ದೇಶದ ರಕ್ಷಣೆಗೆ ಯುವ ನಾಯಕರನ್ನು ಬೆಳೆಸುವ ಅಗತ್ಯವಿದೆ: ಡಿ.ಕೆ ಶಿವಕುಮಾರ್

ಧಾರವಾಡ:

     ದೇಶ ಈಗ ತೊಂದರೆಗೆ ಸಿಲುಕಿದ್ದು, ಕವಲುದಾರಿಯಲ್ಲಿ ನಿಂತಿದೆ. ಈ ಸಂದರ್ಭದಲ್ಲಿ ದೇಶವನ್ನು ರಕ್ಷಿಸಬೇಕಾದ ನಾವು ಯುವ ನಾಯಕರನ್ನು ಬೆಳೆಸುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.ಧಾರವಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಯೂತ್ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು:

      ‘ಈ ಹಿಂದೆ ದೇಶದೆಲ್ಲೆಡೆ ಪಕ್ಷವನ್ನು ಸಂಘಟಿಸಲು ರಾಹುಲ್ ಗಾಂಧಿ ಅವರು ಎನ್ಎಸ್ ಯುಐ ಸದಸ್ಯತ್ವ ಮಾಡುವ ಸಮಯದಲ್ಲಿ ಬೆಂಗಳೂರು, ಬಿಜಾಪುರ, ಉಡುಪಿಗೆ ಆಗಮಿಸಿದ್ದರು. ಅದೇ ರೀತಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ಇಂದು ಇಲ್ಲಿಗೆ ಆಗಮಿಸಿ ಸದಸ್ಯತ್ವ ನೋಂದಣಿ ಉದ್ಘಾಟಿಸುತ್ತಿದ್ದೇನೆ.

      ನೀವು ಸದಸ್ಯರಾದರೆ ಮಾತ್ರ ನಾಯಕರಾಗಲು ಸಾಧ್ಯ. ಸದಸ್ಯನಾಗಿ, ಸಂಘಟಕನಾದರೆ ನಾಯಕನಾಗಿ ಬೆಳೆಯಬಹುದು. ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಅವರ ತಂದೆ ರಾಜಕಾರಣಿ ಅಲ್ಲ. ಅವರಿಗೆ ರಾಜಕೀಯ ಹಿನ್ನೆಲೆ ಇಲ್ಲ. ಕೇವಲ ಅವರ ಸಂಘಟನೆ ಶಕ್ತಿ ಹಾಗೂ ಹೋರಾಟದಿಂದ ರಾಹುಲ್ ಗಾಂಧಿ ಅವರು ಶ್ರೀನಿವಾಸ್ ಅವರನ್ನು ರಾಷ್ಟ್ರೀಯ ಯೂತ್ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನನ್ನ ಉದಾಹರಣೆ ತೆಗೆದುಕೊಳ್ಳಿ ನನ್ನ ತಂದೆ ತಾಯಿ ರಾಜಕಾರಣದಲ್ಲಿ ಇರಲಿಲ್ಲ. ಇವತ್ತು ನಾನು ಏಳು ಬಾರಿ ಸದನಕ್ಕೆ ಆಯ್ಕೆಯಾಗಿದ್ದೇನೆ. ತಾಲೂಕು, ಜಿಲ್ಲಾ ಕಾರ್ಯದರ್ಶಿಯಾಗಿ ನಂತರ ಶಾಸಕನಾದೆ. ನಾನು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ರಾಜೀವ್ ಗಾಂಧಿ ಅವರು ನನ್ನನ್ನು ಮಂತ್ರಿ ಮಾಡಿದ್ದರು. ನನಗೆ 29 ವರ್ಷವಿದ್ದಾಗ ಮಂತ್ರಿಯಾದೆ.

       ಪ್ರತಿ ಪಂಚಾಯ್ತಿಯಲ್ಲೂ ಪ್ರಜಾ ಪ್ರತಿನಿಧಿ ಅಂತಾ ಆಪ್ ಶುರು ಮಾಡುತ್ತಿದ್ದೇವೆ. ಅದರ ಪ್ರಯೋಗ ನಡೆಸಲಾಗುತ್ತಿದೆ. ಯಾರಾದರೂ ಜಿಲ್ಲಾಧ್ಯಕ್ಷರಾಗಬೇಕಾದರೆ, ಶಾಸಕರಾಗಬೇಕಾದರೆ ಅವರು ಕಡ್ಡಾಯವಾಗಿ ಬೂತ್ ಸಮಿತಿ ಸದಸ್ಯರಾಗಿರಬೇಕು. ಹೀಗಾಗಿ ಎಲ್ಲರೂ ಈ ಸದಸ್ಯತ್ವದಲ್ಲಿ ಭಾಗವಹಿಸಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಆರಂಭಿಸಲಾಗುವುದು. ನಾನು ನಮ್ಮ ನಾಯಕರಿಗೆ ಹೇಳುತ್ತೇನೆ. ನೀವೇ ಮುಂದೆ ನಿಂತು ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಿಸಬೇಕು.

      ಮುಂದಿನ ದಿನಗಳಲ್ಲಿ ಯಾರು ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕು, ಯಾರನ್ನು ಅಭ್ಯರ್ಥಿ ಮಾಡಬೇಕು ಅಂತಾ ನೀವು ಒಂದು ಕ್ಲಿಕ್ ಮಾಡಿ ಆಯ್ಕೆ ಮಾಡುವಂತಾಗಬೇಕು. ಯಾರಿಗೆ ಎಷ್ಟು ಬೆಂಬಲ ಇದೆ, ಯಾರ ಅಭಿಪ್ರಾಯ ಏನು ಎಂಬುದು ನಮಗೆ ಗೊತ್ತಾಗಬೇಕು. ನಾವು ಯುವಕರನ್ನು ಬೆಂಬಲಿಸಬೇಕು.

ವೇದಿಕೆ ಸಂಸ್ಕೃತಿ ಬಿಟ್ಟು ಕಾರ್ಯಕರ್ತರ ಮಧ್ಯೆ ಇರಬೇಕು:

       ನಾಯಕರು ವೇದಿಕೆ ಮೇಲೆ ಕೂರುವ ಪದ್ಧತಿಯನ್ನು ತೆಗೆದು ಹಾಕಲು ಹೈಕಮಾಂಡ್ ಒಪ್ಪಿದೆ. ಮುಂದಿನ ದಿನಗಳಲ್ಲಿ ಯೂತ್ ಕಾಂಗ್ರೆಸ್ ಅಥವಾ ಪ್ರಮುಖ ಕಾಂಗ್ರೆಸ್ ಕಾರ್ಯಕ್ರಮವಾಗಲಿ ಎಲ್ಲರೂ ಕೆಳಗೆ ಕೂರಬೇಕು. ಯಾರು ಮಾತನಾಡಬೇಕೋ ಅವರು ವೇದಿಕೆ ಮೇಲೆ ಹತ್ತಿಬರಬೇಕು. ಎಲ್ಲರೂ ಅವರ ಕಾರ್ಯಕರ್ತರ ಜತೆ ಕೂರಬೇಕು. ನಮ್ಮ ಅಧಿಕಾರ ಏನೇ ಇದ್ದರೂ ವಿಧಾನಸೌಧ, ಪಾಲಿಕೆಯಲ್ಲಿ ಮಾಡೋಣ.

      ಇಲ್ಲಿ ನಾವು ಜನರ ಮಧ್ಯೆ ಇರಬೇಕು. ವೇದಿಕೆ ಮೇಲೆ ಇದ್ದವರೆಲ್ಲ ನಾಯಕರಾಗಲ್ಲ. ಜನರ ಮಧ್ಯೆ ಇದ್ದರೆ ಮಾತ್ರ ನಾಯಕರಾಗಲು ಸಾಧ್ಯ. ನಮ್ಮ ಪಕ್ಷದ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಅವರಿಗೆ ನೀಡಿದ ದಿನದಿಂದಲೂ ಕೆಡರ್ ಬೆಸ್ ಪಕ್ಷವಾಗಿ ಮಾಡಬೇಕು ಅಂತಾ ಹೇಳುತ್ತಿದ್ದೇನೆ. ಒಂದು ಕಾಲದಲ್ಲಿ ಇಂದಿರಾಗಾಂಧಿ ಹೆಸರಲ್ಲಿ ನಮಗೆ ಮತ ಬರುತ್ತಿತ್ತು. ಈಗ ಕಾಲ ಬದಲಾಗಿದೆ. ನಮ್ಮ ಪಕ್ಷದಲ್ಲಿ ಬೆಳೆದವರು ಬೇರೆ ಪಕ್ಷಕ್ಕೆ ಹೋಗಿ ನಾಯಕರಾಗಿರುವುದು ನಮ್ಮ ಪಕ್ಷಕ್ಕೆ ಹಾನಿಯಾಗಿದೆ. ಈಗ ಮತ್ತೆ ದೇಶ ತೊಂದರೆಗೆ ಸಿಲುಕಿದ್ದು, ಕವಲು ದಾರಿಯಲ್ಲಿ ನಿಂತಿದೆ. ಹೀಗಾಗಿ ದೇಶವನ್ನು ಉಳಿಸಬೇಕಾದ ಜವಾಬ್ದಾರಿ ಇದೆ. ದೇಶ ಉಳಿಯಬೇಕಾದರೆ ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರಿಂದ ಮಾತ್ರ ಸಾಧ್ಯ.

      ಈಗಿನ ಯುವಕರು ನಮಗಿಂತ ಚುರುಕಾಗಿದ್ದಾರೆ. ಟಿವಿಯಲ್ಲಿ ವಾಹಿನಿ ಬದಲಾಯಿಸಲು ಇರುವ ಆಯ್ಕೆಯಂತೆ ಜನರ ಮುಂದೆ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ.ರಾಜೀವ್ ಗಾಂಧಿ ಅವರು ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪಂಚಾಯತ್ ರಾಜ್ ಚುನಾವಣೆ ಬಗ್ಗೆ ಚರ್ಚೆ ಮಾಡಲು ಬೆಂಗಳೂರಿಗೆ ಆಗಮಿಸಿದ್ದರು. ಆಗ ನಾನು ಇದನ್ನು ಮಾಡುತ್ತಿರುವುದೇಕೆ ಎಂದು ಅವರಿಗೆ ಕೇಳಿದೆ. ಅದಕ್ಕೆ ಅವರು ಹೇಳಿದ್ದು, ಪ್ರಜಾಪ್ರಭುತ್ವದಲ್ಲಿ ಪಂಚಾಯ್ತಿಯಿಂದ ಸಂಸತ್ತಿನವರೆಗೂ ನಾಯಕರನ್ನು ಆರಿಸಬೇಕು ಎಂದರು.

      ಹಿಂದೆ ಶಾಲೆಗಳಲ್ಲಿ ಚುನಾವಣಾ ಪದ್ಧತಿ ನಡೆಸುತ್ತಿದ್ದೆವು. ಈಗ ನಿಲ್ಲಿಸಲಾಗಿದೆ. ಆದರೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಿಲ್ಲಿಸಲು ಸಾಧ್ಯವಿಲ್ಲ. ನಿಮ್ಮನ್ನು ನೋಡಿದರೆ ನಾವು ನಾಯಕರನ್ನು ತಯಾರು ಮಾಡಬೇಕಿದೆ. ಈ ಚುನಾವಣೆಗೆ ಮೀಸಲಾತಿ ತಂದು ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸಲಾಗಿದೆ. ಮತದಾನ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಗಿದೆ. ನಾನು ಸಂಸತ್ತಿಗೆ ಹೋಗಿದ್ದೆ. ಆಗ ಇಂದು ಬಿಜೆಪಿಯಲ್ಲಿರುವ ಬಿಜೆಪಿ ನಾಯಕರು ಚಿಕ್ಕ ವಯಸ್ಸಿನವರಿಗೆ ಯಾಕೆ ಮತದಾನದ ಅವಕಾಶ ನೀಡುತ್ತೀರಿ ಎಂದು ರಾಜೀವ್ ಗಾಂಧಿ ಅವರನ್ನು ಬೈದರು. ನಿಮಗೆ ಬುದ್ದಿ ಇದೆಯಾ ಅಂತಾ ಕೇಳಿದರು. ಆಗ ರಾಜೀವ್ ಗಾಂಧಿ ಅವರು ಉತ್ತರ ಕೊಡುವಾಗ ಒಂದು ಮಾತು ಹೇಳಿದರು. ಈ ದೇಶವನ್ನು ರಕ್ಷೆ ಮಾಡುವ ಯೋಧರಿಗೆ 16 ವಯಸ್ಸಿನ ಹುಡುಗರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಅವರನ್ನು ನಂಬಿ ಅವರ ಕೈಗೆ ಬಂದೂಕು ಕೊಟ್ಟು ಗಡಿಯಲ್ಲಿ ನಿಲ್ಲಿಸುವಾಗ ಅವರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಯುವುದಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಈ ಯುವಕರ ಬಗ್ಗೆ ನನಗೆ ನಂಬಿಕೆ ಇದೆ. ಹೀಗಾಗಿ ಅವರಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap