ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರು ಯಾರು ಎಂಬುದು ಅಸ್ಪಷ್ಟ

ಬೆಂಗಳೂರು

        ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದ್ದು, ಇದೀಗ ಕನ್ನಡಿಗರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ.

        ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರು ಯಾರು ಎಂಬ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಇಷ್ಟಾದರೂ ಇದೀಗ ಕನ್ನಡಿಗರು ಯಾರು ಎನ್ನುವ ಮಾನದಂಡ ನಿಗದಿ ಸಂಬಂಧ ಆಡಳಿತಶಾಹಿ ತಗಾದೆ ತೆಗೆದಿರುವುದು ಕನ್ನಡಿಗರ ಉದ್ಯೋಗ ಮೀಸಲಾತಿ ಕನಸಿಗೆ ತಣ್ಣೀರೆರಚಿದಂತಾಗಿದೆ.

        ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆ ಕ್ಷೀಣಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆಯ ಮೆರೆಗೆ ಸಿದ್ಧವಾದ ಈ ವಿಧೇಯಕವನ್ನು ಸಚಿವ ಸಂಪುಟದಲ್ಲಿ ಮಂಡಿಸುವ ಮುನ್ನ ‘ಕನ್ನಡಿಗರೆಂದರೆ ಯಾರು? ಎಂಬ ಬಗ್ಗೆ ಸ್ಪಷ್ಟತೆ ಇರಬೇಕು’ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೇಳಿದ್ದರಿಂದ ಕಾರ್ಮಿಕ ಇಲಾಖೆ ಇದರಲ್ಲಿ ಬದಲಾವಣೆ ಮಾಡಿದೆ ಎಂದು ತಿಳಿದು ಬಂದಿದೆ.

       ಮಹಿಷಿ ವರದಿಯಲ್ಲಿ ಕನ್ನಡಿಗರು ಯಾರು ಎನ್ನುವ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದರೂ, ಮುಖ್ಯ ಕಾರ್ಯದರ್ಶಿಯವರು ಅನಗತ್ಯ ಗೊಂದಲ ಸೃಷ್ಟಿಸಿ ವಿಧೇಯಕ ಮಂಡನೆ ಯಾಗುವುದನ್ನು ತಡೆಯುವ ತಂತ್ರ ಮಾಡಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಶಂಕೆ ವ್ಯಕ್ತಪಡಿಸಿದ್ದಾರೆ.

       ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಗರೆಂದರೆ ಯಾರು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದೆ. ಪರಿಷ್ಕøತ ವರದಿಯೂ ಅದನ್ನು ಒಪ್ಪಿದೆ. ಸ್ಥಳೀಯರು ಎಂದು ಪರಿಗಣಿಸಲು ರಾಜ್ಯದಲ್ಲಿ 10 ವರ್ಷಗಳ ಕಾಲ ರಾಜ್ಯದಲ್ಲಿ ವಾಸವಾಗಿರಬೇಕಲ್ಲದೆ, ಕನ್ನಡ ಭಾಷಾಜ್ಞಾನವೂ ಇರಬೇಕು ಎನ್ನುತ್ತದೆ ಮಹಿಷಿ ವರದಿ.

       ಜತೆಗೆ ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ 10ನೆಯ ತರಗತಿಯವರೆಗೆ ಓದಿದ ವಿದ್ಯಾರ್ಥಿಗಳಿಗೂ ರಾಜ್ಯದಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸವಲತ್ತುಗಳೂ ಸಿಗಬೇಕು. ಅವರಿಗೆ ಉನ್ನತ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ತೆರೆದ ಅವಕಾಶವಿರಬೇಕು.’ ಎನ್ನುತ್ತದೆ ವರದಿ.

       ಕನ್ನಡಗರು ಎಂದರೆ ಯಾರು? ಎಂಬುದನ್ನು ಖಚಿತವಾಗಿ ಅರ್ಥೈಸಿದ್ದರೂ, ಈಗ ಕಾರ್ಮಿಕ ಇಲಾಖೆ ‘ಉದ್ಯೋಗ ಬಯಸುವ ಅಭ್ಯರ್ಥಿ, ಅಥವಾ ತಂದೆ-ತಾಯಿಯಲ್ಲಿ ಯಾರಾದರೂ ಒಬ್ಬರಾದರೂ ಕನ್ನಡಿಗರಾಗಿದ್ದು, 7 ವರ್ಷ ರಾಜ್ಯದ ಯಾವುದೇ ಭಾಗದಲ್ಲಿ ವಾಸವಾಗಿರುವವರನ್ನು ಕನ್ನಡಿಗರೆಂದು ಪರಿಗಣಿಸ ಬಹುದು’ ಎಂದು ತಿದ್ದಪಡಿ ಮಾಡಿರುವುದಾಗಿ ತಿಳಿದು ಬಂದಿದೆ.

       ದೇಶದ ಹಲವು ರಾಜ್ಯಗಳು ಸ್ಥಳಿಯರು ಎಂದು ಪರಿಗಣಿಸಲು 10 ವರ್ಷ ರಾಜ್ಯದ ವಾಸಿಗಳಾಗಿರಬೇಕೆಂಬುದನ್ನು ಅಳವಡಿಸಿಕೊಂಡಿವೆ. ಅದನ್ನು ಯಾರೂ ಪ್ರಶ್ನಿಸಿಲ್ಲ. ವಸ್ತುಸ್ಥಿತಿ ಹೀಗಿರುವಾಗ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಅನಗತ್ಯ ಗೋದಲ ಸೃಷ್ಟಿಸಿ ವರದಿಯನ್ನು ವಿರೂಪಗೊಳಿಸಲು ಹೊರಟಿರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡುವ ಹುನ್ನಾರ ಇರುವಂತಿದೆ. ಈ ಕನ್ನಡ ವಿರೋಧಿ ಪಿತೂರಿಯನ್ನು ತಡೆದು ಪರಿಷ್ಕøತ ಮಹಿಷಿ ವರದಿಯನ್ನು ಯಥಾವತ್ತಾಗಿ ಸದನದಲ್ಲಿ ಮಂಡಿಸಿ ಕಾನೂನು ಬಲ ನೀಡಬೇಕೆಂಬ ಒತ್ತಾಸೆಯೂ ಕೇಳಿ ಬಂದಿದೆ.

      ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಎದುರಾಗಿರುವ ಕಾನೂನಿನ ತೊಡಕು ನಿವಾರಣೆಗಾಗಿ ಕಾರ್ಮಿಕ ಇಲಾಖೆ ಇದೀಗ ಕಾನೂನು ಸಲಹೆ ಪಡೆಯಲು ಮುಂದಾಗಿದೆ.

       ಮುಖ್ಯಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರು ಕನ್ನಡಿಗರೆಂದರೆ ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು ಎಂಬ ಬಗ್ಗೆ ನಿಲುವು ತಾಳಿದ್ದರಿಂದ ಕಾರ್ಮಿಕ ಇಲಾಖೆ ವಿಧೇಯಕದಲ್ಲಿ ಬದಲಾವಣೆ ಮಾಡಿ ಒಪ್ಪಿಗೆಗಾಗಿ ಸಂಸದೀಯ ವ್ಯವಹಾರಗಳ ಇಲಾಖೆಗೆ ಸಲ್ಲಿಸಿತ್ತು. ಆದರೆ, ಸಂಸದೀಯ ಇಲಾಖೆ ಈ ಬದಲಾವಣೆಗಳನ್ನು ಒಪ್ಪಲು ಸಾಧ್ಯವಿಲ್ಲವಾದ್ದರಿಂದ ಮತ್ತೊಮ್ಮೆ ಕಾನೂನು ಅಭಿಪ್ರಾಯ ಪಡೆಯುವಂತೆ ಸಲಹೆ ಮಾಡಿದೆ.

       ಈ ಹಿನ್ನೆಲೆಯಲ್ಲಿ ಕನ್ನಡಿಗರೆಂದರೆ ಯಾರು, 10 ವರ್ಷ ರಾಜ್ಯದಲ್ಲಿ ವಾಸವಾಗಿರುವ ಅಥವಾ 10ನೇ ತರಗತಿತನಕ ಒಂದು ಭಾಷೆಯಾಗಿ ಕನ್ನಡ ಕಲಿತವರನ್ನು ಕನ್ನಡಿಗರೆಂದು ವಿಧೇಯಕದಲ್ಲಿ ಹೇಳಲಾಗಿತ್ತು. ಆದರೆ, ಬದಲಾವಣೆ ಮಾಡಿರುವ ಪ್ರಕಾರ ವಿಧೇಯಕದಲ್ಲಿ 10 ವರ್ಷದಿಂದ 7 ವರ್ಷಕ್ಕಿಳಿಸಲಾಗಿದೆ. ಉದ್ಯೋಗ ಬಯಸುವ ಮಗ ಅಥವಾ ಮಗಳ ತಂದೆ ಅಥವಾ ತಾಯಿಯಲ್ಲಿ ಒಬ್ಬರಾದರೂ ಕನ್ನಡಿಗರಾಗಿದ್ದು, 7 ವರ್ಷ ರಾಜ್ಯದ ಯಾವುದೇ ಭಾಗದಲ್ಲಿ ವಾಸವಾಗಿರುವವರನ್ನು ಕನ್ನಡಿಗರೆಂದು ಪರಿಗಣಿಸಬಹುದು ಎಂಬ ಅಂಶವನ್ನು ಸೇರಿಸಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಮಹಿಷಿ ವರದಿಯಲ್ಲಿ ಬದಲಾವಣೆ ಮಾಡಬಾರದು ಎನ್ನುವುದು ಕನ್ನಡಿಗರ ಒತ್ತಾಯವಾಗಿದ್ದು. ಇದೀಗ ಕನ್ನಡಿಗರು ಯಾರು ಎಂದು ಹೊಸ ಮಾನದಂಡ ನಿಗದಿ ಮಾಡಲು ಹೊರಟಿರುವುದು ವಿಧೇಯಕ ಮಂಡನೆಯ ಕನಸಿಗೆ ತಣ್ಣೀರೆರಚಿದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap