ದಾವಣಗೆರೆ :
ಪ್ರಸ್ತುತ ದೇಶದಲ್ಲಿ ಸಂವಿಧಾನ ಮತ್ತು ಕೋಮುವಾದಿಗಳು ತಮ್ಮ ಸಂವಿಧಾನ ಎಂಬುದಾಗಿ ಪ್ರತಿಪಾದಿಸುವ ಮನುಸ್ಮøತಿಯ ಮಧ್ಯೆ ಸಂಘರ್ಷ ನಡೆಯುತ್ತಿದೆ ಎಂದು ಬಂಡಾಯ ಸಾಹಿತಿ ರಂಜಾನ್ ದರ್ಗಾರವರು ಸಿಎಎ ವಿರುದ್ಧ ಮತ್ತು ಪರವಾಗಿ ನಡೆಯುತ್ತಿರುವ ಹೋರಾಟದ ಕುರಿತು ವಿಶ್ಲೇಷಿಸಿದರು.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಹುಸೇನ್ ಬ್ರದರ್ಸ್ ಮತ್ತು ಸಹನಾ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಮ್ತಿಯಾಜ್ ಹುಸೇನ್ ಅವರ ‘ಹೆಜ್ಜೆ ಗುರುತುಗಳು’ ಆತ್ಮಕಥನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್‍ನ ವಿರುದ್ಧ ದಲಿತರು, ಮುಸ್ಲಿಮರು ಹಾಗೂ ಬಡವರು ತಿರಂಗ ಜಂಡ ಹಿಡಿದು ದೇಶದಾದ್ಯಂತ ಹೋರಾಟ ನಡೆಸುತ್ತಿದ್ದು, ಇಡೀ ದೇಶದ ತುಂಬಾ ಶಾಹೀನ ಬಾಗ್‍ಗಳು ಹುಟ್ಟಿಕೊಂಡಿವೆ. ಇದು ಒಂದು, ಜಾತಿ ಧರ್ಮದ ಪರವಾದ ಹೋರಾಟವಲ್ಲ. ಬದಲಿಗೆ ಈ ದೇಶದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಬಡುವರು ತಮ್ಮ ಪವಿತ್ರ ಗ್ರಂಥ ಎಂಬುದಾಗಿ ಭಾವಿಸಿರುವ ಭಾರತದ ಸಂವಿಧಾನ ಮತ್ತು ಕೋಮುವಾದಿಗಳು ತಮ್ಮ ಸಂವಿಧಾನ ಎಂಬುದಾಗಿ ಪ್ರತಿಪಾದಿಸುವ ಮನು ಸ್ಮøತಿಯ ನಡುವಿನ ಹೋರಾಟವಾಗಿದೆ ಎಂದು ವ್ಯಾಖ್ಯಾನಿಸಿದರು.
ಈ ದೇಶದ ತಳ ಸಮುದಾಯದ ಜನರು ಒಂದಾದರೆ ಮಾತ್ರ ಬದುಕಲು ಸಾಧ್ಯವಿದೆ. ಅದನ್ನು ಬಿಟ್ಟು ನಾನು ದಲಿತ, ನಾನು ಮುಸ್ಲಿಂ, ನಾನು ಹಿಂದುಳಿದವ ಎಂಬುದಾಗಿ ಪ್ರತ್ಯೇಕಿಸಲ್ಪಟ್ಟರೆ ಖಂಡಿತ ಉಳಿಗಾಲವಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಪುರೋಹಿತಶಾಹಿ ವ್ಯವಸ್ಥೆಯ ಹುಚ್ಚುತನದ ಪರಮಾವಧಿಯಿಂದಾಗಿ ಅದರ ಕ್ರೌರ್ಯ ತಾಳಲಾರದೆ ತಳ ಸಮುದಾಯದ ಜನತೆ ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಹಾಗೂ ಲಿಂಗಾಯತ ಧರ್ಮಗಳನ್ನು ಅಪ್ಪಿಕೊಂಡರು.
ಹೀಗಾಗಿಯೇ ಈ ಎಲ್ಲಾ ಧರ್ಮಗಳ ಜನರ ಹೃದಯದಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂಬುದನ್ನು ಯಾರೂ ಮರೆಯಬಾರದು. ಇಲ್ಲಿರುವ ಯಾವ ಮುಸ್ಲಿಮರಿಗೂ ಅರಬ್ ಕಳೆ ಇಲ್ಲ. ಈ ನೆಲದ ಮಣ್ಣಿನ ಕಳೆ ಇದೆ. ಹೀಗಾಗಿ ಸರ್ಕಾರ ಎನ್‍ಆರ್‍ಸಿಯ ಮೂಲಕ ಪೌರತ್ವ ನೀಡಲು ದಾಖಲೆಗಳನ್ನು ಕೇಳುವ ಬದಲು ಡಿಎನ್‍ಎ ಪರೀಕ್ಷಿಸಿ ಪೌರತ್ವ ನೀಡಲಿ ಎಂದು ಆಗ್ರಹಿಸಿದರು.
ನೀವೆಲ್ಲರೂ ಈ ದೇಶದ ಮೂಲ ನಿವಾಸಿಗಳು, ಭಾರತೀಯರು ನಿಮ್ಮ ಗೋಸ್ಕರ ನಿಮ್ಮ ಸಂವಿಧಾನ ಉಳಸಿಕೊಳ್ಳಿ ಎಂದು ಕರೆ ನೀಡಿದ ಅವರು, 40 ವರ್ಷಗಳ ಹಿಂದೆ ದೇಶದಲ್ಲಿ ಎಡ ಪಂಥಿಯ ಮತ್ತು ಉದಾರವಾದಿ ಚಿಂತನೆಗಳು ಉಚ್ಪ್ರಾಯ ಸ್ಥಿತಿಯಲ್ಲಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಹಿಟ್ಲರ್‍ಶಾಹಿ ಫ್ಯಾಸಿಸ್ಟ್ ಶಕ್ತಿಗಳು ಪ್ರಬಲವಾಗುತ್ತಿವೆ. ಇದಕ್ಕೆ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ದೋಷ ಇರುವುದೆ ಕಾರಣವಾಗಿದೆ. ನಮಗೆ ಮಹಾತ್ಮ ಗಾಂಧಿ ಕಲ್ಪನೆಯ ಶಿಕ್ಷಣಬೇಕೆ ಹೊರತು, ಗೋಡ್ಸೆ ಪರಂಪರೆಯ ಶಿಕ್ಷಣ ಬೇಕಾಗಿಲ್ಲ. ಆದರೆ, ಇಂದಿನ ದೋಷಪೂರಿತ ಶಿಕ್ಷಣ ವ್ಯವಸ್ಥೆಯಿಂದಾಗಿ ಶಾಲೆ ಕಲಿತ ಮಕ್ಕಳೆಲ್ಲರೂ ಗೋಡ್ಸೆವಾದಿಗಳಾಗಿ ಬದಲಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶವನ್ನು ಆಳುವ ಶಕ್ತಿ ಬಡವರಿಗೆ ಬರಬೇಕೆಂಬುದು ಸಂವಿಧಾನ ಆಶಯವಾಗಿದೆ. ಆದರೆ, ಎಲ್ಲಾ ಬಂಡವಾಳಶಾಹಿ ಪಕ್ಷಗಳ ನಾಯಕರು ಮತ್ತು ಎಲ್ಲಾ ಧರ್ಮಗಳ ಮೇಲ್ವರ್ಗದ ಜನರು ಬೀದಿಯಲ್ಲಿ ಸಂಘರ್ಷ ಹುಟ್ಟು ಹಾಕಿ, ಪಂಚತಾರ ಹೋಟೆಲ್‍ಗಳಲ್ಲಿ ಒಂದಾಗಿರುತ್ತಾರೆ. ಹೀಗಾಗಿ ಇವರು ಹಚ್ಚಿದ ಸಂಘರ್ಷದಿಂದಾಗಿ ಬಡವರು ಒಂದಾಗುತ್ತಿಲ್ಲ. ಹೀಗಾಗಿ ಬಡವರಿಗೆ ದೇಶ ಆಳುವ ಶಕ್ತಿ ಇನ್ನೂ ಬಂದಿಲ್ಲ ಎಂದರು.
ಈಗ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಶೇ.33 ರಷ್ಟು ಮತಗಳಿಂದ ಗೆದ್ದು ವಿಜೃಂಭಿಸುತ್ತಿದ್ದಾರೆ. ಏಕೆಂದರೆ, ಉಳಿದ ಬಡವರು ಒಂದಾಗಿ ಚುನಾವಣೆ ಎದುರಿಸದೆ, ನೂರಾರು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಿ, ಸೋಲುಣುತ್ತಿದ್ದಾರೆ. ಇದೇ ಬಡವರು ಇನ್ನೂ ಆಡಳಿತ ನಡೆಸಲು ಶಕ್ತಿ ಬರದಿರಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಬಡವರೆಲ್ಲರೂ ಒಂದಾಗಬೇಕೆಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಈಗ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್‍ನಿಂದಾಗಿ 38 ಕೋಟಿ ಜನರು ಬಂಧಿ ಖಾನೆಯಲ್ಲಿ ಇರಬೇಕಾಗುತ್ತದೆ. ಅಲ್ಲದೆ, ಒಂದೂವರೆ ಕೋಟಿ ಅಧಿಕಾರಿಗಳು ಎನ್‍ಆರ್‍ಸಿ ದಾಖಲಾತಿ ಪರಿಶೀಲಿಸಲು ಹತ್ತು ವರ್ಷ ಬೇಕಾಗುತ್ತದೆ. ಹೀಗಾದರೆ, ದೇಶ ಹೇಗೆ ನಡೆಸುತ್ತೀರಿ? ಎಂದು ಸ್ಮರಿಸಿದರು.
ಆತ್ಮಚರಿತ್ರೆ ಬರೆಯುವವರ ಬಗ್ಗೆ ನನಗೆ ಸಂಶಯವಿದೆ. ಏಕೆಂದರೆ, ಅವು ಅರ್ಧ ಸತ್ಯದಿಂದ ಕೂಡಿರುತ್ತವೆ. ಹೀಗಾಗಿ ನಾನು ಆತ್ಮಚರಿತ್ರೆ ಕೃತಿ ಬಿಡುಗಡೆಗೆ ಸಮಾರಂಭಕ್ಕೆ ಹೋಗುವುದೇ ಇಲ್ಲ. ಆದರೆ, ಇಮ್ತಿಯಾಜ್ ಹುಸೇನರ ಆತ್ಮಚರಿತ್ರೆ ಪೂರ್ಣ ಸತ್ಯದಿಂದ ಕೂಡಿದೆ. ಈ ಕೃತಿಯ ಹೊಗಳಿಕೆಯಲ್ಲಿ ದೋಷವಿಲ್ಲ ಮತ್ತು ತೆಗಳಿಕೆಯಲ್ಲಿ ದ್ವೇಷವಿಲ್ಲ. ಹೀಗಾಗಿ ಈ ಆತ್ಮಕಥನವನ್ನು ಪ್ರತಿಯೊಬ್ಬರು ಒದಬೇಕೆಂದು ಸಲಹೆ ನೀಡಿದರು.
ಪುಸ್ತಕದ ಕುರಿತು ಮಾತನಾಡಿದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್, ಇಮ್ತಿಯಾಜ್ ಹುಸೇನರ ಆತ್ಮಚರಿತ್ರೆಗೆ ಒದಿಸಿಕೊಳ್ಳುವ ಗುಣ ಇದೆ. ಕೃತಿಕಾರರ ನಡೆ-ನುಡಿಯಲ್ಲಿ ಇರುವ ಅವಸರದಂತೆ, ಬರವಣಿಗೆಯಲ್ಲೂ ಇದೆ. ಇದಕ್ಕೆ ಲೇಖಕರು ತೊಡಗಿಸಿಕೊಂಡಿದ್ದ ಕಮ್ಯುನಿಷ್ಟ್ ಚಳವಳಿಯೂ ಕಾರಣವಾಗಿರಬಹುದು. ವೈಚಾರಿಕತೆಯ ಜತೆಗೆ ನವೀರಾದ ವಿನೋದ ಪ್ರಜ್ಞೆಯನ್ನು ಕೃತಿ ಒಳಗೊಂಡಿದೆ ಎಂದರು.
ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಮಾತನಾಡಿ, ಭಾರತವನ್ನು ವಿಶ್ವಗುರು ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಕಲಹದ ವಾತಾವರಣ ಸೃಷ್ಟಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲಾ ಧರ್ಮದ ಜನತೆಯು ತಮ್ಮ ರಕ್ತ ಬಸಿದು ಈ ದೇಶ ಕಟ್ಟಿದ್ದಾರೆ. ಹೀಗಾಗಿ ಭಾರತ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ.ಘನಿಸಾಬ್ ಹಾಗೂ ಕಾರ್ಮಿಕ ನಾಯಕ ಎಚ್.ಕೆ.ರಾಮಚಂದ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿ ಪ್ರೊ.ಸಿ.ಕೆ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕವಿ ಚಂದ್ರಶೇಖರ ತಾಳ್ಯ, ಚಳ್ಳಕೆರೆ ತಹಶೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ, ಕೃತಿಯ ಕತೃ ಇಮ್ತಿಯಾಜ್ ಹುಸೇನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಸಾ.ಹಿ.ಉಮಾಶಂಕರ್ ಭಾವಗೀತೆ ಹಾಡಿದರು. ಸಾಹಿತಿ ಜೆ.ಕಲೀಂ ಭಾಷಾ ಸ್ವಾಗತಿಸಿದರು. ಸಾಹಿತಿ ಮಲ್ಲಿಕಾರ್ಜುನ ಕಡಕೋಳ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ