ಕೆರೆ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಉತ್ತಮ ಸ್ಪಂದನೆ

ತುಮಕೂರು

    ನೀರಿಲ್ಲದೆ ಮಣ್ಣು ಮತ್ತು ಗಿಡ-ಗೆಂಟೆಗಳಿಂದ ಹೂತು ಹೋಗಿ, ಹೂಳೂ ತುಂಬಿರುವ ಕೆರೆಯನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಯುವ ಪಡೆ ಮುಂದಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿರುವ ಒಂದು ಉದಾತ್ತ ಪ್ರಸಂಗ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯಲ್ಲಿ ನಡೆದಿದೆ.

   ಕಳೆದ 19 ವರ್ಷಗಳ ಹೋರಾಟದ ಫಲವಾಗಿ ಈ ಭಾಗದ ಕೆರೆಗಳಿಗೆ ಈಗ ಹೇಮಾವತಿ ನೀರು ಹರಿದು ಬರುತ್ತಿದೆ. ಪರೀಕ್ಷಾರ್ಥವಾಗಿ ತಿಪಟೂರು ತಾಲ್ಲೂಕು ಗಡಬನಹಳ್ಳಿ ಮಾರ್ಗವಾಗಿ ಸಾಸಲು ಪೆಮ್ಮಲದೇವರಹಳ್ಳಿ ಕೆರೆಗೆ ಅ. 9 ರಂದು ನೀರನ್ನು ಹರಿಸಲಾಗಿದೆ. ಕಾಲುವೆ ಇನ್ನೂ ಪೂರ್ಣಗೊಳ್ಳಬೇಕಿರುವ ಕಾರಣ ಮುಂದಿನ ದಿನಗಳಲ್ಲಿ ಈ ಕೆರೆಗೆ ನೀರು ಹರಿಸಿ ನಂತರ ತಾಲ್ಲೂಕಿನ 26 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದೆ.

   ಸಾಸಲು ಪೆಮ್ಮಲದೇವರಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದಂತೆಯೇ ಪುಳಕಿತರಾದ ಶೆಟ್ಟಿಕೆರೆಯ ಒಂದಷ್ಟು ಪ್ರಜ್ಞಾವಂತ ಜನರು ತಮ್ಮೂರಿನಲ್ಲಿ ಹಾಳು ಬಿದ್ದಿರುವ ಕೆರೆಯನ್ನು ಸ್ವಚ್ಛಗೊಳಿಸಲು ಮುಂದಾದರು. ಗ್ರಾಮದ ಹಲವರು ನಗರಗಳಲ್ಲಿ ದುಡಿಯುತ್ತಿದ್ದು, ಈಗ ಊರಿನಲ್ಲಿದ್ದುಕೊಂಡು ಒಂದಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಈ ತಂಡ ಅಭಿಯಾನ ಆರಂಭಿಸಿ ವಾಟ್ಸಪ್ ಗ್ರೂಪ್‍ನಲ್ಲಿ ಶೇರ್ ಮಾಡುತ್ತಾ ಹೋದರು. ಕೆರೆಯಲ್ಲಿರುವ ಜಂಗಲ್ ತೆಗೆಸಲು ತಮ್ಮ ಕೈಲಾದ ಧನ ಸಹಾಯ ಮಾಡುವಂತೆ ಕೋರಿಕೊಂಡ ಬೆನ್ನಲ್ಲೇ 100 ರೂ.ಗಳಿಂದ ಹಿಡಿದು 10,000 ರೂ.ಗಳವರೆಗೆ ನೆರವು ನೀಡಿದ್ದಾರೆ. ಸಾವಿರಾರು ರೂಪಾಯಿಗಳು ಸಂಗ್ರಹವಾಗುತ್ತಲೇ ಕೆರೆ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಸ್ಪೂರ್ತಿ ಸಿಕ್ಕಿದೆ.

   ಟ್ರ್ಯಾಕ್ಟರ್, ಜೆಸಿಬಿ ಯಂತ್ರ ಬಳಸಿ ಕೆರೆ ಸ್ವಚ್ಛಗೊಳಿಸುವ ಕಾಯಕ ಭರದಿಂದ ಸಾಗಿದೆ. ಕೊರೊನಾ ಸಮಯದಲ್ಲಿ ಊರಿಗೆ ಬಂದು ನೆಲೆಸಿರುವವರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಹೊರಗೆ ನಗರಗಳಲ್ಲಿರುವವರು ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೇಮಾವತಿ ನೀರು ಹರಿದು ಕೆರೆ ತುಂಬಿಕೊಳ್ಳಲಿ ಎಂಬ ಸದಾಶಯ ಇವರೆಲ್ಲರದ್ದು.

   ಇನ್ನು ಕೆಲವರು ವಾಟ್ಸ್‍ಪ್ ಗ್ರೂಪ್‍ಗಳಲ್ಲಿ ಯುವಕರ ಈ ಅಭಿಯಾನಕ್ಕೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇಂತಹ ಸಾರ್ವಜನಿಕ ಉಪಯೋಗಿ ಕೆಲಸಗಳಿಗೆ ಸರ್ಕಾರ ಏಕೆ ಕೈ ಜೋಡಿಸಬಾರದು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಜನರೇ ಮಾಡುತ್ತಿದ್ದಾರೆ. ಹಾಗಾದರೆ ಇಲಾಖೆಗಳು ಇರುವುದಾದರೂ ಏತಕ್ಕೆ? ಸರ್ಕಾರದ ಇಲಾಖೆಗಳ ಅಡಿಯಲ್ಲಿ ಕೆರೆ ಹೂಳೆತ್ತುವ,ಸ್ವಚ್ಛಗೊಳಿಸುವ ಕಾಮಗಾರಿಗಳಿಗಾಗಿ ಸಾಕಷ್ಟು ಹಣ ವಿನಿಯೋಗವಾಗುತ್ತದೆ. ಈ ಹಣ ಇಂತಹ ಕಾರ್ಯಗಳಿಗೆ ಏಕೆ ಬಳಕೆಯಾಗಬಾರದು ಎಂಬುದಾಗಿ ಕೆಲವರು ಪ್ರಶ್ನಿಸುತ್ತಿದ್ದಾರೆ.

    ಇನ್ನು ಆ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಹೇಮಾವತಿ ನೀರು ಅಂತೂ ಈ ಭಾಗಕ್ಕೆ ಬಂತಲ್ಲ ಎಂಬ ಸಂಭ್ರಮ ಮನೆ ಮಾಡಿದೆ. ಸಾಸಲು, ಶೆಟ್ಟಿಕೆರೆ ಭಾಗಗಳಲ್ಲಿ ಇದೇ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದ್ದು, ಕಳೆದ 19 ವರ್ಷಗಳಿಂದ ನಡೆದ ಹೋರಾಟಗಳನ್ನು ಸ್ಮರಿಸುತ್ತಿದ್ದಾರೆ. 2013 ರಲ್ಲಿ ಆರಂಭವಾದ ನೀರಾವರಿ ಹೋರಾಟ ವೇದಿಕೆ, ಆ ನಂತರದ ದಿನಗಳಲ್ಲಿ ಈ ಕಾಮಗಾರಿ ಸರ್ಕಾರಿ ಕಡತಗಳಲ್ಲಿ ಸೇರ್ಪಡೆಯಾಗಲು ಶ್ರಮಿಸಿದ ಶಾಸಕರುಗಳು ಇವರಿಗೆ ನೆರವಾದ ಎಂಜಿನಿಯರ್‍ಗಳು, ಹುಳಿಯಾರಿನಲ್ಲಿ ನಡೆದ ರೈತ ಸಂಘಟನೆಗಳ ಹೋರಾಟ, ಸ್ವಾಮೀಜಿಗಳು ಬೆಂಬಲಿಸಿದ್ದು, ಇನ್ನು ಹಲವಾರು ಹೋರಾಟಗಾರರ, ಈಗಿನ ಜನಪ್ರತಿನಿಧಿಗಳ ಶ್ರಮ ಇವೆಲ್ಲವನ್ನೂ ಮೆಲುಕು ಹಾಕುತ್ತಿದ್ದಾರೆ.

   ಸರ್ಕಾರಕ್ಕೆ ಈಗ ಮನವಿ ಮಾಡಿ ಈ ಕಾಮಗಾರಿ ಕಾರ್ಯಗತಗೊಳ್ಳಬೇಕಾದರೆ ಸಾಕಷ್ಟು ದಿನಗಳು ಬೇಕು. ಅಲ್ಲಿಯ ತನಕ ಕಾಯುತ್ತಾ ಕುಳಿತರೆ ನೀರು ಸಂಗ್ರಹಣೆ ಮಾಡುವ ಉದ್ದೇಶ ಈಡೇರುವುದಿಲ್ಲ. ಈ ವರ್ಷ ಕೆರೆಕಟ್ಟೆಗಳಿಗೆ ನೀರು ಸಹ ಸಂಗ್ರಹವಾಗಿಲ್ಲ. ಈ ಹಿನ್ನೆಲೆಯಲ್ಲಿ ನನ್ನಂತಹ ಹಲವಾರು ಮಂದಿ ಮುಂದೆ ಬಂದು ಈ ಕಾರ್ಯ ಮಾಡಲು ಮುಂದಾದೆವು. ಶನಿವಾರ ಸಂಜೆ ವೇಳೆಗೆ 40 ಸಾವಿರ ರೂ.ಗಳು ಸಂಗ್ರಹವಾಗಿದ್ದವು. ಇನ್ನೂ ಕೊಡುವವರು ಇದ್ದಾರೆ. ಸದ್ಯಕ್ಕೀಗ ಕೆರೆಯಲ್ಲಿದ್ದ ಗಿಡಗಳನ್ನು ತೆಗೆಸಿ ಹಾಕಲಾಗಿದೆ. ಹೂಳು ಎತ್ತುವ ಕೆಲಸ ಮಾಡಲಾಗುತ್ತಿಲ್ಲ. ಇನ್ನೊಂದೆರಡು ದಿನಗಳ ಒಳಗೆ ಇಡೀ ಕೆರೆ ಸ್ವಚ್ಛವಾಗಲಿದೆ ಎನ್ನುತ್ತಾರೆ ಅಭಿಯಾನ ತಂಡದ ಸದಸ್ಯರಲ್ಲೊಬ್ಬರಾದ ಗುರುಪ್ರಸಾದ್ ಅವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap