ಕೆ ಊಟ, ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದರು.

    ಕಂದಾಯ ಇಲಾಖೆಯ ಸೇವೆಯಲ್ಲಿರುವ ಖಾಯಂಪೂರ್ವ ಅವಧಿಯ 20 ತಹಸೀಲ್ದಾರ್ಗಳನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ನೇಮಕ ಮಾಡಲಾಗಿದೆ. ಬಿಬಿಎಂಪಿಯ ಪ್ರತಿ ವಾರ್ಡ್‍ಗೆ ಸರ್ಕಾರೇತರ ಸಂಸ್ಥೆಗಳ ಹತ್ತು ಸದಸ್ಯರನ್ನು ನೇಮಕ ಮಾಡಲಾಗುವುದು. ಈ ಸ್ವಯಂ ಸೇವಕರು ಕೋವಿಡ್ ? 19 ರೋಗ ಪತ್ತೆಯಾದವರನ್ನು ಆಸ್ಪತ್ರೆಗೆ ಕಳುಹಿಸುವ ಮತ್ತಿತರ ಕೆಲಸಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು. ಸೋಂಕಿತರಿಗೆ ಹಾಸಿಗೆಗಳ ಹಂಚಿಕೆಗಾಗಿ ಹಿರಿಯ ಐ ಎ ಎಸ್ ಅಧಿಕಾರಿ ತುಷಾರ್ ಗಿರಿನಾಥ್, ಕೋವಿಡ್ ಹಾಸಿಗೆ ಕೇಂದ್ರಗಳನ್ನು ಸ್ಥಾಪಿಸಲು ಐ ಎ ಎಸ್ ಅಧಿಕಾರಿ ರಾಜೇಂದ್ರ ಕಠಾರಿಯಾ ಅವರನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವವರನ್ನು ಪತ್ತೆ ಮಾಡಿ ದಂಡ ಹಾಕಲಾಗುತ್ತಿದ್ದು, ಈ ಸಂಬಂಧ 2280 ಪ್ರಕರಣಗಳಿಂದ .85 ಲಕ್ಷ ರೂ ದಂಡ ವಸೂಲು ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.

     ಕೋವಿಡ್‍ನಿಂದ ಮೃತರಾದವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ಪಾಲಿಕೆಯ ಪ್ರತಿ ವಾರ್ಡ್‍ಗೆ ಎರಡು ಚಿರ ಶಾಂತಿ ವಾಹನಗಳನ್ನು ಒದಗಿಸಲಾಗುವುದು. ಒಂದು ವಾಹನದಲ್ಲಿ ಪಾರ್ಥಿವ ಶರೀರದೊಂದಿಗೆ ವಾಹನ ಚಾಲಕನೂ ಒಳಗೊಂಡಂತೆ ನಾಲ್ವರು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೋಂಕಿತರ ಪ್ರದೇಶವನ್ನು ಸ್ಯಾನಿಟೈಸ್ ಮಾಡಲು ಎರಡು ಮಿಕ್ಸ್‍ಡ್ ಕ್ಯಾನನ್ ಸೋಡಿಯಂ ಹೈಡ್ರೋ ಕ್ಲೋರೈಡ್ ವಾಹನಗಳನ್ನು ಖರೀದಿಸಿದ್ದು, ಇನ್ನೂ ಹೆಚ್ಚಿನ ವಾಹನಗಳನ್ನು ಹಂತ ಹಂತವಾಗಿ ಖರೀದಿಸಲಾಗುವುದು ಎಂದರು.

       ಕೋವಿಡ್ ರೋಗಿಗಳು ಮಧುಮೇಹಿಗಳಾಗಿದ್ದಲ್ಲಿ ಅವರಿಗೆ ಹೊಂದುವಂತಹ ಊಟವನ್ನು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅವರಿಗೆ ಹೊಂದುವಂತಹ ಊಟ, ಸಾಮಾನ್ಯ ಜನರು ಕೋವೀಡ್ ರೋಗಿಗಳಾಗಿದ್ದಲ್ಲಿ ಅವರಿಗೆ ಪೂರಕವಾಗುವ ಊಟ ನೀಡಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮಕ್ಕಳಿಗೆ ಹೊಂದುವಂತಹ ಊಟವನ್ನು ಮಕ್ಕಳಿಗೆ ಹಾಗೂ ಆಹಾರ ಸೇವನೆ ಮಾಡದ ರೋಗಿಗಳಿಗೆ ದ್ರವ ರೂಪದ ಆಹಾರವನ್ನು ನೀಡಲಾಗುತ್ತಿದೆ. ಮಧುಮೇಹಿಗಳನ್ನು ನೋಡಿಕೊಳ್ಳಲು ಪ್ರತಿ ಸೆಂಟರ್ನಲ್ಲಿ ಓರ್ವ ಮಧುಮೇಹಿ ವೈದ್ಯರನ್ನು ನೇಮಿಸಲಾಗುವುದು. ರೋಗಿಗಳಿಗೆ ಪ್ರತಿ ದಿನ ಬೆಳಿಗ್ಗೆ 7-30 ಗಂಟೆಗೆ ಉಪಾಹಾರ, 10-30 ಗಂಟೆಗೆ ಸ್ನಾಕ್ಸ್, ಮಧ್ಯಾಹ್ನ 1-00 ಗಂಟೆಗೆ ಬೋಜನ, ಮಧ್ಯಾಹ್ನ 3-30 ಗಂಟೆಗೆ ಲಘು ಉಪಾಹಾರ ಸಂಜೆ 5-00 ಗಂಟೆಗೆ ಕಾಫಿ ಅಥವಾ ಟೀ ಹಾಗೂ ರಾತ್ರಿ 7-00 ಗಂಟೆಗೆ ಊಟವನ್ನು ಸರ್ಕಾರವೇ ಉಚಿತವಾಗಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

       ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link