ಹುಳಿಯಾರು:
ಕಾರ್ಮಿಕ ಇಲಾಖೆಯಿಂದ ಹುಳಿಯಾರು ಭಾಗದ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಟ್ಟಿದ್ದಾರಾದರೂ ಇದುವರೆವಿಗೂ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಹುಳಿಯಾರು ಹೋಬಳಿಯ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಶಿವಣ್ಣ ಆರೋಪಿಸಿದರು.ಹುಳಿಯಾರಿನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್ ಬಂದ್‍ಗೆ ಬೆಂಬಲಿಸಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳಿವೆ. ಕಾರ್ಮಿಕ ಮಕ್ಕಳ ಓದಿಗೆ, ಮದುವೆಗೆ ಧನ ಸಹಾಯ. ಮರಣ ಹೊಂದಿದ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ನೆರವು. ಮನೆ ಕಟ್ಟಲು ಸಹಾಯ ಧನ ಹೀಗೆ ಅನೇಕ ನೆರವಿನ ಯೋಜನೆಗಳಿವೆ. ಆದರೆ ಅರ್ಜಿ ಸಲ್ಲಿಸಿ ಐದಾರು ವರ್ಷಗಳು ಕಳೆದರೂ ಯಾರೊಬ್ಬರಿಗೂ ಈ ನೆರವುಗಳು ಸಿಗುತ್ತಿಲ್ಲ. ಇದರರ್ಥ ಈ ಯೋಜನೆಗಳೆಲ್ಲವೂ ಪ್ರಚಾರಕ್ಕೆ ಮಾತ್ರವಿದ್ದು ಕಾರ್ಮಿಕರ ಕಷ್ಟಕ್ಕೆ ಇಲ್ಲ ಎನ್ನುವಂತ್ತಾಗಿದೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಅವರು ಮಾತನಾಡಿ ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ರೈತರು ಮತ್ತು ಕಾರ್ಮಿಕ ವರ್ಗಗಳನ್ನು ಸರ್ಕಾರಗಳು ಕಡೆ ಗಣಿಸಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜೀವನ ನಿರ್ವಹಣೆ ಮಾಡಲಾಗದೆ ಈ ವರ್ಗಗಳು ಕಷ್ಟಕ್ಕೆ ಸಿಲುಕಿವೆ. ಸರ್ಕಾರ ನಡೆಸುತ್ತಿರುವವರಿಗೆ ಈ ವರ್ಗಗಳ ಮೇಲೆ ಕನಿಷ್ಠ ಗೌರವವಿದ್ದರೆ ತಕ್ಷಣ ಇವರ ನೆರವಿಗೆ ಧಾವಿಸಿ ರೈತರು ಮತ್ತು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕಿದೆ. ಇಲ್ಲವಾದಲ್ಲಿ ಇವರ ಆಕ್ರೋಶಕ್ಕೆ ಗುರಿಯಾಗಬೇಕಾದೀತು ಎಂದು ಎಚ್ಚರಿಸಿದರು.
ಸುವರ್ಣ ವಿದ್ಯಾ ಚೇತನದ ರಾಮಕೃಷ್ಣಪ್ಪ ಅವರು ಮಾತನಾಡಿ ತೋಳಲ್ಲಿ ಬಲ ಇರುವವರೆವಿಗೂ ಹಗಲಿರುಳೆನ್ನದೆ ದುಡಿಯುವ ರೈತರು ಮತ್ತು ಕಾರ್ಮಿಕರಿಗೆ ಸಂದ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ನಡೆಸಲು ಪಿಂಚಣಿ ಯೋಜನೆ ಜಾರಿ ಮಾಡಬೇಕಿದೆ. ರಕ್ಷಣಾ, ರೈಲ್ವೆ, ಕೃಷಿ ಸೇರಿದಂತೆ ವಿವಿಧ ಸಾರ್ವಜನಿಕ ವಲಯವನ್ನು ಖಾಸಗೀಕರಣ ಮಾಡಿ ದೇಶದ ಜನರ ಉದ್ಯೋಗಕ್ಕೆ ಪೆಟ್ಟು ನೀಡಬಾರದಾಗಿದೆ. ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿಗಾಗಿ ಜಿಲ್ಲೆಗೊಂದರಂತೆ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕಿದೆ. ನದಿ ಜೋಡಣೆ ಮಾಡಿ ಕೃಷಿ ಜಮೀನಿಗೆ ಸಮರ್ಪಕವಾಗಿ ನೀರು ಪೂರೈಸಬೇಕಿದೆ. ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಿ ರೈತರ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕಿದೆ ಎಂದು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್, ಮಲ್ಲಿಕಾರ್ಜುನ್, ಸಜ್ಜಾದ್, ಕಾರ್ಮಿಕ ಸಂಘದ ಗೌಸ್‍ಪೀರ್, ದಾಸಪ್ಪ, ಮೂರ್ತಿ, ಬಸವರಾಜು, ನಾಗೇಶ್, ಜಯಣ್ಣ, ಚಂದ್ರಪ್ಪ, ಉಮೇಶ್, ರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ