ತುಮಕೂರು
ತುಮಕೂರು ಮಹಾನಗರ ಪಾಲಿಕೆಯಲ್ಲೀಗ ಹೊಸ ಆಯುಕ್ತರಾಗಿ ಐ.ಎ.ಎಸ್. ಅಧಿಕಾರಿ ಇದ್ದಾರೆ. ಈಗಷ್ಟೇ ಚುನಾಯಿತ ಮಂಡಲಿ (ಕೌನ್ಸಿಲ್) ಅಧಿಕಾರಕ್ಕೆರಿದೆ. ಹೊಸ ಆಯುಕ್ತರ ಪರಿಣಾಮಕಾರಿ ಕ್ರಮಗಳಿಂದ ಪಾಲಿಕೆಯ ಆಡಳಿತದಲ್ಲಿ ಮೆಲ್ಲಗೆ ಬದಲಾವಣೆಯ ಗಾಳಿ ಬೀಸತೊಡಗಿದೆ. ಸಹಜವಾಗಿಯೇ `ತೆರಿಗೆದಾರ ನಾಗರಿಕ’ರಲ್ಲಿ ಪಾಲಿಕೆ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಆಯುಕ್ತರ ಕ್ರಿಯಾಶೀಲತೆ
ಪಾಲಿಕೆ ಅಸ್ತಿತ್ವಕ್ಕೆ ಬಂದು ಐದು ವರ್ಷಗಳಾದ ಬಳಿಕ ಇದೇ ಮೊದಲ ಬಾರಿಗೆ ಐ.ಎ.ಎಸ್. ಅಧಿಕಾರಿ (ಟಿ.ಭೂಪಾಲನ್) ಒಬ್ಬರನ್ನು ಆಯುಕ್ತರನ್ನಾಗಿ ಸರ್ಕಾರ ನಿಯುಕ್ತಿಗೊಳಿಸಿದೆ. ಆಯುಕ್ತ ಭೂಪಾಲನ್ ಅವರು ಜನವರಿ 18 ರಂದು ಅಧಿಕಾರ ಸ್ವೀಕರಿಸಿದ ತಕ್ಷಣದಿಂದಲೇ ತಮ್ಮದೇ ಆದ ಕಾರ್ಯಶೈಲಿ ಆರಂಭಿಸಿದ್ದಾರೆ. ಪಾಲಿಕೆ ಆಡಳಿತದಲ್ಲಿ ದಕ್ಷತೆ ತರುವ ಸಲುವಾಗಿ ಸುಧಾರಣಾ ಕ್ರಮಗಳನ್ನು ಹಂತಹಂತವಾಗಿ ಜಾರಿಗೆ ತರಲಾರಂಭಿಸಿದ್ದಾರೆ.
ವಿಶೇಷವಾಗಿ ಪಾಲಿಕೆಯ ಸಂಪನ್ಮೂಲ ಸಂಗ್ರಹಕ್ಕೆ ವಿಶೇಷ ಒತ್ತು ನೀಡುತ್ತ, ಜೊತೆಯಲ್ಲೇ ದುಂದುವೆಚ್ಚಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡುತ್ತಿದ್ದಾರೆ. ಜಡ್ಡುಗಟ್ಟಿದ್ದ ಆಡಳಿತಯಂತ್ರವನ್ನು ಚುರುಕುಗೊಳ್ಳುವಂತೆ ಮಾಡಲು ಆಡಳಿತಾತ್ಮಕವಾಗಿ ಹಲವು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳತೊಡಗಿದ್ದಾರೆ.
ಪಾಲಿಕೆ ಕಚೇರಿಯ ಎಲ್ಲ ವಿಭಾಗಗಳಿಗೆ ಹಾಗೂ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುವ ಮೂಲಕ ಪಾಲಿಕೆಯ ಒಳಗಿನ ಮತ್ತು ಹೊರಗಿನ ವಾತಾವರಣವನ್ನು ಹಾಗೂ ವಾಸ್ತವತೆಯನ್ನು ಸ್ವತಃ ಅರಿತುಕೊಳ್ಳುತ್ತಾ ಅಧಿಕಾರಿಗಳು-ನೌಕರರು ಸಕ್ರಿಯರಾಗಿರುವಂತೆ ಮಾಡುತ್ತಿದ್ದಾರೆ. ಆಯುಕ್ತರ ಕ್ರಿಯಾಶೀಲತೆಯು ಅಧಿಕಾರಿಗಳು ಮತ್ತು ಸಿಬ್ಬಂದಿಯವರು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡತೊಡಗಿದೆ. ಪಾಲಿಕೆ ಆಡಳಿತದ ಸುಧಾರಣೆ ಬಗ್ಗೆ, ತುಮಕೂರು ನಗರದ ಅಭಿವೃದ್ಧಿ ಬಗ್ಗೆ ಭೂಪಾಲನ್ ತಮ್ಮದೇ ಆದ ಪರಿಕಲ್ಪನೆ ಹೊಂದಿದ್ದು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡತೊಡಗಿದ್ದಾರೆ. ಇವೆಲ್ಲ ಈಗ ಪಾಲಿಕೆ ಕಚೇರಿಯಲ್ಲಿ ಕಾಣುತ್ತಿರುವ ಸಕಾರಾತ್ಮಕ ಬದಲಾವಣೆಗಳು.
34 ಸದಸ್ಯರ ಹೊಸ ಕೌನ್ಸಿಲ್,17 ಮಹಿಳಾ ಸದಸ್ಯರುಗಳು
ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ಪಾಲಿಕೆಯ ಚುನಾಯಿತ ಮಂಡಲಿ (ಕೌನ್ಸಿಲ್) ಅಸ್ತಿತ್ವಕ್ಕೆ ಬಂದಿದೆ. ಜನವರಿ 30 ರಂದು ಮೇಯರ್ ಆಗಿ ಲಲಿತಾ ರವೀಶ್ (ಜೆಡಿಎಸ್) ಮತ್ತು ಉಪಮೇಯರ್ ಆಗಿ ಬಿ.ಎಸ್.ರೂಪಶ್ರೀ (ಕಾಂಗ್ರೆಸ್) ಅವಿರೋಧವಾಗಿ ಆಯ್ಕೆಯಾಗಿದ್ದು, ಇದರೊಂದಿಗೆ ಮುಂದಿನ ಐದು ವರ್ಷಗಳ ಕಾಲ ಚುನಾಯಿತ ಮಂಡಲಿ ಅಧಿಕಾರ ನಡೆಸಲಿದೆ. ಪಾಲಿಕೆಯ ಒಟ್ಟು ಸದಸ್ಯ ಬಲ 35 ಆಗಿದೆಯಾದರೂ, ಒಬ್ಬ ಸದಸ್ಯರು (22 ನೇ ವಾರ್ಡ್) ಹತ್ಯೆಯಾದ ಕಾರಣ ಇದೀಗ ಒಟ್ಟು 34 ಚುನಾಯಿತ ಸದಸ್ಯರುಗಳಿದ್ದಾರೆ. ಇವರಲ್ಲಿ 17 ಮಹಿಳಾ ಸದಸ್ಯರುಗಳೆಂಬುದು ಗಮನಾರ್ಹ.
29 ಸದಸ್ಯರೂ ಹೊಸಬರು
ಮಹಾನಗರ ಪಾಲಿಕೆಯ ಈಗಿನ ಒಟ್ಟು 34 ಸದಸ್ಯರುಗಳ ಪೈಕಿ 29 ಸದಸ್ಯರುಗಳು ಪಾಲಿಕೆಗೆ ಹೊಸಬರು ಹಾಗೂ ಹೊಸಮುಖಗಳು ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಹಿಂದಿನ ಮಹಾನಗರ ಪಾಲಿಕೆಯಲ್ಲಿ ಸದಸ್ಯರಾಗಿದ್ದವರ ಪೈಕಿ, ಕೇವಲ ಮೂವರು ಸದಸ್ಯರುಗಳು ಮಾತ್ರ ಪಾಲಿಕೆಗೆ ಪುನರಾಯ್ಕೆಗೊಂಡಿರುವವರಾಗಿದ್ದಾರೆ. ಅವರುಗಳೆಂದರೆ ಈಗ ಮೇಯರ್ ಆಗಿರುವ ಜೆ.ಡಿ.ಎಸ್.ನ ಲಲಿತಾ ರವೀಶ್ (21 ನೇ ವಾರ್ಡ್), ಕಾಂಗ್ರೆಸ್‍ನ ಸೈಯದ್ ನಯಾಜ್ (8 ನೇ ವಾರ್ಡ್) ಮತ್ತು ಕಾಂಗ್ರೆಸ್‍ನ ಮುಜೀದಾ ಖಾನಂ (18 ನೇ ವಾರ್ಡ್).
ಈ ಹಿಂದೆ ಅಸ್ತಿತ್ವದಲ್ಲಿದ್ದ ನಗರಸಭೆಯಲ್ಲಿ ಸದಸ್ಯರಾಗಿ ಆ ಅವಧಿಯ ಬಳಿಕ ಮಾಜಿ ಆಗಿದ್ದು, ಈಗಿನ ಮಹಾನಗರ ಪಾಲಿಕೆಗೆ ಚುನಾಯಿತರಾಗಿರುವ ಇಬ್ಬರು ಸದಸ್ಯರುಗಳಿದ್ದಾರೆ. ಅವರುಗಳೆಂದರೆ ಜೆಡಿಎಸ್‍ನ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್) ಮತ್ತು ಜೆಡಿಎಸ್‍ನ ಟಿ.ಕೆ. ನರಸಿಂಹಮೂರ್ತಿ (23 ನೇ ವಾರ್ಡ್).
ಈ ಐವರಿಗಷ್ಟೇ ಪಾಲಿಕೆಯ ಕಾರ್ಯವಿಧಾನದ ಪರಿಚಯ ಇದ್ದು, ಮಿಕ್ಕ 29 ಸದಸ್ಯರುಗಳೂ ಪಾಲಿಕೆಗೆ ಸಂಪೂರ್ಣ ಹೊಸಬರಾಗಿದ್ದಾರೆ (ಈ 29 ಸದಸ್ಯರುಗಳ ಪೈಕಿ ಮೂವರು ಸದಸ್ಯೆಯರ “ಪತಿರಾಯರು” ಕಳೆದ ಪಾಲಿಕೆಯಲ್ಲಿ ಸದಸ್ಯರುಗಳಾಗಿದ್ದರು). ಎಲ್ಲ ಸದಸ್ಯರುಗಳೂ ಅನೇಕ “ಕನಸು”ಗಳನ್ನು ಹೊತ್ತುಕೊಂಡು ಪಾಲಿಕೆಗೆ ಆರಿಸಿಬಂದಿದ್ದಾರೆ. ಅನೇಕ ಸದಸ್ಯರುಗಳಲ್ಲಿ ಉತ್ಸಾಹವಂತೂ ಇದೆ.
ಜನರಲ್ಲಿ ಹೊಸ ನಿರೀಕ್ಷೆ
ಹೀಗೆ ಒಂದೆಡೆ ಹೊಸ ಆಯುಕ್ತರಿದ್ದರೆ, ಮತ್ತೊಂದೆಡೆ ಹೊಸ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬಂದಿದೆ. ಎರಡೂ ಕಡೆಯೂ ಸಾಧನೆ ಮಾಡಬೇಕೆಂಬ ಉತ್ಸಾಹವಿದೆ. ಸಹಜವಾಗಿಯೇ ಇದು “ತೆರಿಗೆದಾರ ನಾಗರಿಕ”ರಲ್ಲಿ ಅಪಾರ ನಿರೀಕ್ಷೆಗಳನ್ನು, ಭರವಸೆಗಳನ್ನು ಉಂಟುಮಾಡುತ್ತಿದೆ. ಈವರೆಗೆ ಪಾಲಿಕೆ ಆಡಳಿತ ಒಂದು ರೀತಿ ಜಡ್ಡುಗಟ್ಟಿತ್ತು. ಕಳೆದ ಐದು ತಿಂಗಳುಗಳಿಂದ ಚುನಾಯಿತ ಮಂಡಲಿ ಅಸ್ತಿತ್ವದಲ್ಲಿಲ್ಲದೆ ಜನರ ಧ್ವನಿಯೂ ಕ್ಷೀಣಗೊಂಡಿತ್ತು. ಪಾಲಿಕೆ ಎಂದೊಡನೆ “ಇಲ್ಲೇನೂ ಸುಧಾರಣೆ ಸಾಧ್ಯವೇ ಇಲ್ಲ” ಎಂಬ ನಿರಾಶೆ ಎಲ್ಲರನ್ನೂ ಆವರಿಸಿತ್ತು.
ಇಂತಹ ಪರಿಸ್ಥಿತಿಯಲ್ಲಿ ಹೊಸ ಆಯುಕ್ತರು ಕೈಗೊಳ್ಳುತ್ತಿರುವ ಕ್ರಮಗಳು ಪಾಲಿಕೆಯಲ್ಲಿರುವ ಕ್ರಿಯಾಶೀಲ ಸಿಬ್ಬಂದಿಯಲ್ಲಿ ಲವಲವಿಕೆ ಉಂಟುಮಾಡುತ್ತಿರುವುದು ಗೋಚರಿಸತೊಡಗಿದೆ. ಆಯುಕ್ತರ ಬಗ್ಗೆ ಅವರಿಗಿಂತ ಹಿರಿಯ ಐ.ಎ.ಎಸ್. ಅಧಿಕಾರಿಗಳು ವ್ಯಕ್ತಪಡಿಸಿರುವ “ಸಕಾರಾತ್ಮಕ ಅನಿಸಿಕೆಗಳು” ನಗರದ ಹೋರಾಟಗಾರರ ವಲಯದಲ್ಲಿ ಆಶಾಭಾವನೆ ಮೂಡಿಸುತ್ತಿದೆ. ತುಮಕೂರು ನಗರದಲ್ಲಿ `ಸ್ಮಾರ್ಟ್‍ಸಿಟಿ’ ಯೋಜನೆಗಳೂ ಅನುಷ್ಠಾನಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಪಾಲಿಕೆ ಆಡಳಿತದಲ್ಲಿ ಆಗುತ್ತಿರುವ ಇಂತಹ ಬದಲಾವಣೆಗಳು “ತೆರಿಗೆದಾರ ನಾಗರಿಕ”ರ ವಲಯದ ಗಮನವನ್ನು ಸೆಳೆಯತೊಡಗಿದೆ. ಆಯುಕ್ತರು ಕಾನೂನಿನ ಪ್ರಕಾರ ಕೈಗೊಳ್ಳುತ್ತಿರುವ ಸುಧಾರಣಾ ಕ್ರಮಗಳಿಗೆ ಚುನಾಯಿತ ಮಂಡಲಿ ಹೇಗೆ ಸ್ಪಂದಿಸುತ್ತದೆಂಬುದು ಹಾಗೂ ಹೇಗೆ ಸಹಕಾರ ನೀಡುತ್ತದೆಂಬುದು ಈಗ ನಿರ್ಣಾಯಕವಾಗಿದ್ದು, ಇದು “ತೆರಿಗೆದಾರ ನಾಗರಿಕ”ರ ವಲಯದಲ್ಲಿ ಕದನ ಕುತೂಹಲವನ್ನು ಕೆರಳಿಸಿದೆ.