ದೇಶದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಬೇಕಿದೆ : ಸುತ್ತೂರು ಶ್ರೀ

ತುಮಕೂರು:

    ದೇಶದಲ್ಲಿ ಇಂದು ವೈಷಮ್ಯದ ಬೀಜ ಬಿತ್ತುವ ಸಂಕಟದ ಸಂದರ್ಭಗಳು ಎದುರಾಗಿವೆ. ಇದರಿಂದಾಗಿ ನಿಶ್ಚಿಂತತೆಯಿಂದ ಬದುಕುವ ಸನ್ನಿವೇಶ ಕಳೆದು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆದರ್ಶಗಳು, ಅವರ ನಡೆ ನುಡಿಗಳು ಮನುಕುಲಕ್ಕೆ ದಾರಿದೀಪವಾಗಬೇಕಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನುಡಿದರು.

   ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಇಂದು ಜನರು ಶಾಂತಿ ನೆಮ್ಮದಿಯ ವಾತಾವರಣ ಕಳೆದುಕೊಂಡಿದ್ದಾರೆ. ನೆಮ್ಮದಿ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

    ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಪ್ರತಿ ಕ್ಷಣವನ್ನು ಸಮಾಜ ಸೇವೆಗೆ ಮೀಸಲಿಟ್ಟರು. ದೇಶ ಸುಭಿಕ್ಷವಾಗಿರಬೇಕು ಎಂಬ ಬಯಕೆ ಅವರಲ್ಲಿತ್ತು. ಬದುಕಿರುವ ತನಕ ಅವರು ತನಗಾಗಿ ಯಾರಲ್ಲಿ ಏನನ್ನೂ ಕೇಳಲಿಲ್ಲ. ಸ್ವತಂತ್ರ ಭಾರತ ಸುಂದರವಾಗಿರಬೇಕು ಎಂಬ ಕನಸು ಹೊತ್ತಿದ್ದರು. ರಾಷ್ಟ್ರಭಕ್ತಿ ತುಂಬಿ ತುಳುಕುತ್ತಿತ್ತು. ಮಕ್ಕಳಲ್ಲಿ ಅಂತಹ ಭಕ್ತಿಯನ್ನೇ ತುಂಬುತ್ತಾ ಬಂದರು. ಪ್ರಸಾದದ ಮೂಲಕ ಮಕ್ಕಳಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸಿದರು. ಪ್ರಸಾದ ಅಂದರೇನು ಎಂಬುದನ್ನು ಅರ್ಥ ಮಾಡಿಸಿದರು ಎಂದು ಶ್ರೀಗಳ ಕಾಯಕ ಜೀವನವನ್ನು ಸ್ಮರಿಸಿಕೊಂಡರು.

    ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮನಸ್ಸು ಸದಾ ರೈತರ ಬಗ್ಗೆ, ಬಡವರ ಬಗ್ಗೆ ಚಿಂತಿಸುತ್ತಿತ್ತು. ಅವರನ್ನು ಭೇಟಿ ಮಾಡಲು ಯಾರೂ ಸಹ ಅನುಮತಿ ಕೇಳುತ್ತಿರಲಿಲ್ಲ. ಶ್ರೀಗಳ ದರ್ಶನಕ್ಕೆ ಕಾಯಬೇಕಾದ ಅಗತ್ಯತೆ ಇರುತ್ತಿರಲಿಲ್ಲ. ಎಲ್ಲರಿಗೂ ದರ್ಶನ ಭಾಗ್ಯ ಕರುಣಿಸುತ್ತಿದ್ದರು. ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡು ಮಠದ ಹಿರಿಮೆಯನ್ನು ಹೆಚ್ಚಿಸಿದರು. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು ಎಂದು ವಿವರಿಸಿದರು.

   ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜೀವನ ಒಂದು ತೆರೆದ ಪುಸ್ತಕವಿದ್ದಂತೆ. ಕಾಯಕ ಮತ್ತು ದಾಸೋಹವನ್ನೇ ಅವರು ತಮ್ಮ ಉಸಿರಾಗಿಸಿಕೊಂಡರು. ಮಠಕ್ಕೆ ಆಶ್ರಯ ಕೋರಿ ಎಷ್ಟೇ ಮಕ್ಕಳು ಬಂದರೂ ನಿರಾಕರಿಸದೆ ಆಶ್ರಯ ಕೊಡುತ್ತಿದ್ದರು. ಅವರ ಆ ಕಾಯಕ ಪ್ರಜ್ಞೆಯಿಂದಾಗಿಯೇ ಇಂದು ಶ್ರೀಮಠದಲ್ಲಿ 10 ಸಾವಿರಕ್ಕೂ ಮೀರಿದ ಮಕ್ಕಳು ಕಲಿಯಲು ಸಹಕಾರಿಯಾಗಿದೆ. ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು ಎಂದರು.

   ಅತ್ಯಂತ ಸರಳ ಜೀವಿಗಳಾಗಿದ್ದ ಶ್ರೀಗಳು ತುಂಬಾ ಕಟ್ಟುನಿಟ್ಟಿನ ಪ್ರಸಾದ ನಿಷ್ಠೆಯನ್ನು ಹೊಂದಿದ್ದರು. ಅಲ್ಪ ಪ್ರಮಾಣದ ಪ್ರಸಾದ ಸೇವಿಸಿ ಹೆಚ್ಚು ಕಾಲ ಬದುಕಿದರು. ಅವರ ವಿಶೇಷ ಗುಣಗಳಲ್ಲಿ ಪ್ರತಿದಿನ ನಿಷ್ಠೆಯ ಲಿಂಗಪೂಜಾ ವಿಧಿಯೂ ಒಂದು. ಎಲ್ಲಿಗೆ ಹೋಗಲಿ, ಎಷ್ಟು ಹೊತ್ತಾದರೂ ಪರವಾಗಿಲ್ಲ ಲಿಂಗಪೂಜಾ ನಿಷ್ಠೆಯನ್ನು ಮಾತ್ರ ಕೊನೆಯ ತನಕ ಪರಿಪಾಲಿಸಿಕೊಂಡು ಬಂದರು. ಅವರ ಕಾಯಕ ನಿಷ್ಠೆ ಅತ್ಯಂತ ಮಹತ್ವದ್ದು ಎಂದರು.

   ಇಂದು ಈ ನಾಡಿನಲ್ಲಿ ಕಾವಿಗೆ ಏನಾದರೂ ಕಿಮ್ಮತ್ತು ಇದೆ ಎಂದರೆ ಅದಕ್ಕೆ ಶ್ರೀಗಳೇ ಕಾರಣ. ಕಾವಿಯ ಮಹತ್ವವನ್ನು ಹೆಚ್ಚಿಸಿದ್ದೇ ಶ್ರೀಗಳು. ಅವರು ಎಂದಿಗೂ ಸಹ ಯಾರಿಗೂ ಬಲವಂತದ ಉಪದೇಶದ ಹೇರಿಕೆ ಮಾಡಲಿಲ್ಲ. ಬದಲಾಗಿ ಅವರ ವರ್ತನೆಗಳನ್ನೇ ನೋಡಿ ನಾವೆಲ್ಲ ಕಲಿಯಬೇಕಿತ್ತು. ಅಂತಹ ಗುಣ ಅವರಲ್ಲಿತ್ತು. ಅದನ್ನು ನೋಡಿಯೇ ಎಷ್ಟೋ ಜನ ಬದಲಾಗಿದ್ದಾರೆ. ಪ್ರಧಾನ ಮಂತ್ರಿಗಳನ್ನು ಸಮಯ ನಿಗದಿ ಮಾಡಿ ಕರೆಯಬೇಕು. ಇವೆಲ್ಲ ತುಂಬಾ ಕಷ್ಟಕರ. ಆದರೆ ಪ್ರಧಾನಿಗಳು ಸ್ವಯಂ ಆಗಿ ಬಂದಿದ್ದಾರೆಂದರೆ ಅದು ಶ್ರೀಗಳು ಕಾರಣ ಎಂಬುದನ್ನು ನಾವು ಮರೆಯುವಂತಿಲ್ಲ ಎಂದರು.

   ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಸಚಿವರುಗಳಾದ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ, ಸಿ.ಟಿ.ರವಿ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಸಂಸದ ಜಿ.ಎಸ್.ಬಸವರಾಜು, ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಕಾಂತರಾಜು, ಮಹಾಪೌರರಾದ ಲಲಿತಾ ರವೀಶ್, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

   ದೆಹಲಿಯ ಕೈಗಾರಿಕೋದ್ಯಮಿ ಮುಖೇಶ್ ಗರ್ಗ್, ನವದೆಹಲಿಯ ಉಗ್ರ ನಿಗ್ರಹ ದಳದ ಅಧ್ಯಕ್ಷ ಮಣೀಂದರ್ ಜೀತ್ ಸಿಂಗ್ ಬಿಟ್ಟ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ.ರವೀಂದ್ರನಾಥ್ ಅವರುಗಳನ್ನು ಸನ್ಮಾನಿಸಲಾಯಿತು. ಇದೇ ಸಮಾರಂಭದಲ್ಲಿ ಸಿ.ಎನ್.ಸದಾಶಿವಯ್ಯ ಅವರ ಶ್ರೀ ಗುರುಕರುಣೆ ಮತ್ತು ನಿಷ್ಠೆ, ಬ್ಯಾಲಕೆರೆ ಶಿವಣ್ಣ ಅವರ ಯೋಗಾಂಗ ತ್ರಿವಿಧಿ, ಮುದ್ದೇನಹಳ್ಳಿ ನಂಜಯ್ಯ ಅವರ ಶ್ರೀ ಶಿವಕುಮಾರ ಚರಿತೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಭಾರತ ರತ್ನ ವ್ಯಾಖ್ಯಾನ

   ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಭಾರತ ರತ್ನ ಸಿಗಬೇಕು ಎಂಬ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮಹಾತ್ಮಗಾಂಧೀಜಿ ಭಾರತ ರತ್ನಕ್ಕಿಂತಲೂ ಮಿಗಿಲಾಗಿ ಬೆಳೆದಿದ್ದಾರೆ. ಅಂತಹವರಿಗೆ ಏಕೆ ಭಾರತ ರತ್ನ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದೇ ರೀತಿ ನಮ್ಮ ಶ್ರೀಗಳು ಸಹ ಭಾರತ ರತ್ನಕ್ಕೆ ಮಿಗಿಲಾದವರು. ಭಾರತ ರತ್ನ ಅವರಲ್ಲೇ ಅಡಗಿದೆ ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನ ಉದಾಹರಿಸಿದರು.

ಸಿದ್ಧಗಂಗೆ: ಇದು ಸರ್ವ ಜನಾಂಗದ ಶಾಂತಿಯ ತೋಟ

   ಸಿದ್ಧಗಂಗಾ ಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಈ ಕ್ಷೇತ್ರವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿರುವ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರನ್ನು ಹೇಳುವುದೇ ನಮ್ಮ ಪುಣ್ಯ ಎಂದು ವಸತಿ ಸಚಿವ ವಿ.ಸೋಮಣ್ಣ ವ್ಯಾಖ್ಯಾನಿಸಿದರು.
ಶ್ರೀಗಳ ಪ್ರಥಮ ಸಂಸ್ಮರಣೋತ್ಸವದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, 12ನೇ ಶತಮಾನದಲ್ಲಿ ಕಾಯಕ ಪ್ರಜ್ಞೆ ಉದಯವಾಯಿತು. ಆ ಶತಮಾನದ ಎಲ್ಲ ಆಶಯಗಳನ್ನು ಶ್ರೀಗಳು ಈಡೇರಿಸಿದ್ದಾರೆ. ಕಾಯಕ ತತ್ವ, ಸರ್ವ ಧರ್ಮ ಸಹಿಷ್ಣುತೆ ಇವೆಲ್ಲವೂ ಶ್ರೀಗಳಲ್ಲಿದ್ದವು. ಅಕ್ಷರ ವಂಚಿತರಾದವರಿಗೆ ಶಿಕ್ಷಣ ಕೊಡುವ, ಅನ್ನವಿಲ್ಲದವರಿಗೆ ದಾಸೋಹ ನೀಡುವ ಅವರ ಕಾಯಕವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮಕ್ಕಳ ಶಿಕ್ಷಣ ಮತ್ತು ಆಶ್ರಯಕ್ಕಾಗಿ ಜೋಳಿಗೆ ಹಿಡಿದು ಹೊರಟ ಸಂತ ಇಂದು ಈ ಕ್ಷೇತ್ರವನ್ನು ಇಷ್ಟರ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ ಎಂಬುದಕ್ಕೆ ಶ್ರೀಗಳ ಕಾಯಕ ಪ್ರಜ್ಞೆಯೇ ಸಾಕ್ಷಿ ಎಂದರು.

    ಬೆಂಗಳೂರಿನ ನನ್ನ ಕ್ಷೇತ್ರದಲ್ಲಿ ಶ್ರೀಗಳ ಪುತ್ಥಳಿ ಸ್ಥಾಪಿಸಲಿದ್ದು, ಮುಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ ಎಂದ ಅವರು, ಶ್ರೀಗಳಿಗೆ ಭಾರತ ರತ್ನ ಸಿಗದೇ ಇರುವುದು ನಮಗೆಲ್ಲ ಇನ್ನೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಮ್ಮ ನೋವು ತೋಡಿಕೊಂಡರು.

   ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಊಟ, ವಸತಿ ವಂಚಿತರ ಬಗ್ಗೆ ಶ್ರೀಗಳಿಗೆ ವಿಶೇಷ ಕಾಳಜಿ ಇತ್ತು. ಸ್ವಾಮೀಜಿಯವರು ಎಂದಿಗೂ ಉಳ್ಳವರ ಪರವಾಗಿ ಇರಲಿಲ್ಲ. ಅದೇ ಇಂದು ಭಕ್ತಿಯ ರೂಪವಾಗಿ ಪರಿಣಮಿಸಿದೆ. ಉಳ್ಳವರ ಪರವಾಗಿದ್ದರೆ ಇಷ್ಟೊಂದು ಭಕ್ತ ಸಮೂಹವನ್ನು ಕಾಣಲು ಸಾಧ್ಯವಾಗಿರುತ್ತಿರಲಿಲ್ಲ. ಮನುಷ್ಯನಿಗೆ ಜ್ಞಾನವೇ ಅತ್ಯಂತ ಶ್ರೇಷ್ಠ. ಶ್ರೀಗಳು ತಮ್ಮ ಅನುಭವದ ಮೂಲಕವೇ ಜ್ಞಾನವನ್ನು ಸಂಪಾದಿಸಿಕೊಂಡರು. ಹೀಗಾಗಿ ಅವರು ಅನುಭವಿ ಜ್ಞಾನ ಶ್ರೇಷ್ಠರು ಎಂದು ಬಣ್ಣಿಸಿದರು.

   ಎಲ್ಲರೂ ಬಸವೇಶ್ವರರ ಬಗ್ಗೆ ಮಾತನಾಡುತ್ತಾರೆ. ಆದರೆ ಕೃತಿಯಲ್ಲಿ ಅವರ ಅನುಯಾಯಿಗಳಾಗಿಲ್ಲ. ನಿಜವಾದ ಅರ್ಥದಲ್ಲಿ ಬಸವಣ್ಣನ ಅನುಯಾಯಿ ಸಿದ್ಧಗಂಗಾ ಶ್ರೀಗಳು ಮಾತ್ರ ಎಂದ ಅವರು, ಮನುಷ್ಯನಿಗೆ ಭಕ್ತಿ ಇರಬೇಕು. ಭಯ ಇರಬಾರದು. ಸಿದ್ಧಗಂಗಾ ಶ್ರೀಗಳು ಮಕ್ಕಳಲ್ಲಿ ಅಂತಹ ಭಕ್ತಿಯನ್ನು ಬಿತ್ತಿ ಹೋಗಿದ್ದಾರೆ ಎಂದರು.

   ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವ ಸಿ.ಟಿ.ರವಿ ಮಾತನಾಡಿ 12ನೇ ಶತಮಾನದಲ್ಲಿ ಹಲವು ಮಾರ್ಪಾಡುಗಳು ಆದವು. ಬಸವಣ್ಣನ ಆಶಯಗಳನ್ನು ಸಿದ್ಧಗಂಗಾ ಶ್ರೀಗಳು ಈಡೇರಿಸಿದ್ದಾರೆ. ನಾವು ಯಾರೂ ಸಹ ದೇವರನ್ನು ನೋಡಿಲ್ಲ. ಆದರೆ ಶ್ರೀಗಳ ಮೂಲಕ ದೇವರನ್ನು ನೋಡಿದ್ದೇವೆ ಎಂದರು.

   ಹಿಂದಿನ ಪುರಾಣಗಳನ್ನು ಗಮನಿಸಿದಾಗ ಋಷಿಮುನಿಗಳು ಜಾತಿ ಬೇಧ ಮಾಡಿರುವ ಉದಾಹರಣೆಗಳಿಲ್ಲ. ಹೀಗಿದ್ದರೂ ಅಸ್ಪøಶ್ಯತೆ ಅದು ಹೇಗೆ ಬಂದಿತೋ ಗೊತ್ತಿಲ್ಲ. ಸಂವಿಧಾನದಲ್ಲಿಯೂ ಅಸ್ಪಶ್ಯತೆಗೆ ಅವಕಾಶವಿಲ್ಲ. ಜಾತ್ಯತೀತವಾದಿಗಳು ಎಂದು ಹೇಳಿಕೊಳ್ಳುವವರಿಂದಲೇ ಜಾತಿಯತೆ ಹೆಚ್ಚು ಸೃಷ್ಟಿಯಾಗುತ್ತಿದೆ. ಬಸವಣ್ಣನ ತತ್ವಗಳನ್ನು ಆಂದೋಲನ ರೂಪ ಎಂದು ನಾವು ಪ್ರಚಾರ ಮಾಡಬೇಕಿದೆ ಎಂದರು.

   ಸಮಾಜದಲ್ಲಿ ಇಂದು ಭ್ರಷ್ಟಾಚಾರ ಹೆಚ್ಚುತ್ತಿದೆ. ಸ್ವಾರ್ಥಪರರೇ ಹೆಚ್ಚಾಗುತ್ತಿದ್ದಾರೆ. ಇವುಗಳಿಗೆಲ್ಲ ಸಂಸ್ಕಾರದ ದೀಕ್ಷೆ ಕೊಡಬೇಕಿದೆ. ಕೆಲವರು ಜಾತಿಯನ್ನೇ ಬಂಡವಾಳ ಮಾಡಿಕೊಂಡು ಬೆಳೆಯುತ್ತಿದ್ದಾರೆ. ಇವುಗಳ ನಿರ್ಮೂಲನಾ ಆಗಬೇಕಾದರೆ ಯುವಜನರಲ್ಲಿ ಸಂಸ್ಕಾರ ಬೆಳೆಸಬೇಕು. ಬಸವಣ್ಣನವರ ತತ್ವಗಳ ಬಗ್ಗೆ ಆಂದೋಲನ ಆಗಬೇಕು ಎಂದು ಪ್ರತಿಪಾದಿಸಿದ ಅವರು, ಮಠಪತಿಗಳು ಜನಪತಿಗಳಾಗಬೇಕು. ಸಿದ್ಧಗಂಗಾ ಶ್ರೀಗಳು ಜನಪತಿಯಾಗಿಯೇ ಜನರ ಮಧ್ಯೆ ಬೆಳೆದು ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದರು.

  ಮಾಜಿ ಸಚಿವ, ಶಾಸಕ ಬಸವರಾಜ ಹೊರಟ್ಟಿ ಮಾತನಾಡಿ ಇಂದು ಸಂಸ್ಕಾರ ಎಲ್ಲಿದೆ ಎಂದು ಯಾರಾದರೂ ಕೇಳಿದರೆ ಅದು ಸಿದ್ಧಗಂಗಾ ಮಠದಲ್ಲಿದೆ ಎನ್ನುವಂತಹ ಹೆಮ್ಮೆ ಎಲ್ಲ ಕಡೆ ಹರಡಿದೆ. ಈ ಮಠ ಜಾತ್ಯತೀತವಾಗಿ ಬೆಳೆದು ಎಲ್ಲ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಿ ಹೆಮ್ಮೆಯ ಸ್ಥಾನದಲ್ಲಿದೆ. ಶ್ರೀಗಳ ಹೆಸರು ಕರ್ನಾಟಕದಲ್ಲಿ ಮಾತ್ರವಲ್ಲಿ ಇಡೀ ಭಾರತದ ಉದ್ದಗಲಕ್ಕೂ ಹರಡಿದೆ. ಇಂತಹ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ಶ್ರೀಗಳ ಹೆಸರಿನಲ್ಲಿಯೇ ಭಾರತ ರತ್ನ ಅಡಗಿದೆ. ಅದಕ್ಕೂ ಮಿಗಿಲಾದ ಸಾಧನೆಯನ್ನು ಶ್ರೀಗಳು ಮಾಡಿ ತೋರಿಸಿದ್ದಾರೆ. ಮಕ್ಕಳಿಗೆ ಇಲ್ಲಿ ಸಿಗುತ್ತಿರುವ ಸಂಸ್ಕಾರ ಮತ್ತೆಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದರು.

    ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದ ಸಿದ್ಧಗಂಗಾ ಶ್ರೀಗಳು ಸೇವೆ ಮತ್ತು ಕೈಂಕರ್ಯಕ್ಕೆ ಹೆಚ್ಚು ಒತ್ತು ಕೊಟ್ಟರು. ಮಕ್ಕಳಿಗೆ ಶಿಕ್ಷಕರಾಗಿ ದಾರಿದೀಪವಾಗಿದ್ದಾರೆ. ಇಂತಹ ಮಠವನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೂ ಸೇರಿ ಬೆಳೆಸೋಣ ಎಂದರು.

ಜಾತ್ಯತೀತ ಮಠ

    ಇಡೀ ದೇಶದಲ್ಲಿ ಇಂದು ಜಾತ್ಯತೀತವಾಗಿ ಇಷ್ಟು ಮಕ್ಕಳಿಗೆ ಶಿಕ್ಷಣ ಮತ್ತು ದಾಸೋಹ ವ್ಯವಸ್ಥೆಯನ್ನು ಮಾಡುತ್ತಿರುವ ಮಠ ಎಂದರೆ ಅದು ಸಿದ್ಧಗಂಗಾ ಮಠ. ಬಸವಣ್ಣನನ್ನು ಶ್ರೀಗಳ ಮೂಲಕ ನೋಡಲು ಸಾಧ್ಯವಾಗಿದೆ. ಇಂತಹ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದು ಏಕೆ ಕೇಳಬೇಕು? ಶ್ರೀಗಳಲ್ಲಿಯೇ ಭಾರತ ರತ್ನ ಅಡಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link