ದಾವಣಗೆರೆ
ಕೃಷಿ ಇಲ್ಲದೇ ಯಾವುದೇ ಸಂಸ್ಕೃತಿ ಉಳಿಯಲು ಸಾಧ್ಯವೇ ಇಲ್ಲ. ಹೀಗಾಗಿ ಇತರ ವಲಯಗಳಲ್ಲಿ ಲಭ್ಯವಿರುವ ಕೌಶಲ್ಯಗಳನ್ನು ಕೃಷಿಗೆ ತರುವ ಮೂಲಕ ಆಹಾರ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಬೇಕಾದ ಅವಶ್ಯಕತೆ ಇದೆ ಎಂದು ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್. ಅಯ್ಯಪ್ಪನ್ ಪ್ರತಿಪಾದಿಸಿದರು.
ನಗರದ ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕøತಿಕ ಭವನದಲ್ಲಿ ಮಂಗಳವಾರ ನಡೆದ ಪ್ರಸಕ್ತ ಸಾಲಿನ ಐಎಸ್‍ಟಿಇ-ಬಿಐಇಟಿ ಚಟುವಟಿಕೆಗಳ ಉದ್ಘಾಟನೆ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ `ಐಒಟಿ 4 ಸ್ಮಾರ್ಟ್ ಫಾರ್ಮಿಂಗ್’ ವಿಷಯದ ಕುರಿತು ಅವರು ಮಾತನಾಡಿದರು.
ನಗರಗಳು ಹಾಗೂ ನಗರದ ಜನತೆ ಹೇಗೆ ಸ್ಮಾರ್ಟ್ ಆಗುತ್ತಿದ್ದಾರೋ, ಅದೇರೀತಿಯಲ್ಲಿ ಕೃಷಿ ವಲಯವೂ ಸ್ಮಾರ್ಟ್ ಆಗಬೇಕಿದೆ. ಈ ನಿಟ್ಟಿನಲ್ಲಿ ಇತರ ವಲಯಗಳಲ್ಲಿ ಲಭ್ಯವಿರುವ ಕೌಶಲ್ಯಗಳನ್ನು ಕೃಷಿಗೆ ತರುವ ಮೂಲಕ ಆಹಾರ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಬೇಕಾಗಿದೆ. ಕೃಷಿಯೇ ಎಲ್ಲದಕ್ಕೂ ಆಧಾರವಾಗಿದ್ದು, ಸುಸ್ಥಿರ ಅಭಿವೃದ್ಧಿಯ 17 ಗುರಿಗಳಲ್ಲಿ ಐದು ಕೃಷಿಗೆ ಸಂಬಂಧಿಸಿವೆ ಎಂದರು.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. 2 ವರ್ಷದೊಳಗಿನ ಶೇ.10ರಷ್ಟು ಮಕ್ಕಳಿಗೆ ಮಾತ್ರ ಸೂಕ್ತ ಪ್ರಮಾಣದ ಪೌಷ್ಠಿಕ ಆಹಾರ ದೊರೆಯುತ್ತಿದ್ದು, ಇನ್ನುಳಿದ ಶೇ.8 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗೆ ಹಸಿದುಕೊಂಡು ಬೆಳೆಯುವ ಮಕ್ಕಳು ಮುಂದೆ ದೊಡ್ಡವರಾದರೆ, ಅವರುಗಳ ಬೌದ್ಧಿಕ ಹಾಗೂ ದೈಹಿಕ ಸಾಮಥ್ರ್ಯ ಯಾವ ಹಂತದಲ್ಲಿರಲಿದೆ ಎಂಬುದನ್ನು ನೆನಪಿಸಿಕೊಂಡರೆನೇ ಆಘಾತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ಬದಲಾವಣೆಯ ಕಾರಣಗಳಿಂದಾಗಿ ಕೃಷಿಯ ಮೇಲೆ ಪರಿಣಾಮ ಉಂಟಾಗುತ್ತಿದೆ. ಈ ವರ್ಷವೇ ಜೂನ್ ಹಾಗೂ ಜುಲೈನಲ್ಲಿ ಮಳೆಯೇ ಇರಲಿಲ್ಲ. ಆದರೆ, ಆಗಸ್ಟ್ ನಂತರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಭಾರತದಲ್ಲಿ ಪರಿಸರ ಬದಲಾವಣೆಯಿಂದ ಮುಂಗಾರಿನ ಮೇಲೆ ಅಪಾರ ಪರಿಣಾಮವಾಗುತ್ತಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಕೃಷಿ ಭೂಮಿ ಹಿಡುವಳಿ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರತಿ ಅಂದಾಜು ಎರಡು ಸಾವಿರ ರೈತರು, ಕೃಷಿಯನ್ನು ಬಿಟ್ಟು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದೆಲ್ಲವೂ ಕೃಷಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಭಾರತದಲ್ಲಿ ಪ್ರಸ್ತುತ 280 ಮಿಲಿಯನ್ ಟನ್‍ಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗುತ್ತಿದೆ. 2050ರ ವೇಳೆಗೆ 358 ಮಿಲಿಯನ್ ಟನ್ ಆಹಾರ ಧಾನ್ಯ ಬೇಕಾಗಲಿದೆ. ಇದಕ್ಕಾಗಿ ಆಹಾರ ಧಾನ್ಯದ ಉತ್ಪಾದನೆಯಲ್ಲಿ ಶೇ.50ರಷ್ಟು ಹೆಚ್ಚಳ ಆಗಬೇಕಾಗಿದೆ ಎಂದು ಹೇಳಿದರು.
ಸಮಾಜದ ಮೂಲ ಅಗತ್ಯಗಳನ್ನು ಪೂರೈಸಿದರೂ ಸಹ ರೈತರಿಗೆ ಇತರೆ ವೃತ್ತಿಯಲ್ಲಿರುವವರಷ್ಟು ಗೌರವ ಸಿಗುತ್ತಿಲ್ಲ. ಗೌರವ ಹಾಗೂ ಆದಾಯ ಎರಡೂ ರೈತರಿಗೆ ಬೇಕಿದೆ. ಒಂದು ಕೆಜಿ ಭತ್ತ ಉತ್ಪಾದನೆಗೆ 3 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಇಷ್ಟು ಪ್ರಮಾಣದ ನೀರನ್ನು ತರುವುದು ಕಷ್ಟವಾಗುತ್ತಿದೆ.
ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ಪದ್ಧತಿಯ ಅಗತ್ಯವಿದೆ ಎಂದ ಅವರು, ಕೃಷಿ ವಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿದ್ದು, ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ, ಆಹಾರ ಸಂಸ್ಕರಣೆ, ಸಾಗಣೆ ಸೇರಿದಂತೆ ಎಲ್ಲ ಹಂತಗಳಲ್ಲಿ ಇಂಜಿನಿಯರಿಂಗ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದಕ್ಕಾಗಿ ಐ.ಐ.ಟಿ. ಹಾಗೂ ಐಐಎಸ್‍ಸಿಗಳಲ್ಲಿ ಮಹತ್ವದ ಸಂಶೋಧನೆಗಳೂ ನಡೆಯುತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೃಷಿ ವಲಯದಲ್ಲಿ ಸಂಶೋಧನೆ ಹಾಗೂ ನಿರ್ವಣೆಯಲ್ಲಿ ತೊಡಗಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು.
ಮೆಟಲರ್ಜಿಕಲ್ ಹೆರಿಟೇಜ್:
ಇನ್‍ಸೈಟ್ಸ್ ಫ್ರಮ್ ಕರ್ನಾಟಕ ಆ್ಯಂಡ್ ಸೌಥ್ ಇಂಡಿಯಾ’ ವಿಷಯ ಕುರಿತು ಮಾತನಾಡಿದ ಬೆಂಗಳೂರಿನ ನ್ಯಾಷ್ನಲ್ ಇನ್ಸ್‍ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿಸ್‍ನ ಪ್ರಾಧ್ಯಾಪಕಿ, ಪದ್ಮಶ್ರೀ ಡಾ,ಶಾರದಾ ಶ್ರೀನಿವಾಸನ್, ಇತಿಹಾಸದಲ್ಲಿ ಲೋಹಶಾಸ್ತ್ರದ ಅಧ್ಯಯನದಿಂದ ಆಧುನಿಕ ಲೋಹ ಉತ್ಪಾದನೆಗೆ ಸಾಕಷ್ಟು ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಕರ್ನಾಟಕ ಹಾಗೂ ದಕ್ಷಿಣ ಭಾರತಗಳಲ್ಲಿ ಲೋಹಶಾಸ್ತ್ರ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಮುಂದುವರೆದಿತ್ತು. 4ನೇ ಶತಮಾನದಿಂದಲೂ ಲೋಹಶಾಸ್ತ್ರದಲ್ಲಿ ಭಾರತ ಉನ್ನತ ಸ್ಥಾನದಲ್ಲಿರುವ ಬಗ್ಗೆಸಾಕಷ್ಟು ಸಾಕ್ಷಿಗಳು ದೊರೆತಿವೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಭಾರತದ ಉಕ್ಕನ್ನು ಯುರೋಪಿನ ವಿಜ್ಞಾನಿಗಳು ಅಧ್ಯಯನ ಮಾಡಿ ಆಧುನಿಕ ಉಕ್ಕು ರೂಪಿಸಿದರು. ಆದರೆ, ಇದಕ್ಕೆ ಭಾರತೀಯರಿಗೆ ಸಲ್ಲಬೇಕಾದ ಶ್ರೇಯಸ್ಸು ಸಿಗಲಿಲ್ಲ. ಹೀಗಾಗಿ ಭಾರತದ ಹಳೆಯ ಲೋಹಶಾಸ್ತ್ರದ ಬಗ್ಗೆ ಗಂಭೀರ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮದಲ್ಲಿ ಬಿಐeಟಿ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ, ಪ್ರಾಂಶುಪಾಲ ಡಾ.ಎಂ.ಸಿ.ನಟರಾಜ್, ಡಾ.ಮಂಜುನಾಥ್ ಎನ್.ಎಸ್, ಡಾ.ನಿರ್ಮಲ ಸಿ.ಆರ್, ಡಾ.ಸುನೀತಾ, ಡಾ.ಪೂರ್ಣಿಮಾ ಬಿ, ಡಾ.ಬಿ.ಇ.ರಂಗಸ್ವಾಮಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
