ತುಮಕೂರು ಪಾಲಿಕೆ : ಕೆರೆಗಳ ಬಗ್ಗೆ ಮಾಹಿತಿಯೇ ಇಲ್ಲ

ತುಮಕೂರು
    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಬಗ್ಗೆ ಪಾಲಿಕೆಯಲ್ಲೇ ಮಾಹಿತಿ ಇಲ್ಲವೆಂಬ ವಿಚಿತ್ರ ಹಾಗೂ ಚರ್ಚಾಸ್ಪದ ಪ್ರಸಂಗ ಬೆಳಕಿಗೆ ಬಂದಿದೆ.ತುಮಕೂರು ನಗರ ಈಗ ಸ್ಮಾರ್ಟ್‍ಸಿಟಿ ಆಗುತ್ತಿದ್ದು, ಕೆರೆಗಳ ಅಭಿವೃದ್ಧಿಗೆ ಹಾಗೂ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಯೋಜನೆಗಳು ಪ್ರಸ್ತಾಪವಾಗಿ ವಿವಿಧ ಪ್ರಕ್ರಿಯೆಗಳಾಗುತ್ತಿರುವ ಹೊತ್ತಿನಲ್ಲೇ ಪಾಲಿಕೆಯು ಈ ರೀತಿ ಹೇಳಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದವೆನಿಸುತ್ತಿದೆ. 
     ಪಾಲಿಕೆ ವ್ಯಾಪ್ತಿಯ ಕೆರೆ, ರಾಜಗಾಲುವೆ, ಅವುಗಳ ವಿಸ್ತೀರ್ಣ, ಸರ್ವೆ ನಂಬರ್, ಒತ್ತುವರಿ ವಿವರ, ಸರ್ವೆ ಇಲಾಖೆ ವರದಿ ಒಳಗೊಂಡು ಸಮಗ್ರ ಮಾಹಿತಿ ಕೋರಿ ನಗರದ ಮಾಹಿತಿಹಕ್ಕು ಕಾರ್ಯಕರ್ತ ಇಮ್ರಾನ್‍ಪಾಷ ದಿನಾಂಕ 15-11-2019 ರಂದು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರು ದಿನಾಂಕ 03-12-2019 ರಂದು “ಹಿಂಬರಹ”À (ನಂ.ತುಮಪಾ/ತಾಂಶಾ/ ಮಾಹ/ಸಿಆರ್/ 55/ 2019-20, ದಿನಾಂಕ 03-12-2019) ನೀಡಿದ್ದು, ಅದರಲ್ಲಿ ಹುಬ್ಬೇರಿಸುವಂತಹ ಈ  ಸಂಗತಿ ಇದೆ.
    “ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆರೆಗಳಿಗೆ ಸಂಬಂಧಿಸಿದಂತೆ ಕೆರೆಗಳ ಅಳತೆ ಕಾರ್ಯ ಮುಗಿದಿರುತ್ತದೆ. ಆದರೆ ಅಧಿಕೃತವಾದ ನಕ್ಷೆ ಮತ್ತು ಒತ್ತುವರಿ ಮಾಹಿತಿಯ ವಿವರವಾದ ದಾಖಲೆಗಳು ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯಿಂದ ಸಲ್ಲಿಸಲಾಗಿರುವುದಿಲ್ಲವಾದ್ದರಿಂದ ಈ ಸಮಯದಲ್ಲಿ ಮಾಹಿತಿ ಲಭ್ಯವಿರುವುದಿಲ್ಲ’’ ಎಂದು ಆ ಇಲಾಖೆಯತ್ತ ಬೊಟ್ಟು ಮಾಡಿ ಪಾಲಿಕೆ ಕೈತೊಳೆದುಕೊಂಡಿದೆ. 
     “ರಾಯಗಾಲುವೆಗಳಿಗೆ ಸಂಬಂಧಿಸಿದಂತೆ ಈ ಕಚೇರಿಯಿಂದ ಲಭ್ಯವಿರುವ ಮಾಹಿತಿಯಂತೆ ರಾಯಗಾಲುವೆಗಳ ಪಟ್ಟಿಯನ್ನು ಮತ್ತು ಅಳತೆ ಕಾರ್ಯಕ್ಕೆ ಸಹಕರಿಸಲು ಅಧಿಕಾರಿ/ಸಿಬ್ಬಂದಿ ನಿಯೋಜಿಸಿ ಜ್ಞಾಪನವನ್ನು ಸಂ. ತುಮಪಾ/ತಾಂಶಾ/ ಸಿಆರ್/143/2019-20, ದಿನಾಂಕ 05-10-2019 ರಂದು ಹೊರಡಿಸಿದೆ. ಆದೇಶದ ಪ್ರತಿ ಮತ್ತು ರಾಯಗಾಲುವೆಗಳ ಪಟ್ಟಿ ಭೂದಾಖಲೆಗಳ ಉಪನಿರ್ದೇಶಕರು, ತುಮಕೂರುರವರಿಗೆ ಸಲ್ಲಿಸಿದೆ. ಇದುವರೆಗೂ ಯಾವುದೇ ಭೂಮಾಪಕರನ್ನು ನಿಯೋಜಿಸಿರುವುದಿಲ್ಲ” ಎಂದು ಪಾಲಿಕೆಯು ನೇರ ಹಾಗೂ ಗಂಭೀರ ಆರೋಪ ಮಾಡಿದೆ. 
      “ಸರ್ವೆ ಕಾರ್ಯವನ್ನು ವಾರ್ಡ್‍ವಾರು ಇಂಜಿನಿಯರ್ ನೇತೃತ್ವದಲ್ಲಿ ನೆರವೇರಿಸಲಾಗುವುದು. ಕಾರ್ಯ ಕೈಗೊಂಡ ನಂತರ ವಾರ್ಡ್‍ವಾರು ಇಂಜಿನಿಯರ್‍ರಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ’’ ಎಂದು ಅರ್ಜಿದಾರರಿಗೆ ಪಾಲಿಕೆಯು ಹೇಳಿ, ನುಣುಚಿಕೊಂಡಿದೆ.ಪಾಲಿಕೆಯ ಈ ಉತ್ತರ ಈಗ ಚರ್ಚೆಗೆಡೆಮಾಡಿದೆ. ಪಾಲಿಕೆ ಬಳಿ ಪಾಲಿಕೆ ವ್ಯಾಪ್ತಿಯ ಕೆರೆಗಳ ಸಂಖ್ಯೆ, ಕೆರೆಗಳ ಹೆಸರೂ ಇಲ್ಲವೇ? ಕನಿಷ್ಟ ಅವುಗಳನ್ನಾದರೂ ಅರ್ಜಿದಾರರಿಗೆ ಒದಗಿಸಬಹುದಿತ್ತಲ್ಲವೇ? ಅದನ್ನು ಬಿಟ್ಟು, ಸರ್ವೆ ಇಲಾಖೆಯತ್ತ ಬೊಟ್ಟು ಮಾಡಿರುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಚರ್ಚೆಗೊಳ್ಳತೊಡಗಿವೆ.
     ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನೆ ನಡೆಸುವಾಗ ಕೆರೆಗಳ ಬಗ್ಗೆ ಪ್ರಶ್ನಿಸಿದ್ದರು. ಆಗ ಸರ್ವೆ ಇಲಾಖಾಧಿಕಾರಿಗಳು ಸರ್ವೆ ಕಾರ್ಯ ಆಗಿದೆಯೆಂದೂ, ಒತ್ತುವರಿ ಕಂಡುಬಂದಿದೆ ಯೆಂದೂ ಉತ್ತರಿಸಿದ್ದರು. ಆಗ ಶಾಲಿನಿರಜನೀಶ್ ಅವರು ಒತ್ತುವರಿದಾರರ ಪಟ್ಟಿಯನ್ನು ಬಹಿರಂಗಪಡಿಸಿ, ಒತ್ತುವರಿ ತೆರವಿಗೆ ಸೂಚಿಸಿದ್ದರು. ಆದರೆ ಇಷ್ಟಾಗಿಯೂ ಈವರೆಗೆ ವಾಸ್ತವಿಕವಾಗಿ ಯಾವುದೇ ಪ್ರಗತಿ ಆಗಿಲ್ಲವೆಂಬುದು ಸಹ ಈ ಪತ್ರದಿಂದ ಬಯಲಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap