ದಾವಣಗೆರೆ
ಜಿಲ್ಲೆಗೆ ಇನ್ನೊಂದು ಕೇಂದ್ರೀಯ ವಿದ್ಯಾಲಯ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಭರವಸೆ ನೀಡಿದರು.
ತಾಲೂಕಿನ ಆವರಗೊಳ್ಳದ ಗ್ರಾಮದ ಬಳಿಯಲ್ಲಿ ನಿರ್ಮಾಣವಾಗಿರು ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮತ್ತು ನೌಕರರ ಒತ್ತಾಸೆಯ ಮೇರೆಗೆ ಜಿಲ್ಲೆಗೆ ಇನ್ನೊಂದು ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ, ಈಗಾಗಲೇ ಕೇಂದ್ರ ಸಚಿವರು ಹಾಗೂ ಸರ್ಕಾರದ ಮೇಲೆ ಒತ್ತಡ ಏರಲಾಗಿದ್ದು, ಈ ವಿದ್ಯಾಲಯವನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಾಗ್ದಾನ ಮಾಡಿದರು.
ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ತಲಾ 10 ಎಕರೆ ಜಮೀನು ನೀಡುವುದಾಗಿ ಅಲ್ಲಿಯ ಶಾಸಕರುಗಳಾದ ಮಾಡಾಳು ವಿರೂಪಾಕ್ಷಪ್ಪ ಹಾಗೂ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಆದರೆ, ಚನ್ನಗಿರಿಯಲ್ಲಿ ಈಗಾಗಲೇ ಒಂದು ವಸತಿಯುತ ಶಾಲೆ ಇರುವುದರಿಂದ ಹೊನ್ನಾಳಿಗೆ ಕೇಂದ್ರೀಯ ವಿದ್ಯಾಲಯ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.
ಕೇಂದ್ರೀಯ ವಿದ್ಯಾಲಯ ಆರಂಭವಾಗಿ ಸುಮಾರು ಐದು ವರ್ಷ ಪೂರೈಸಿದ್ದು, ಆರಂಭದಲ್ಲಿ ಮನೆಯೊಂದರಲ್ಲಿ ನಡೆಯುತ್ತಿದ್ದ ವಿದ್ಯಾಲಯಕ್ಕೆ ಹೊಸ ಕಟ್ಟಡಬೇಕೆಂದು ಕೇಂದ್ರದಲ್ಲಿ ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದಾದ ಮೇಲೆ ಬೇಡಿಕೆ ಇಟ್ಟಿದೆ. ಅಲ್ಲದೆ, ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತ ಹತ್ತು ಎಕರೆ ಜಮೀನು ಸಹ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಮಾರು 13.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಎಂದರು.
ಖಾಲಿ ಹುದ್ದೆ ಭರ್ತಿ ಮಾಡಿ:
ಕೇಂದ್ರೀಯ ವಿದ್ಯಾಲಯಕ್ಕೆ ಸುಸಜ್ಜಿತ ಕಟ್ಟಡ ಏನೋ ನಿರ್ಮಾಣವಾಗಿದೆ. ಆದರೆ, ಇಲ್ಲಿ ಅಗತ್ಯವಾಗಿ ಉಪಾಧ್ಯಾಯರು ಸೇರಿದಂತೆ ಇತರೆ ಸಿಬ್ಬಂದಿಗಳಿಲ್ಲ. ವಿದ್ಯಾಲಯಕ್ಕೆ 24 ಹುದ್ದೆಗಳು ಮಂಜೂರಾಗಿದ್ದು, 14 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 10 ಹುದ್ದೆಗಳು ಖಾಲಿ ಇವೆ. ಆದ್ದರಿಂದ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವ ಮೂಲಕವನ್ನು ಈ ವಿದ್ಯಾಲಯವನ್ನು ರಾಜ್ಯದಲ್ಲಿಯೇ ಮಾದರಿ ವಿದ್ಯಾಲಯವನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಉಪಾಧ್ಯಾಯರು ಮಕ್ಕಳಿಗೆ ಶ್ರದ್ಧೆಯಿಂದ ಭೋದನೆ ಮಾಡುವುದರ ಜತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಏಕಲವ್ಯ ಶಾಲೆ:
ಕೇಂದ್ರೀಯ ವಿದ್ಯಾಲಯದ ಪಠ್ಯಕ್ರಮವೂ ದೇಶಾದ್ಯಂತ ಏಕರೂಪವಾಗಿರುವುದರಿಂದ ರಾಜ್ಯದಿಂದ ರಾಜ್ಯಗಳಿಗೆ ವರ್ಗಾವಣೆಯಾಗುವ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲೆಂಬ ಉದ್ದೇಶದಿಂದ ದೇಶ ಹಾಗೂ ಹೊರ ದೇಶಗಳಲ್ಲೂ ಈ ವಿದ್ಯಾಲಯಗಳನ್ನು ಆರಂಭಿಸಲಾಗಿದೆ. ರೈತರು ಮತ್ತು ಜನಸಾಮಾನ್ಯರ ಮಕ್ಕಳಿಗೆ ಶಿಕ್ಷಣ ನೀಡಲು ಮೋರಾರ್ಜಿ ದೇಸಾಯಿ, ನವೋದಯ, ಕಿತ್ತೂರುರಾಣಿ ಚನ್ನಮ್ಮ, ವಾಜಪೇಯಿ ವಸತಿಯುತ ಶಾಲೆಗಳಿವೆ. ಅದೇರೀತಿ ಜಗಳೂರು ತಾಲೂಕಿನ ಮಾಗಡಿ ಬಳಿಯಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಏಕಲವ್ಯ ವಸತಿಯುತ ಶಾಲೆ ತಲೆ ಎತ್ತುತ್ತಿದೆ ಎಂದರು.
ಪ್ರತಿಭೆ ಪಲಾಯನ:
ಪ್ರಸ್ತುತ ದೇಶದಲ್ಲಿ ಶಿಕ್ಷಣ ಗುಣಮಟ್ಟ ಕಾಡುತ್ತಿದೆ. ಒಬ್ಬ ವೈದ್ಯ ವಿದ್ಯಾರ್ಥಿಗೆ ವೈದ್ಯಕೀಯ ಶಿಕ್ಷಣ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಮಾರು 35ರಿಂದ 40 ಲಕ್ಷ ರೂ. ವ್ಯಯಿಸುತ್ತಿದೆ. ಆದರೆ, ಸರ್ಕಾರದ ಸೌಲಭ್ಯ ಪಡೆದು ನಮ್ಮ ದೇಶದಲ್ಲಿ ಎಂಬಿಬಿಎಸ್ ಮುಗಿಸಿರುವ ವಿದ್ಯಾರ್ಥಿಗಳು ಇಲ್ಲಿ ಸೇವೆ ಸಲ್ಲಿಸದೇ, ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಹೀಗೆ ಪ್ರತಿಭೆ ಪಲಾಯನವಾಗುತ್ತಿರುವುದಕ್ಕೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡದಿರುವುದೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಬೇಕೆಂದು ಕಿವಿಮಾತು ಹೇಳಿದರು.
ಆವರಗೊಳ್ಳ ಹೆಸರು ಬರ್ಸಿ:
ವಿದ್ಯಾರ್ಥಿಗಳ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಶಿಕ್ಷಣ ನೀತಿ ರೂಪಿಸುವ ಉದ್ದೇಶದಿಂದ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಅವರು, ಈ ಕೇಂದ್ರೀಯ ವಿದ್ಯಾಲಯವು ಆವರಗೊಳ್ಳದ ಸರ್ವೇ ನಂಬರ್‍ನಲ್ಲಿರುವುದರಿಂದ ಗ್ರಾಮಸ್ಥರ ಅಪೇಕ್ಷೆಯಂತೆ ವಿದ್ಯಾಲಯದ ನಾಮಫಲಕದಲ್ಲಿ ಆವರಗೊಳ್ಳ ಗ್ರಾಮದ ಹೆಸರು ಬರೆಯಿಸಬೇಕೆಂದು ಸೂಚಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ದಾವಣಗೆರೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭ ಆಗಿರುವುದರ ಹಿಂದೆ ಸಂಸದರ ಪಾತ್ರ ಮಹತ್ವದ್ದಾಗಿದೆ. ವಿದ್ಯಾಲಯದ ಕಟ್ಟಡ ತುಂಬ ಚೆನ್ನಾಗಿದೆ. ಇದೇರೀತಿ ಎಲ್ಲಾ ಶಾಲೆಗಳು ಇರಬೇಕೆಂಬುವುದು ನನ್ನ ಅಭಿಲಾಷೆಯಾಗಿದೆ. ಆದರೆ, ಈ ವಿದ್ಯಾಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇಂತಹ ಶಾಲೆಗಳಲ್ಲಿ ಜನಸಾಮಾನ್ಯರ ಮಕ್ಕಳಿಗೂ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಎಂಪಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಕೇಂದ್ರೀಯ ವಿದ್ಯಾಲಯ ಶಾಲೆಗಳ ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಡಿ.ಟಿ.ಎಸ್.ರಾವ್, ಸಹಾಯಕ ಆಯುಕ್ತರಾದ ಎ.ಕೆ.ಮಿಶ್ರ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರುಗಳಾದ ಬಿಜು ಪಿ.ವಿ, ಮುರಳಿಕೃಷ್ಣ, ಪಿ.ಸಿ.ರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ