ದಾವಣಗೆರೆ:
ಪಾಲಿಕೆ ಚುನಾವಣೆಯಲ್ಲಿ 16ನೇ ವಾರ್ಡ್ ವ್ಯಾಪ್ತಿಯಲ್ಲಿ ನಕಲಿ ಮತದಾರರನ್ನು ಸೃಷ್ಟಿಸಿ ತಾವು (ಕಾಂಗ್ರೆಸ್ ಅಭ್ಯರ್ಥಿ) ಗೆಲುವು ಸಾಧಿಸಿದ್ದಾರೆಂಬುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ಎಚ್.ದಿವಾಕರ್ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಪಾಲಿಕೆ ಸದಸ್ಯ ಎ.ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ದಿವಾಕರ್ ಹಾಗೂ ಆ ಪಕ್ಷದ ಮುಖಂಡರು ಸೋಲಿನ ಹತಾಶೆಯಿಂದಾಗಿ, ರಾಜಕೀಯ ಪ್ರೇರಿತರಾಗಿ ತಮ್ಮ ವಿರುದ್ಧ ಇಲ್ಲ, ಸಲ್ಲದ ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿದರು.ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇದ್ದ ಮತದಾರರ ಪಟ್ಟಿಯೇ ಪಾಲಿಕೆ ಚುನಾವಣೆಯಲ್ಲಿ ಇತ್ತು. ಈ ಪಟ್ಟಿಯಲ್ಲಿ ಒಬ್ಬೆ, ಒಬ್ಬ ಹೊಸ ಮತದಾರನನ್ನು ಸೇರಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇದೇ 16ನೇ ವಾರ್ಡ್ ವಿಧಾನಸಭಾ ಚುನಾವಣೆಯಲ್ಲಿ 230 ಹಾಗೂ ಲೋಕಸಭಾ ಚುನಾವಣೆಯಲ್ಲಿ 1300 ಮತಗಳನ್ನು ಬಿಜೆಪಿಗೆ ನೀಡಿತ್ತು. ಆದರೆ, ಅದೇ ಮತದಾರರು ಈಗ ತಮ್ಮನ್ನು 1577 ಮತಗಳ ಅಂತರದಿಂದ ಗೆಲ್ಲಿಸಿರುವುದನ್ನು ಬಿಜೆಪಿಯವರಿಗೆ ಸಹಿಸಲಾಗದೇ ಇಲ್ಲ, ಸಲ್ಲದನ್ನು ಮಾತನಾಡಿ ಮತದಾರರಿಗೆ ಅಪಮಾನ ಮಾಡಿದ್ದಾರೆಂದು ಹೇಳಿದರು.
ಬಿಜೆಪಿಗರು ಈಗ ಹೇಳುವಂತೆ ಚುನಾವಣೆಯಲ್ಲಿ ನಕಲಿ ಮತದಾರರು ಮತ ಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಿದುದೇ ನಿಜವಾಗಿದ್ದರೆ, ಮತದಾನದ ದಿನದಂದು ಆ ಪಕ್ಷದ ಬೂತ್ ಏಜೆಂಟರು ಏಕೆ ತಡೆಯಲಿಲ್ಲ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯರು ಆರೋಪಿಸಿರುವಂತೆ ನಾನು ಯಾವುದೇ ಬಿಎಲ್‍ಓಗಳ ಮೇಲೆ ಒತ್ತಡ ತಂದು ಹೊಸ ಮತದಾರರನ್ನು ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡು ಬಾರಿ ನನ್ನ ಮಡದಿ ಹಾಗೂ ಮತ್ತೆರಡು ಬಾರಿ ನನ್ನನ್ನು ಸೇರಿದಂತೆ ಒಟ್ಟು ನಾಲ್ಕು ಬಾರಿ ಅಲ್ಲಿಯ ಸ್ಥಳೀಯ ಮತದಾರರು ತಮಗೆ ಆಶೀರ್ವಧಿಸಿದ್ದಾರೆ. ಇದಕ್ಕೆ ಅಲ್ಲಿ ನಾವು ಸ್ಥಳೀಯ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದೇ ಕಾರಣವಾಗಿದೆ ಎಂದ ಎ.ನಾಗರಾಜ್, ನಾನು ಕೈ ಮುಗಿದು ಮತ ಕೇಳಿದ್ದೇನೆಯೇ ಹೊರತು, ಅವರಂತೆ ಮತದಾರರಿಗೆ ಆಮಿಷವೊಡ್ಡಿ ಮತ ಪಡೆದಿಲ್ಲ ಎಂದು ಆಪಾದಿಸಿದರು .ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಖಂಡರುಗಳಾದ ಕೆ.ಜಿ.ಶಿವಕುಮಾರ್, ಎಸ್.ರವಿ, ಶಿವಾಜಿರಾವ್, ಸುರೇಶ್ ಕುಂಟೆ, ಯೋಗೀಶ್, ಸತೀಶ್, ರಮೇಶ್, ಸೋಮಶೇಖರ್, ಮುಜಾಹಿದ್, ಬಾಬು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
