ಮರಗಳ ಸ್ಥಳಾಂತರ : ಮರುಜೀವ ಪಡೆಯುವ ಬಗ್ಗೆ ಜ್ಞರ ಅನುಮಾನ

ತುಮಕೂರು

   ರಸ್ತೆ ಅಗಲೀಕರಣ ವೇಳೆ ಅಡ್ಡವಿದ್ದ ನಗರದ ವಿವಿಧ ರಸ್ತೆಗಳ 25 ಮರಗಳನ್ನು ಕಡಿಯದೆ, ಬೇರು ಸಮೇತ ಬೇರೆ ಜಾಗಕ್ಕೆ ಸ್ಥಳಾಂತರಿಸಿ ಮರುಹುಟ್ಟು ನೀಡುವ ಪ್ರಯತ್ನ ಮಾಡಲಾಗಿದೆ. ಬೆಳಗಾವಿಯ ಶುನ್ಯ ಫೌಂಡೇಷನ್ ಸಂಸ್ಥೆ ಪ್ರತಿ ಮರಕ್ಕೆ 5 ಸಾವಿರ ರೂ.ನಂತೆ ಪಡೆದು ಹತ್ತಿರದ ಜಾಗದಲ್ಲಿ ಮರಗಳನ್ನು ಮರುನೆಟ್ಟು ಮರು ಜೀವ ಕೊಡು ಪ್ರಯತ್ನದಲ್ಲಿದೆ.

    ಈ ಪ್ರಯತ್ನ ಯಶಸ್ವಿಯಾಗುವ ಬಗ್ಗೆ ಸಸ್ಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರ ಕಡಿಯುವುದನ್ನು ವಿರೋಧಿಸುವವರ ಕಣ್ಣೊರೆಸುವ ತಂತ್ರ ಇದಾಗಿದೆ. ಕತ್ತರಿಸುವ ಬದಲು ಬೇರೆಡೆ ನೆಡಲಾಗುತ್ತಿದೆ ಹೊರತು ಇದರಿಂದ ಮರಗಳು ಬೆಳೆಯುವುದಿಲ್ಲ ಎಂದೂ ಕೆಲವರು ಹೇಳಿದ್ದಾರೆ.

    ರಸ್ತೆ ನಡುವಿದ್ದ ಮರಗಳನ್ನು ತೆಗೆದು ಇನ್ನೊಂದು ಜಾಗದಲ್ಲಿ ನೆಟ್ಟು ಬೆಳೆಸುವ ಈ ಕಾರ್ಯಾಚರಣೆ ನಗರ ಪಾಲಿಕೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ನಡೆದಿದೆ. ಶುನ್ಯ ಫೌಂಡೇಷನ್ ಸಂಸ್ಥೆಯವರು ಮೊದಲಿಗೆ ಮರದ ರೂಟ್ ಮ್ಯಾಪ್ ಸಿದ್ಧಪಡಿಸಿ, ಮರದ ಜಾತಿ, ವಯಸ್ಸು, ಆರೋಗ್ಯ ಪರಿಶೀಲನೆ ಮಾಡುತ್ತಾರೆ. ಮರದ ಬುಡ ಮೆದುವಾಗುವಂತೆ ಮೂರುನಾಲ್ಕು ದಿನ ನೀರು ಹಾಕಲಾಗುತ್ತದೆ. ನೀರುಣಿಸಿದ ನಂತರ ಮರದ ಬೇರುಗಳು ಹಾಗೂ ಸುತ್ತಲಿನ ಮಣ್ಣು ಸಡಿಲಗೊಳ್ಳುತ್ತದೆ. ಮರದ ಬಿಳಿಲು, ರೆಂಬೆಗಳನ್ನು ಕತ್ತರಿಸಲಾಗುತ್ತದೆ.

     ಜೆಸಿಬಿ ಸಹಾಯದಿಂದ ಮರದ ಸುತ್ತಲೂ ತಾಯಿ ಬೇರಿಗೆ ತೊಂದರೆ ಆಗದಂತೆ ಮಣ್ಣನ್ನು ತೆಗೆಯಲಾಗುತ್ತದೆ. ಕ್ರೇನ್ ಮೂಲಕ ಬಡ್ಡು ಸಮೇತ ಮರವನ್ನು ಹೊರ ತೆಗೆದು ತಾಯಿ ಬೇರಿನ ಸುತ್ತ ಇರುವ ಮಣ್ಣು ಬೀಳದಂತೆ ಬಡ್ಡನ್ನು ವಾಹನದ ಮೂಲಕ ನೆಡಬೇಕಾದ ಸ್ಥಳಕ್ಕೆ ಸ್ಥಳಾಂತರಿಸಲಗುತ್ತದೆ.

     ಮರ ನೆಡುವ ಜಾಗದಲ್ಲಿ ಮೊದಲೇ ಗುಂಡಿ ತೆಗೆದು ಅದಕ್ಕೆ ನೀರು ಹಾಕಿ ಅಲ್ಲಿನ ಮಣ್ಣನ್ನು ಹದ ಮಾಡಲಾಗುತ್ತದೆ. ಹೀಗೆ ನೆಟ್ಟು ಮರದ ಬುಡಕ್ಕೆ ಮರಳು ಹಾಗೂ ಕೆಮ್ಮಣ್ಣನ್ನು ಹಾಕಲಾಗುತ್ತದೆ. ಮರವನ್ನು ಸ್ಥಳಾಂತರಿಸಿ ಮರುಹುಟ್ಟು ನೀಡಲು ಅನುಸರಿಸಲಾಗುತ್ತಿರುವ ಕ್ರಮ ಇದು. ನಗರದ 25 ಮರಗಳನ್ನು ಇದೇ ರೀತಿ ಸ್ಥಳಾಂತರ ಮಾಡಲಾಗಿದೆ. ಅವು ಚಿಗುರಿ ಮತ್ತೆ ಬೆಳೆಯುತ್ತವೆಯೇ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

     ಶುನ್ಯ ಫೌಂಡೇಷನ್‍ನವರು ಈಗಾಗಲೇ ಅನೇಕ ಕಡೆ ಇಂತಹ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ ಇಲ್ಲಿಯೂ ಯಶಸ್ವಿಯಾಗಿ ಮರುನೆಟ್ಟ ಮರಗಳು ಬೆಳೆಯುತ್ತವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ಸಫಲವಾದರೆ ನಗರದಲ್ಲಿ ಸ್ಥಳಾಂತರಿಸಬೇಕಾಗಿರುವ ಇನ್ನಷ್ಟು ಮರಗಳನ್ನು ತೆಗೆದು ಬೇರೆಡೆ ಬೆಳೆಸುವ ಪ್ರಯತ್ನ ಮಾಡಬಹುದು ಎಂದು ಹೇಳಿದ್ದಾರೆ.

     ಆದರೆ, ನಗರದ ಸಸ್ಯ ಶಾಸ್ತ್ರ ಉಪನ್ಯಾಸಕ ಪ್ರೊ. ಕೆ. ಸಿದ್ದಪ್ಪ ಅವರು ಈ ಪ್ರಯತ್ನ ಸಫಲವಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಕಾಂಡದಿಂದ ಬೆಳೆಯುವ ಮರಗಳನ್ನು ತೆಗೆದು ಬೇರೆಡೆ ನೆಟ್ಟರೆ ಮತ್ತೆ ಚಿಗುರುವ ಅವಕಾಶಗಳಿವೆ, ಆದರೆ ಬೀಜದಿಂದ ಬೆಳೆದ ಮರಗಳನ್ನು ಬೇರು ಸಮೇತ ಕಿತ್ತು ಬೇರೆಡೆ ನೆಟ್ಟರೆ ಚಿಗುರುವ ಸಾಧ್ಯತೆ ತೀರಾ ವಿರಳ ಎಂದು ಹೇಳಿದ್ದಾರೆ.

     ಆದರೆ, ಆಯಾ ಮರಗಳ ವಯಸ್ಸು ಆರೋಗ್ಯವೂ ಕಾರಣವಾಗಬಹುದು, ಎಳೆ ಮರಗಳನ್ನು ಕಿತ್ತು ನೆಟ್ಟರೆ ಬೆಳೆಯಬಹುದು, ಹತ್ತಾರು ವರ್ಷಗಳ ವಯಸ್ಸಿನ ಮರಗಳನ್ನು ಮೂಲ ಸ್ಥಳದಿಂದ ತೆಗೆದು ಇನ್ನೊಂದು ಕಡೆ ನೆಟ್ಟರೆ ಬೆಳೆಯುವುದಿಲ್ಲ ಎಂದು ಹೇಳಿದ್ದಾರೆ. ಸುಮಾರು 20-30 ವರ್ಷಗಳ ಮರಗಳು ಆಳವಾಗಿ ಬೇರು ಬಿಟ್ಟಿರುತ್ತವೆ, ಇವನ್ನು ಮಳೆಗಿಡಗಳೆನ್ನುತ್ತಾರೆ, ಇವು ನೀರು ಸಂಗ್ರಹಿಸಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವೆ.

     ಪ್ರೊ. ಕೆ. ಸಿದ್ದಪ್ಪ ಅವರು ನಗರದ ಸಿದ್ಧಗಂಗಾ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಸ್ಯಪ್ರೇಮಿ ಸಿದ್ದಪ್ಪನವರು ನಗರದ ಬಿ. ಹೆಚ್. ರಸ್ತೆ, ಕೋತಿ ತೋಪು ರಸ್ತೆ ಮತ್ತಿತರ ಕಡೆಗಳ ರಸ್ತೆ ವಿಭಜಕಗಳಲ್ಲಿ ಬೇವು ಮತ್ತಿತರ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.

    ಮರಗಳನ್ನು ಸ್ಥಳಾಂತರಿಸುವುದು ಅಥವಾ ಮರುಹುಟ್ಟು ನೀಡುವುದು ಎನ್ನುವುದಕ್ಕಿಂತಾ ಮರಗಳನ್ನು ವಕ್ಕಲೆಬ್ಬಿಸುವುದು ಎಂದರೆ ಸೂಕ್ತ ಎಂದು ಈ ಕಾರ್ಯಕ್ಕೆ ಬೇಸರ ವ್ಯಕ್ತಪಡಿಸಿದ ಪ್ರೊ. ಸಿದ್ದಪ್ಪ ಅವರು, ಮರ ಸ್ಥಳಾಂತರಿಸುವುದೆಂದರೆ ಪಕ್ಷಿ ಸಂಕುಲದ ಆವಾಸ ಸ್ಥಾನವನ್ನು ಹಾಳು ಮಾಡಿದಂತೆ ಹಲವಾರು ವರ್ಷಗಳಿಂದ ಈ ಮರಗಳಲ್ಲಿ ಗೂಡು ಕಟ್ಟಿಕೊಂಡು ಬದುಕು ಕಂಡಿದ್ದ ಹಕ್ಕಿಪಕ್ಷಿಗಳ ನೆಲೆ ಕಳೆದಂತೆ ಎಂದು ಹೇಳಿದ್ದಾರೆ.

    ಮರ ಸ್ಥಳಾಂತರ ಎಂಬುದು ಒಂದು ಬೊಗಸ್ ಕಾರ್ಯಕ್ರಮ ಎಂದಿರುವ ಸಿದ್ದಪ್ಪನವರು, ಯಾವುದೇ ಅಭಿವೃದ್ಧಿಯನ್ನು ಮರಗಳನ್ನು ಉಳಿಸಿಯೇ ಮಾಡಬೇಕು ಹೊರತು ಮರಗಿಡಗಳನ್ನು ತೆರವುಗೊಳಿಸಿ ಮಾಡುವುದಲ್ಲ ಎಂದಿದ್ದಾರೆ. ಮರಗಳನ್ನು ಕಡಿಯದೆ ಬೇರೆಕಡೆ ನೆಟ್ಟು ಬೆಳೆಸುತ್ತಿದ್ದೇವೆ ಎನ್ನುವ ಇಲಾಖೆ ಅಧಿಕಾರಿಗಳಿಗೆ ಆ ಮಟ್ಟದ ಪರಿಸರ ಕಾಳಜಿ ಇದ್ದರೆ ನಗರದಲ್ಲಿ ಜಾಗ ಇರುವ ಕಡೆ ಗಿಡಮರಗಳನ್ನು ಬೆಳೆಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap