ಕಸದ ಕೊಂಪೆಯಾದ ತರಕಾರಿ ಮಾರುಕಟ್ಟೆ: ಸಮಸ್ಯೆಗಳೂ ಸಿಕ್ಕಾಪಟ್ಟೆ

ತುಮಕೂರು

      ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ ಕಸದ ಕೊಂಪೆಯಾಗಿದೆ. ಕಾಲಿಡಲೂ ಜಾಗವಿಲ್ಲದಷ್ಟು ಕಸ ತುಂಬಿಹೋಗಿದೆ. ಎಲ್ಲಾ ಅಂಗಡಿಗಳ ಮುಂದೆ ತರಕಾರಿ ಜೊತೆಗೆ ಕಸವನ್ನೂ ರಾಶಿ ಹಾಕಿಕೊಂಡು ಮಾರುತ್ತಿದ್ದಾರೇನು ಎನ್ನುವಷ್ಟು ಮಾರುಕಟ್ಟೆ ಕಸಮಯವಾಗಿದೆ. ವ್ಯಾಪಾರಿಗಳು, ಖರೀದಿದಾರರು ಕಸದ ನಡುವೆ ವಹಿವಾಟು ನಡೆಸಲು ಕಿರಿಕಿರಿಪಡುತ್ತಿದ್ದಾರೆ. ಕಾರಣ, ಮಾರುಕಟ್ಟೆಯಲ್ಲಿ ಸಂಗ್ರಹವಾಗಿರುವ ಕಸವನ್ನು ವಾರದಿಂದ ವಿಲೇವಾರಿಮಾಡಿಲ್ಲ.

       ಕಸವಿಲೇವಾರಿಯ ಟೆಂಡರ್ ಅವಧಿ ಮುಗಿದು ಕಾರಣ ಕಸ ಸಂಗ್ರಹಣೆ ಮಾಡುವವರಿಲ್ಲ. ಹೊಸದಾಗಿ ಗುತ್ತಿಗೆ ಪಡೆದ ಟೆಂಡರ್‍ದಾರರಿಗೆ ಇನ್ನೂ ಕಾರ್ಯಾನುಮತಿ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿಗಿಂತಲೂ ಕಸದ ರಾಶಿಯೇ ಎದ್ದು ಕಾಣುತ್ತಿದೆ.
ನಿಯಮಾನುಸಾರ ಕಸ ಸಂಗ್ರಹಣೆಯ ಗುತ್ತಿಗೆದಾರರು ದಿನಾ ಎಲ್ಲಾ ಅಂಗಡಿಗಳ ಮುಂದೆ ಬಿದ್ದಿರುವ ಕಸ ಸಂಗ್ರಹಿಸಿ, ಅಜ್ಜಗೊಂಡನಹಳ್ಳಿ ವಿಲೇವಾರಿ ಘಟಕಕ್ಕೆ ಸಾಗಿಸಬೇಕು. ಈವರೆಗೂ ಹೀಗೇ ನಡೆಯುತ್ತಿತ್ತು. ಆದರೆ, ವಾರದಿಂದ ಕಸವನ್ನು ಮೂಸುವವರಿಲ್ಲ ಎನ್ನುವಂತಾಗಿದೆ. ಮಾರುಕಟ್ಟೆ ದಿನಾ ಲೋಡುಗಟ್ಟಲೆ ತರಕಾರಿ ಬರುವಂತೆ, ಲೋಡು ಲೋಡು ಕಸವೂ ಪ್ರತಿನಿತ್ಯ ಉತ್ಪತ್ತಿಯಾಗುತ್ತದೆ. ಆಯಾ ದಿನ ಕಸವನ್ನು ಆಯಾ ದಿನ ವಿಲೇವಾರಿ ಮಾಡದೆ ಒಂದೆರಡು ದಿನ ಉಳಿಸಿಬಿಟ್ಟರೆ ಇಲ್ಲಿ ಕಸದ ಗುಡ್ಡವೇ ಸೃಷ್ಠಿಯಾಗಿಬಿಡುತ್ತದೆ.

       ಮಾರುಕಟ್ಟೆಯ ಸವಲತ್ತು, ಸೌಕರ್ಯ ನಿರ್ವಹಣೆ ಹೊಣೆ ಎಪಿಎಂಸಿ ಆಡಳಿತ ಸಮಿತಿಯದು. ಸಮಿತಿಯ ಅಧ್ಯಕ್ಷರ ಅಧಿಕಾರವಧಿ ಮುಗಿದು ಹೊಸ ಅಧ್ಯಕ್ಷರು ಆಯ್ಕೆಯಾಗುವವರೆಗೂ ಜಿಲ್ಲಾಧಿಕಾರಿಗಳೇ ಆಡಳಿತ ನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಮಾರುಕಟ್ಟೆಯ ಕಸ ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಇಲ್ಲಿನ ವ್ಯಾಪಾರಿ ಧನಂಜಯ ಮನವಿ ಮಾಡಿದ್ದಾರೆ.

ಶಿಸ್ತಿಲ್ಲದ ಪಾರ್ಕಿಂಗ್ ವ್ಯವಸ್ಥೆ

         ಮಾರುಕಟ್ಟೆಯಲ್ಲಿ ಮತ್ತೊಂದು ದೊಡ್ಡ ಅಧ್ವಾನವೆಂದರೆ ಶಿಸ್ತಿಲ್ಲದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ. ವ್ಯಾಪಾರಿಗಳ, ಗ್ರಾಹಕರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾದ ಪಾರ್ಕಿಂಗ್ ಇಲ್ಲಿಲ್ಲ. ಮಾರುಕಟ್ಟೆ ಎದುರು ರಸ್ತೆಯಲ್ಲಿ ವಾಹನ ನಿಲ್ಲಿಸಬೇಕಾಗಿದೆ, ಇಲ್ಲಿ ವಾಹನಗಳಿಗೆ ಸುರಕ್ಷತೆ ಇಲ್ಲ, ಕಾವಲುಗಾರರಿಲ್ಲ. ಇದರ ಜೊತೆಗೆ ಮಾರುಕಟ್ಟೆ ಪ್ರಾಂಗಣದೊಳಗಿನ ವಾಹನಗಳ ನಿಲುಗಡೆಯಿಂದ ಹೆಚ್ಚು ಸಮಸ್ಯೆಯಾಗುತ್ತದೆ.

         ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಎದುರಿನ ರಸ್ತೆವರೆಗೂ ಅಂಗಡಿ ವಿಸ್ತರಿಸಿಕೊಂಡು ಜನ ಓಡಾಡಲು ಇಕ್ಕಟ್ಟು ಮಾಡಿದ್ದಾರೆ. ಇದರ ಜೊತೆಗೆ ತರಕಾರಿ ಅನ್ ಲೋಡ್ ಮಾಡಲು ಬರುವ ವಾಹನಗಳನ್ನು ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ನಿಲ್ಲಿಸಿ ವ್ಯಾಪಾರಕ್ಕೆ ತೊಂದರೆ ಮಾಡಲಾಗುತ್ತದೆ. ಇದರಿಂದ ಗ್ರಾಹಕರಿಗೂ ಅನಾನುಕೂಲವಾಗುತ್ತದೆ. ಯಾವುದೇ ವಾಹನ ಅನ್‍ಲೋಡ್‍ಗೆ ಬರಲು ನಿರ್ದಿಷ್ಟ ಮಾರ್ಗ, ಸೂಕ್ತ ಜಾಗ ಅನುಸರಿಸುವುದಿಲ್ಲ. ಹಿಗಾಗಿ ಹಲವು ಸಲ ವಾಹನಗಳು ಮುಖಾಮುಖಿಯಾಗಿ ಮಾರುಕಟ್ಟೆಯೊಳಗೇ ‘ಟ್ರಾಫಿಕ್ ಜಾಂ’ ಆಗಿಬಿಡುತ್ತದೆ. ಈ ಬಗ್ಗೆ ಯಾರನ್ನ ಕೇಳಬೇಕು, ಯಾರಿಗೆ ದೂರು ನೀಡಬೇಕು ಎಂಬುದು ಗೊತ್ತಾಗದ ಪರಿಸ್ಥಿತಿ. ಮಾರುಕಟ್ಟೆಯ ಆಡಳಿತಾಧಿಕಾರಿಗಳು ಇಲ್ಲಿನ ಅವ್ಯವಸ್ಥೆ ನಿಯಂತ್ರಿಸಲು ಸಿಬ್ಬಂದಿಯೊಬ್ಬರಿಗೆ ಉಸ್ತುವಾರಿ ವಹಿಸಬೇಕು ಎಂಬುದು ವ್ಯಾಪಾರಿಗಳ ಒತ್ತಾಯ.

           ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಈವರೆಗೆ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಇತ್ತೀಚೆಗೆ ಸಂಸದ ಮುದ್ದಹನುಮೇಗೌಡರು ತಮ್ಮ ಅನುದಾನದಲ್ಲಿ ಇಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟ ಮೇಲೆ ಈ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಸ್ವಚ್ಚತೆ ಕಾಪಾಡಲಾಗಿಲ್ಲ. ಹೀಗಾಗಿ ಇಲ್ಲಿ ಶುದ್ಧ ಕುಡಿಯುವ ನೀರು ಕುಡಿಯಲೂ ಜನ ಹಿಂಜರಿಯುವಂತಾಗಿದೆ.

         ರಾತ್ರಿ ವೇಳೆ ಮಾರುಕಟ್ಟೆಯಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ. ರಾತ್ರಿ ಹೊತ್ತು ಮಹಿಳೆಯರು ಮಾರುಕಟ್ಟೆಗೆ ಬರಲು ಹೆದರುವಂತಾಗಿದೆ. ನಗರ ಬೆಳೆದಂತೆ ಮಾರುಕಟ್ಟೆಯ ಸೌಲಭ್ಯವೂ ಬೆಳೆಯಬೇಕು ಎಂಬ ಆಶಯದಿಂದ ಸ್ಥಾಪನೆಯಾದ ಈ ತರಕಾರಿ ಮಾರುಕಟ್ಟೆ ಸರಿಯಾದ ನಿರ್ವಹಣೆಯಿಲ್ಲದೆ ಸಮಸ್ಯೆಗಳ ಸಂತೆಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap