ತುಮಕೂರು
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಪೂರಕ ವಾತಾವರಣವಿದೆ. ಕಾಂಗ್ರೆಸ್ ಸರ್ಕಾರದ ಕೊಡುಗೆಗಳು ಪದವೀಧರ ಮತದಾರರ ಮನಸ್ಸಿನಲ್ಲಿದ್ದು ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಮೇಶ್ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಕ್ಷೇತ್ರದಲ್ಲಿ ಶಿಕ್ಷಕರ ಕ್ಷೇತ್ರದಿಂದ ತಾವು ಒಮ್ಮೆ ಗೆದ್ದಿದ್ದು, ಕ್ಷೇತ್ರದಾದ್ಯಂತ ಉತ್ತಮ ಸಂಪರ್ಕವಿದೆ. ಬಿಜೆಪಿ, ಜೆಡಿಎಸ್ನ ಅನೇಕ ಪದವೀಧರ ಮತದಾರರೂ ಈ ಬಾರಿ ತಮಗೆ ಮತ ನೀಡಲಿದ್ದಾರೆ ಎಂದರು.
ಕಳೆದ ಹತ್ತಾರು ವರ್ಷಗಳಿಂದ ಇದ್ದ ಪದವೀಧರ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಗೆಹರಿಸುವ ಪ್ರಯತ್ನ ಮಾಡಿದ್ದರು. ಪ್ರಮುಖವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮತ್ತು ಕಾಲೇಜು ಶಿಕ್ಷಕರಿಗೆ 2ನೇ ಇಂಕ್ರಿಮೆಂಟ್ ನೀಡಿರುತ್ತಾರೆ. ಇದರಿಂದ ಸುಮಾರು 200 ಕೋಟಿ ರೂ. ಖರ್ಚಾಗುತ್ತಿದೆ. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಲಾಗಿದೆ. ಇದರಲ್ಲಿ ಶೇಕಡ 30ರಷ್ಟು ಯಥಾವತ್ತಾಗಿ ಜಾರಿಗೊಳಿಸಲಾಗಿದೆ ಎಂದರು.
ಆಯೋಗದ 2ನೇ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಸಿದ್ದರಾಮಯ್ಯ ಮಾತು ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬರಲಿಲ್ಲ. ನಂತರ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರಿಗೆ 2ನೇ ವೇತನ ಆಯೋಗ ಜಾರಿಗೊಳಿಸಲು ಹಲವಾರು ಪತ್ರಗಳನ್ನು ಬರೆದರೂ ಬಹುತೇಕ ಶಿಫಾರಸ್ಸುಗಳನ್ನು ಜಾರಿಗೊಳಿಸದೆ ತಿರಸ್ಕರಿಸಿದರು ಎಂದು ಹೇಳಿದರು.
ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಮತಯಾಚನೆ ಮಾಡಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಮುಖಂಡರ ತಂಡ ರಚಿಸಲಾಗಿದೆ. ಈ ಬಾರಿ ಕಾಂಗ್ರೆಸ್ ಗೆಲುವಿನ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಈ ಗೆಲುವು ದಿಕ್ಸೂಚಿಯಾಗಲಿದೆ ಎಂದು ರಮೇಶ್ಬಾಬು ಹೇಳಿದರು.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1.09 ಲಕ್ಷ ಮತದಾರರಿದ್ದಾರೆ. ಐದು ಜಿಲ್ಲೆ ವ್ಯಾಪ್ತಿಯ 33 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ 13, ಬಿಜೆಪಿಯ 13, ಜೆಡಿಎಸ್ನ 5, ಒಬ್ಬರು ಪಕ್ಷೇತರ ಶಾಸಕರಿದ್ದಾರೆ. ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ನಿಂದಲೇ ಹೆಚ್ಚು ಪದವೀಧರ ಮತದಾರರ ನೊಂದಣಿಯಾಗಿದ್ದಾರೆ, ಕಾಂಗ್ರೆಸ್ ಗೆಲ್ಲುವ ವಾತಾವರಣವಿದೆ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಶಿಕ್ಷಕರು ಮತ್ತು ಪದವೀಧರರ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಪಕ್ಷ ಬಿಟ್ಟರೆ ಇನ್ನಾವ ಪಕ್ಷಗಳು ಗಮನಹರಿಸಲಿಲ್ಲ, ಆದರೆ, ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಇದೂವರೆಗೂ ಬಿಜೆಪಿ, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳೇ ಹೆಚ್ಚು ಗೆದ್ದಿದ್ದಾರೆ. ಯಾಕೆ ಎಂಬುದು ಅರ್ಥವಾಗಿಲ್ಲ, ಆದರೆ ಈಗ ಸಂದರ್ಭ ಬದಲಾಗಿದೆ, ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಜಾತಿ ಅಥವಾ ಇನ್ನಾವುದೇ ಆಮಿಷಗಳಿಗೆ ಮತದಾರರು ಬಲಿಯಾಗದೆ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಅವರನ್ನು ಬೆಂಬಲಿಸಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಕಳೆದ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ, ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದ ರಾಮಪ್ಪ ಅವರು ಮಾತನಾಡಿ, ಕ್ಷೇತ್ರದ ಎಲ್ಲಾ ಐದು ಜಿಲ್ಲೆಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ತಂಡ ರಚನೆ ಮಾಡಲಾಗಿದೆ, ಅವರು ಎಲ್ಲಾ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡುವರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಮೆಂಟ್ ಮಂಜುನಾಥ್, ಮುಖಂಡರಾದ ಪುಟ್ಟರಾಜು, ಕೆಂಪರಾಜು, ಸುಜಾತ, ಪ್ರಕಾಶ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
