ಚಿತ್ರದುರ್ಗ:
ಸಂವಿಧಾನ ಉಳಿದರೆ ಎಲ್ಲವೂ ಉಳಿಯುತ್ತದೆ. ಅದಕ್ಕಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಜಾಗೃತರಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳ ಮತ್ತು ಅಲ್ಪಸಂಖ್ಯಾತ ನೌಕರರ/ವಿದ್ಯಾರ್ಥಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಕರೆ ನೀಡಿದರು.
ಕರ್ನಾಟಕ ಪರಿಶಿಷ್ಚ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳ ಮತ್ತು ಅಲ್ಪಸಂಖ್ಯಾತ ನೌಕರರ ವಿದ್ಯಾರ್ಥಿಗಳ ಒಕ್ಕೂಟ, ಸಾಮಾಜಿಕ ಸಂಘರ್ಷ ಸಮಿತಿಯಿಂದ ಗುರುವಾರ ನಗರಸಭೆ ಸಮೀಪ ನಡೆದ ಡಾ.ಬಿ.ಆರ್.ಅಂಬೇಡ್ಕರ್‍ರವರ 63 ನೇ ಪರಿನಿಬ್ಬಾಣದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿನಿಬ್ಬಾಣದ ನೆಪದಲ್ಲಿ ಸಂವಿಧಾನವನ್ನು ಕಾಪಾಡಬೇಕಿದೆ. ಕಾಲ ಬುಡಕ್ಕೆ ನೀರು ಬಂದಿದೆ. ಯಾವಾಗ ಕೊಚ್ಚಿ ಹೋಗುತ್ತೇವೋ ಗೊತ್ತಿಲ್ಲ. ಇನ್ನಾದರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಿ. ಅಂಬೇಡ್ಕರ್ ಆಶಯ ಈಡೇರಬೇಕಾದರೆ ಪ್ರತಿ ವರ್ಷವೂ ಅಂಬೇಡ್ಕರ್‍ರವರ ಪರಿನಿಬ್ಬಾಣ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ಜಾತಿ ಮತವಿಲ್ಲದೆ ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಅಂಬೇಡ್ಕರ್‍ರವರ ಕನಸಿಗೆ ಈಗ ಕುತ್ತು ಬಂದಿದೆ ಎಂದರು
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಸ್.ಸಿ., ಎಸ್.ಟಿ.ನೌಕರರಿಗೆ ಮುಂಬಡ್ತಿ ಕಾಯ್ದೆ ಪಾಸ್ ಮಾಡಿದರು. ಆದರೆ ಸರ್ಕಾರ ಅದನ್ನು ಜಾರಿಗೆ ತರುವಲ್ಲಿ ಮೀನಾಮೇಷ ಎಣಿಸುತ್ತಿದೆ. ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಹಿಂಬಡ್ತಿಯಿಂದ ಮೂರರಿಂದ ನಾಲ್ಕು ಸಾವಿರ ಅಧಿಕಾರಿಗಳು ಹಾಗೂ ನೌಕರರು ಹತಾಶರಾಗಿದ್ದಾರೆ. ಹಿಂಬಡ್ತಿಯನ್ನು ರದ್ದುಪಡಿಸಿ ಮುಂಬಡ್ತಿ ಕಾಯ್ದೆಯನ್ನು ತಕ್ಷಣವೇ ಜಾರಿಗೊಳಿಸಿ ನೌಕರರ ಹಕ್ಕುಗಳನ್ನು ರಕ್ಷಿಸಿ ಅಹಿಂಸಾ ಸಂಘಟನೆ ಹೆಸರಿನಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ನೌಕರರು ಎಸ್.ಸಿ., ಎಸ್.ಟಿ.ನೌಕರರ ಮುಂಬಡ್ತಿಯನ್ನು ತಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಹಿಂದುಳಿದವರು, ಅಲ್ಪಸಂಖ್ಯಾತರಿಗೂ ಮುಂಬಡ್ತಿ ನೀಡಿ ಎಂದು ನಾವು ಹೋರಾಟ ಮಾಡಿದ್ದೇವೆ. ಅವರ ಪಾಲು ಅವರಿಗೆ ಕೊಡಲಿ ನಮ್ಮ ಪಾಲು ನಮಗೆ ಸಿಗಲಿ ಎಂಬ ನಮ್ಮ ನ್ಯಾಯಯುತವಾದ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದರು.
ಮಂಡಲ್ ವರದಿ ಜಾರಿಗೆ ಮೊದಲು ಒತ್ತಾಯಿಸಿದ್ದು, ನಾವುಗಳು. ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಇದೆ. ಎಸ್.ಸಿ., ಎಸ್.ಟಿ.ವಿದ್ಯಾರ್ಥಿಗಳು ಎಷ್ಟಾದರೂ ಬರಲಿ ಪ್ರವೇಶವಿಲ್ಲ ಎನ್ನುವಂತಿಲ್ಲ. ಗೌರವಯುತವಾಗಿ ವಿದ್ಯೆ ಕಲಿಯಲು ಅವಕಾಶ ಮಾಡಿಕೊಡಿ. ಕೆಲವು ಹಾಸ್ಟೆಲ್‍ಗಳಲ್ಲಿ ಗ್ರಂಥಾಲಯಗಳಿಲ್ಲ. ಎಸ್.ಸಿ/ಎಸ್.ಟಿ.ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ್ ಮಾತನಾಡುತ್ತ ಸಮ ಸಮಾಜದ ನಿರ್ಮಾಣ ಅಂಬೇಡ್ಕ ರ್‍ರವರ ಕನಸಾಗಿತ್ತು. ಆದರೆ ಒಂದು ಗುಂಪು ಈಗ ಯಾವ ಆಹಾರ ತಿನ್ನಬೇಕು. ಯಾವ ಬಟ್ಟೆ ತೊಡಬೇಕು ಎಂಬುದನ್ನು ನಿರ್ಣಯಿಸುವ ಮಟ್ಟಕ್ಕೆ ಬಂದಿದೆ ಎನ್ನುವುದಾದರೆ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಇನ್ನು ಏಕೆ ಜಾಗೃತರಾಗುತ್ತಿಲ್ಲ ಎನ್ನುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಆಗಸದಲ್ಲಿ ವಿಮಾನ ಹಾರಿಸುವುದು, ಎವರೆಸ್ಟ್ ಏರುವ ಇಂದಿನ ಕಾಲದಲ್ಲಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಸತ್‍ನ ಕೂಗಳತೆ ದೂರದಲ್ಲಿ ಸಂವಿಧಾನವನ್ನು ಸುಟ್ಟು ಹಾಕಿರುವವರು ನಮ್ಮ ನಿಮ್ಮೆಲ್ಲರನ್ನು ಸುಟ್ಟು ಹಾಕುವ ಕಾಲ ದೂರವಿಲ್ಲ. ಎಚ್ಚರಗೊಳ್ಳಬೇಕಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಮೇಲ್ವರ್ಗದವರು ಯಾರು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಇಂದಿಗೂ ನಾವುಗಳೆಲ್ಲಾ ಇನ್ನು ಅಸ್ಪಶ್ಯರಾಗಿಯೇ ಉಳಿದಿದ್ದೇವೆ. ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಂಡಿತ ಎಂದು ಅರಿವು ಮೂಡಿಸಿದರು.ಪ್ರೊ.ಸಿ.ಕೆ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು.
ಡಯಟ್‍ನ ಪ್ರಾಧ್ಯಾಪಕ ಎಂ.ರೇವಣಸಿದ್ದಪ್ಪ, ಪ್ರೊ.ಕೆ.ಕೆ.ಕಮಾನಿ, ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶಂಕರ್, ನಗರಸಭೆ ಸದಸ್ಯ ಜೈನುಲ್ಲಾಬ್ದಿನ್, ಚಿಕ್ಕಣ್ಣ, ವೀರಭದ್ರಸ್ವಾಮಿ, ಸಣ್ಣಸೂರಮ್ಮ, ಸೂರನಾಯಕ, ಡಾ.ಗುರುನಾಥ್, ನಂದಗೋಪಾಲ್, ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಕೆ.ಕುಮಾರ್, ಬನಶಂಕರಿ, ನರಸಿಂಹಮೂರ್ತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ದಯಾನಂದ್, ವೀರಭದ್ರಪ್ಪ, ಜಾನಪದ ಹಾಡುಗಾರ ಚಂದ್ರಪ್ಪ ಕಾಲ್ಕೆರೆ, ವೆಂಕಟೇಶ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಮುರಾರ್ಜಿ ಮತ್ತು ತಂಡದವರು ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ