ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡ ಸರ್ಕಾರ: ಬಿ ಎಸ್ ವೈ

ಬೆಳಗಾವಿ

         ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಕುಮಾರಸಾಮಿ, ನೀಡಿದ ವಾಗ್ದಾನಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಿಲ್ಲ. ಜನ ವಿರೋಧಿ ಆಡಳಿತ ನಡೆಸುತ್ತಿರುವ ನೀವು ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದೀರಿ ಎಂದು ಪ್ರತಿಪಕ್ಷದ ನಾಯಕ ಬಿ,ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

        ಬರ ಪರಿಸ್ಥಿತಿ ಕುರಿತು ನಿಲುವಳಿ ಸೂಚನೆ ಮೇಲೆ ಪ್ರಸ್ತಾವನೆ ಮೇಲೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಜನತೆ ನಿಮಗೆ ಪೂರ್ಣ ಪ್ರಮಾಣದ ಜನಾದೇಶ ನೀಡಿಲ್ಲ. ಆದರೂ ನೀವು ಅಧಿಕಾರದಲ್ಲಿದ್ದೀರಿ. ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. 100 ಕ್ಕೂ ಹೆಚ್ಚು ತಾಲ್ಲೂಕುಗಳು ಬರ ಪರಿಸ್ಥಿತಿ ಇದ್ದು, ಇನ್ನೂ 20 ರಿಂದ 25 ತಾಲ್ಲೂಕುಗಳು ಬರದಿಂದ ತತ್ತರಿಸಿವೆ. ವಾಡಿಕೆ ಮಳೆಗಿಂತ ಶೇ. 40 ರಿಂದ 79 ರಷ್ಟು ಕಡಿಮೆ ಮಳೆಯಾಗಿದೆ. ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಸೇರಿ ಯಾವುದೇ ಸಚಿವರು ಭೇಟಿ ನೀಡಿಲ್ಲ ಎಂದು ಆಪಾದಿಸಿದರು.

       ಬರ ಪೀಡಿತ ತಾಲ್ಲೂಕುಗಳಿಗೆ 50 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಇದು ಹಳೆ ಬಾಕಿಗೆ ಈ ಹಣ ಹೊಂದಾಣಿಕೆಯಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪರಿಸ್ಥಿತಿ ಸುಧಾರಣೆಗೆ ನೈಜ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಮಾಸಾಶನ ಹೆಚ್ಚಿಸುವ ಭರವಸೆ ಈಡೇರಿಲ್ಲ. ಸಾಲ ಮನ್ನಾ ಸೌಲಭ್ಯ ರೈತರಿಗೆ ತಲುಪಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ನೀಡುವ ವಿಷಯದಲ್ಲೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಶಾಲಾ ಮಕ್ಕಳಿಗೆ ಬಸ್ ಪಾಸ್ ನೀಡುವುದರಲ್ಲೂ ಸರ್ಕಾರ ಎಡವಿದೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸುತ್ತಿದ್ದೀರಿ ಎಂದರು.

        ಮುಂದಿನ ನಾಲ್ಕುವರೆ ವರ್ಷದಲ್ಲಿ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೀರಿ. ಅಲ್ಲಿಯವರೆಗೆ ಯಾರು ಇರುತ್ತಾರೋ ಹೋಗುತ್ತಾರೋ ಗೊತ್ತಿಲ್ಲ. ನಿಮ್ಮ ನಿರ್ಧಾರದಿಂದ ರೈತರ ಬದುಕು ಸಂಕಷ್ಟಕ್ಕಿಡಾಗಿದೆ. ಬ್ಯಾಂಕುಗಳು ಹೊಸ ಸಾಲ ನೀಡುತ್ತಿಲ್ಲ. ಈಗಾಗಲೇ ಪಡೆದಿರುವ ಸಾಲವೂ ತೀರಿಲ್ಲ. ಅದಕ್ಕೆ ಬಡ್ಡಿ ಬೆಳೆಯುತ್ತಿದೆ.

        ಅದನ್ನು ಪಾವತಿಸುವವರು ಯಾರು. ಅಸಲು ತೀರಿಸುವವರು ಯಾರು. ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಮನ್ನಾಗೆ ಒಪ್ಪಿವೆಯೇ. ಸರ್ಕಾರ ರೈತರ ಜೀವನ ಜೊತೆ ಚೆಲ್ಲಾಟವಾಡಬಾರದು. ರೈತರ ಸಾಲ ಮನ್ನಾಗೆ ಸ್ವಾಗತವಿದೆ. ಅದರ ಎಲ್ಲಾ ಅಂಶಗಳ ಬಗ್ಗೆಯೂ ಕುಲಂಕುಶವಾಗಿ ಅಧ್ಯಯ ಮಾಡಿ ಸಮರ್ಪಕವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಮಾಹಿತಿ, ಅನುಮತಿಯೊಂದಿಗೆ ತೀರ್ಮಾನ ಪ್ರಕಟಿಸಬೇಕಿತ್ತು. ಆದರೆ ಆ ರೀತಿಯ ಯಾವ ಮುಂಜಾಗ್ರತೆ ತೆಗೆದುಕೊಂಡಿಲ್ಲ ಎಂದು ದೂರಿದರು.

         ಜೆಡಿಎಸ್ ಅನ್ನು ಕಾಂಗ್ರೆಸ್ ಹೇಗೆ ಸಹಿಸಿಕೊಂಡಿದೆ ಎಂಬುದೇ ತಿಳಿಯದಾಗಿದೆ. ಚುನಾವಣೆಯ ಮೊದಲು ಜೆಡಿಎಸ್ ನೀಡಿದ್ದ ಭರವಸೆಗಳ ಪ್ರಣಾಳಿಕೆಯನ್ನು ಕಾಂಗ್ರೆಸ್‍ನವರು ಓದಿಲ್ಲವೇ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಲೋಕೋಪಯೋಗಿ ಇಲಾಖೆಯಿಂದ ಪ್ರತಿ ಕಚೇರಿಯಿಂದ ಪ್ರತಿ ತಿಂಗಳು ಕೋಟ್ಯಂತರ ರೂ ಹಣ ನೀಡಬೇಕು ಎಂಬ ಒತ್ತಡ ಹೇರಿ ಕಪ್ಪ ವಸೂಲಿ ಮಾಡಲಾಗುತ್ತಿದೆ. ಸರ್ಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

         ನೀರಾವರಿ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳಲ್ಲಿ 12 ಸಾವಿರ ಕೋಟಿ ಬಿಲ್ ಬಾಕಿ ಪಾವತಿಸಬೇಕಿದೆ. ಇದರಿಂದಾಗಿ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಅವರು ತಾರಾ ಹೋಟೆಲ್ ನಲ್ಲಿ ಉಳಿದು ಆಡಳಿತ ಮಾಡುತ್ತಾರೆ. ಇದರ ವೆಚ್ಚವನ್ನು ಯಾರು ಪಾವತಿಸುತ್ತಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap