ತುರುವೇಕೆರೆ
ರೈತ ಟ್ರ್ಯಾಕ್ಟರ್ ಸಾಲದ ಕಂತನ್ನು ಕಟ್ಟಿಲ್ಲವೆಂಬ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿವರ್ಗ ಮನೆ ಹತ್ತಿರ ಬಂದು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ ಎಂಬ ಕಾರಣಕ್ಕೆ ತಾಲ್ಲೂಕಿನ ರೈತಸಂಘದ ಸದಸ್ಯರು ಹಾಗೂ ರೈತರು ಪಿಎಲ್‍ಡಿ ಬ್ಯಾಂಕ್ ಬಳಿ ತೆರಳಿ ಅಧಿಕಾರಿಗಳ ಮೇಲೆ ವಾಗ್ವಾದ ನಡೆಸಿದರು.
ತಾಲ್ಲೂಕಿನ ಮಯಸಂದ್ರ ಹೋಬಳಿ ದ್ವಾರನಹಳ್ಳಿ ಗ್ರಾಮದ ಹನುಮೇಗೌಡ ಎಂಬುವರು ಪಿಎಲ್‍ಡಿ ಬ್ಯಾಂಕ್‍ನಲ್ಲಿ 6 ಲಕ್ಷ ರೂ. ಟ್ರ್ಯಾಕ್ಟರ್ ಸಾಲ ಪಡೆದು ಜ.4 ಕ್ಕೆ 4,77,800 ರೂ ಬಾಕಿ ಕಟ್ಟದೆ ಸುಸ್ತಿದಾರರಾಗಿರುತ್ತಾರೆ ಎಂಬ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು ರೈತನ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೋಗಿದ್ದಾರೆ. ವಿಷಯ ತಿಳಿದ ತಾಲ್ಲೂಕು ರೈತಸಂಘದ ಪದಾಧಿಕಾರಿಗಳು ಹಾಗೂ ಕೆಲವು ರೈತರು ಶುಕ್ರವಾರ ಬ್ಯಾಂಕ್ ಬಳಿ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ ಮಾತನಾಡಿ, ಟ್ರ್ಯಾಕ್ಟರ್ ವಸೂಲಿಯನ್ನು ಬ್ಯಾಂಕಿನವರು ಕ್ರಮಬದ್ದವಾಗಿ ಮಾಡಿ, ಸಾಲಗಾರರ ಮನೆ ಬಳಿ ಹೋಗಿ ಡಂಗೂರ ಸಾರಿಸಿ ರೈತನಿಗೆ ಅಪಮಾನ ಮಾಡಬೇಡಿ. ಬರಗಾಲದಿಂದ ತತ್ತರಿಸಿರುವ ರೈತನಿಗೆ ಸಮಯಾವಕಾಶ ನೀಡಿ, ರೈತ ಎಂದಿಗೂ ಮೋಸ ಮಾಡುವುದಿಲ್ಲ. ಈಗಾಗಲೇ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ನೋಟೀಸ್ ನೀಡದೆ ಏಕಾಏಕಿ ಸಾಲಗಾರರ ಮೇಲೆ ಈ ತರಹದ ಕ್ರಮ ಜರುಗಿಸಿದರೆ ನಾವುಗಳು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಬ್ಯಾಂಕಿನ ಕ್ಷೇತ್ರಾಧಿಕಾರಿ ಮುರುಳೀಧರ್ ಮಾತನಾಡಿ, ತಾಲ್ಲೂಕಿನಲ್ಲಿ 74 ರೈತರು ಟ್ರ್ಯಾಕ್ಟರ್ ಸಾಲ ಪಡೆದಿದ್ದು ಅವರಲ್ಲಿ 35 ಟ್ರ್ಯಾಕ್ಟರ್ ರೈತರ ಸುಸ್ತಿ ಇದೆ. ಉಳಿದವರು ಸಕಾಲಕ್ಕೆ ಕಟ್ಟುತ್ತಿದ್ದಾರೆ. ಸರ್ಕಾರ ಆದೇಶ ಮಾಡಿದೆ ಅದರೆ ಬಜೆಟ್ ಮಂಡನೆಯಾಗಿಲ್ಲ. ಸರ್ಕಾರದ ಆದೇಶದಂತೆ ವಸೂಲಿ ಕ್ರಮ ಕೈಗೊಂಡಿದ್ದೆವು. ಒಂದಷ್ಟು ರೈತರು ಹಣ ಕಟ್ಟದೆ ಗಲಾಟೆ ಮಾಡಿದ್ದರಿಂದ ನಾವುಗಳು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ಉಪಾಧ್ಯಕ್ಷ ನಾಗರಾಜು, ರಹಮತ್, ಯುಗಂತ್, ಗೋವಿಂದರಾಜ್, ಪರಮೇಶ್, ರಂಜಿತ್, ಚಂದ್ರಯ್ಯ, ಶಂಕರಯ್ಯ, ಗುಡ್ಡೇನಹಳ್ಳಿ ಉಮೇಶ್, ರಾಜಣ್ಣ, ಗೋಣಿತುಮಕೂರು ರಾಮೇಗೌಡ, ತಿರುಮಲಯ್ಯ ಮುರುಳಿಕುಪ್ಪೆ, ಮಲ್ಲಿಕಾರ್ಜುನ್, ಮಂಜಣ್ಣ ಸೇರಿದಂತೆ ಅನೇಕ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ