ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಬದಲಾವಣೆ

ಚಿತ್ರದುರ್ಗ:

       ಎಪ್ಪತ್ತು ವರ್ಷಗಳಿಂದ ದೇಶದಲ್ಲಿ ಆಗದ ಬಲಾವಣೆಯನ್ನು ಪ್ರಧಾನಿ ನರೇಂದ್ರಮೋದಿರವರು ಕೇವಲ ನಾಲ್ಕವರೆ ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುಣಗಾನ ಮಾಡಿದರು.

       ಭಾರತೀಯ ಜನತಾಪಾರ್ಟಿ ಜಿಲ್ಲಾ ಆರ್ಥಿಕ ಪ್ರಕೋಷ್ಟದಿಂದ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ನರೇಂದ್ರಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ವಿಶ್ಲೇಷಣೆ ಮತ್ತು ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು.

       ದೇಶದ ಅರ್ಥವ್ಯವಸ್ಥೆಯನ್ನೇ ಹಾಳು ಮಾಡಿರುವ ಕಾಂಗ್ರೆಸ್‍ನವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ.ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ನರೇಂದ್ರಮೋದಿರವರ ಸಾಧನೆ ಏನು ಎಂಬುದು ದೇಶದ ಜನರಿಗೆ ಗೊತ್ತಿದೆ. ನಾಲ್ಕುವರೆ ವರ್ಷದಲ್ಲಿ ಪ್ರಧಾನಿರವರ ಗುರುತರ ಸಾಧನೆಯನ್ನು ಪ್ರತಿ ಮನೆ ಮನೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.

        1970-71 ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿದರು. ಆದರೆ ನಿಜವಾದ ಬಡವರಿಗೆ ಬ್ಯಾಂಕ್‍ನಲ್ಲಿ ವ್ಯವಹರಿಸುವ ಅವಕಾಶ ಸಿಗಲಿಲ್ಲ. ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಯಾವುದೇ ಠೇವಣಿಯಿಲ್ಲದೆ ಬಡವರು ಉಚಿತವಾಗಿ ಬ್ಯಾಂಕ್‍ಗಳಲ್ಲಿ ಜನ್‍ಧನ್ ಖಾತೆ ತೆರೆಯಲು ಅವಕಾಶ ಮಾಡಿಕೊಟ್ಟರು ಇದರಿಂದ 60 ಕೋಟಿ ಮಂದಿ ಬ್ಯಾಂಕ್‍ನಲ್ಲಿ ಖಾತೆ ತೆರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದಿನಕ್ಕೆ ಕೇವಲ ಒಂದರಿಂದ ಎರಡು ಕಿ.ಮೀ.ಹೆದ್ದಾರಿ ರಸ್ತೆಯಾಗುತ್ತಿತ್ತು. ಈಗಿನ ಬಿಜೆಪಿ.ಸರ್ಕಾರದಲ್ಲಿ ದಿನಕ್ಕೆ ನಲವತ್ತರಿಂದ ಐವತ್ತು ಕಿ.ಮೀ.ಹೆದ್ದಾರಿ ರಸ್ತೆಯಾಗುತ್ತಿದೆ. ಇವೆಲ್ಲ ಕಣ್ಣಿದುರಿಗೆ ಕಾಣುವ ಅಭಿವೃದ್ದಿ ಕೆಲಸಗಳು ಎಂದರು

        ಫಸಲ್‍ಭೀಮ ಯೋಜನೆ, ರೈತರಿಗೆ ಬೆಂಬಲ ಬೆಲೆ, ಮೂಲೆಗುಂಪಾಗಿದ್ದ ಸ್ವಾಮಿನಾಥನ್ ವರದಿಗೆ ಅನುಷ್ಠಾನ, ಹತ್ತಿ, ತೊಗರಿ, ಕಡಲೆಗೆ ಉತ್ತಮ ಬೆಲೆ ನೀಡಿರುವುದರಿಂದ ರೈತರ ಜೀವನ ಮಟ್ಟ ಸುಧಾರಣೆಯಾಗಿದೆ. ಇವುಗಳನ್ನು ನೋಡಿ ಸಹಿಸಿಕೊಳ್ಳಲು ಆಗದೆ ಕಾಂಗ್ರೆಸ್‍ನವರು ಮೋದಿ ಬಗ್ಗೆ ಸುಳ್ಳು ಹೇಳಿಕೊಂಡು ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಜನ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

          ಟುಜಿ.ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣ, ಪೆಟ್ರೋಲ್, ಡೀಸೆಲ್‍ನಲ್ಲಿ ಅವ್ಯವಹಾರ, ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಕೋಟಿ ರೂ.ಗಳ ಲೂಟಿ ಹೊಡೆದಿರುವುದನ್ನು ದೇಶದ ಜನತೆಗೆ ತಿಳಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿರವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ತಿಳಿಸಿದರು.

         ಆರ್ಥಿಕ ತಜ್ಞ ಬೆಂಗಳೂರಿನ ವಿಶ್ವನಾಥ್‍ಭಟ್ ಮಾತನಾಡುತ್ತ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್‍ನವರು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತೆ ದೇಶದ ಪ್ರಧಾನಿ ಮೋದಿ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಾಲ್ಕುವರೆ ವರ್ಷಗಳ ಅಧಿಕಾರವಧಿಯಲ್ಲಿ ನರೇಂದ್ರಮೋದಿರವರು ಮಾಡಿರುವ ಸಾಧನೆಯಿಂದ ಕಾರ್ಯಕರ್ತರು ಎದೆಯುಬ್ಬಿಸಿ ತಲೆಎತ್ತಿ ಮತದಾರರ ಬಳಿ ಹೋಗಿ ಧೈರ್ಯವಾಗಿ ಮತಕೇಳಬಹುದು. ಮೋದಿ ಸರ್ಕಾರ ಗುರುತರ ಸಾಧನೆಗೈದಿರುವುದಕ್ಕೆ ಅಮೇರಿಕಾದ ವೆಲ್ತ್ ಮ್ಯಾನೇಜ್‍ಮೆಂಟ್ ಕಂಪನಿ ಮೆಚ್ಚುಗೆ ಸೂಚಿಸಿದೆ ಎಂದು ಹೇಳಿದರು.

          ಕಾಂಗ್ರೆಸ್‍ನವರು ಮೋದಿಗೆ ದೇಶದ ಅಧಿಕಾರ ಬಿಟ್ಟುಕೊಡುವಾಗ 54 ಲಕ್ಷ ಕೋಟಿ ರೂ.ಸಾಲ ಇತ್ತು. 3 ಲಕ್ಷ 74 ಸಾವಿರ ಕೋಟಿ ರೂ.ಬಡ್ಡಿ ಕಟ್ಟಬೇಕಾಗಿತ್ತು. ಕೇಂದ್ರ ಸರ್ಕಾರಕ್ಕೆ ಪಾವತಿಯಾಗುತ್ತಿದ್ದ ಶೇ.46 ರಷ್ಟು ಹಣ ಬಡ್ಡಿಗೆ ಹೋಗುತ್ತಿತ್ತು. ಆರ್ಥಿಕವಾಗಿ ವಿಷಮ ಸ್ಥಿತಿಯಲ್ಲಿದ್ದ ಭಾರತವನ್ನು ಈಗ ಜಗತ್ತು ತಿರುಗಿನೋಡುವಂತೆ ಮಾಡಿರುವ ಕೀರ್ತಿ ಮೋದಿರವರಿಗೆ ಸಲ್ಲಬೇಕು. ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‍ನವರು ಗ್ರಾಮೀಣ ಪ್ರದೇಶವನ್ನು ಅಧಃಪತನಕ್ಕೆ ತಳ್ಳಿದ್ದಾರೆ. ಹಾಗಾಗಿ ಕೇಂದ್ರದ ಬಿಜೆಪಿ.ಸಾಧನೆ, ಕಾಂಗ್ರೆಸ್‍ನ ದುರಾಡಳಿತವನ್ನು ಜನತೆಗೆ ತಿಳಿಸಿ ಮತ್ತೆ ಬಿಜೆಪಿ.ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ವಿನಂತಿಸಿದರು.

          ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ ದೇಶ ಆತಂಕಕಾರಿ ಪರಿಸ್ಥಿತಿಯಲ್ಲಿದೆ. ಯಾವುದನ್ನು ನಂಬಬೇಕು. ಯಾವುದನ್ನು ಬಿಡಬೇಕು ಎನ್ನುವ ಗೊಂದಲ ಜನತೆಯನ್ನು ಕಾಡುತ್ತಿದೆ. ಇದಕ್ಕೆ ಕಾಂಗ್ರೆಸ್‍ನವರ ಅಪಪ್ರಚಾರವೇ ಕಾರಣ. ಜಗತ್ತಿನ ಬೇರೆ ದೇಶಗಳ ಸಾಲಿನಲ್ಲಿ ಭಾರತವನ್ನು ಶಕ್ತಿಶಾಲಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿರವರು ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್‍ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ತೇಜೋವಧೆ ಮಾಡಲು ಹೊರಟಿದ್ದಾರೆ. ವಿಶೇಷವಾಗಿ ಯುವಜನಾಂಗ, ವಿದ್ಯಾರ್ಥಿಗಳು ಬಿಜೆಪಿ.ದೇಶಕ್ಕೆ ನೀಡಿರುವ ಕೊಡುಗೆಯನ್ನು ತಿಳಿದುಕೊಂಡಿರಬೇಕು ಎಂದು ಜಾಗೃತಿಗೊಳಿಸಿದರು.

        ಎಫ್.ಕೆ.ಸಿ.ಸಿ.ಐ.ಕೈಗಾರಿಕಾ ಸಮಿತಿ ಅಧ್ಯಕ್ಷ ಚಳ್ಳಕೆರೆಯ ಎನ್.ಸತೀಶ್‍ಬಾಬು, ಆರ್ಥಿಕ ಪ್ರಕೋಷ್ಟದ ಸಹ ಸಂಚಾಲಕಿ ಲತ ನರಸಿಂಹಮೂರ್ತಿ , ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್ ವೇದಿಕೆಯಲ್ಲಿದ್ದರು.ಅರ್ಚನ, ಸುಪ್ರಿತ ಪ್ರಾರ್ಥಿಸಿದರು, ವಿಜಯಣ್ಣ ಸ್ವಾಗತಿಸಿದರು. ಮುರುಳಿ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link