ರಾಜ್ಯದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ : ಸಿಎಂ

ಬೆಂಗಳೂರು

    ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಪರೀಕ್ಷೆ ನಡೆಸುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇನ್ನು ಹೆಚ್ಚಾಗುತ್ತಿದ್ದರೂ ಸಹ, ಲಾಕ್‍ಡೌನ್ ನಿರ್ಬಂಧಗಳನ್ನು ಮತ್ತೆ ಹೇರಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನಜೀವನ ಸಹಜ ಸ್ಥಿತಿಗೆ ಹಿಂದಿರುಗಲು ಅವಕಾಶ ಕಲ್ಪಿಸುವುದು ಉಚಿತವೆಂದು ಸರ್ಕಾರ ನಿರ್ಧರಿಸಿದೆ. ಲಾಕ್‍ಡೌನ್ ನಿರ್ಬಂಧಗಳ ಹಂತಹಂತ ತೆರವು ಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ ಎಂದರು.

     ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ 50 ಲಕ್ಷ ರೈತರಿಗೆ ಪ್ರಯೋಜನವಾಗುವಂತೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕೋವಿಡ್ ಕಾಟ ಇಲ್ಲವಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂಬ ಉದ್ದೇಶದಿಂದ ದೇವರಲ್ಲಿ ಪ್ರಾರ್ಥನೆ ಮಾಡಲು ಇಲ್ಲಿಗೆ ಆಗಮಿಸಿದ್ದೇನೆ.

     ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲದಿದ್ದರೂ ಕೂಡ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, 50 ಲಕ್ಷ ರೈತರಿಗೆ ಈ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರಿಗೆ 2000 ರೂಪಾಯಿ ಕೊಡುವಂತಹ ಯೋಜನೆಯಡಿ ಈಗಾಗಲೆ ಎರಡು ಸಾವಿರ ರೂಪಾಯಿ ನೀಡಲಾಗಿದೆ. ಪ್ರಧಾನಿ ಮೋದಿ ಆರು ಸಾವಿರ ರೂ.ಯನ್ನು ರೈತರಿಗೆ ನೀಡುತ್ತಿದ್ದಾರೆ. ಅದಕ್ಕೆ ನಾವು ನಾಲ್ಕು ಸಾವಿರ ರೂಪಾಯಿ ಸೇರಿಸಿಕೊಡುವುದಾಗಿ ಘೋಷಿಸಿದ್ದೆವು. ಈಗಾಗಲೆ 2 ಸಾವಿರ ರೂ.ನೀಡಿದ್ದು, 50 ಲಕ್ಷ ರೈತರಿಗೆ ತಲಾ 2000 ರೂ.ನೀಡಲು ಒಂದು ಸಾವಿರ ಕೋಟಿ ರೂಪಾಯಿ ನಿನ್ನೆ ಬಿಡುಗಡೆ ಮಾಡಲಾಗಿದೆ. ರೈತರ ಸಂಕಷ್ಟ ಕಾಲದಲ್ಲಿ ಹಣಕಾಸು ಸ್ಥಿತಿ ಸರಿಯಿಲ್ಲದಿದ್ದರೂ ಅವರು ನೆಮ್ಮದಿಯಿಂದ ಬದುಕಬೇಕು, ಮಳೆಗಾಲದಲ್ಲಿ ಈ ಹಣ ಉಪಯೋಗ ಆಗಬೇಕು ಎಂಬ ಕಾರಣದಿಂದ ಹಣ ಬಿಡುಗಡೆ ಮಾಡಿದ್ದೇನೆ ಎಂದರು.

    ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಹಳ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಸೇರಿ ಇಡೀ ದೇಶದಲ್ಲಿ ಕೋವಿಡ್ ನಿಯಂತ್ರಿಸಬೇಕಾಗಿದೆ ಎಂದರು.ಕೋವಿಡ್ ಪರೀಕ್ಷೆ ಕಡಿಮೆಯಾಗಿಲ್ಲ. ಅದನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಪರೀಕ್ಷೆ ನಡೆಯುತ್ತಿದೆ. ನಾಳೆ ಪ್ರಧಾನಿಯೊಂದಿಗೆ ವಿಡಿಯೋ ಸಂವಾದ ನಡೆಸಲಾಗುತ್ತದೆ. ಕರ್ನಾಟಕಕ್ಕೆ ಲಾಕ್‍ಡೌನ್ ಅಗತ್ಯವಿಲ್ಲ. ಇನ್ನೂ ಕೆಲವು ವಲಯಗಳನ್ನು ನಿರ್ಬಂಧದಿಂದ ತೆರವುಗೊಳಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡುತ್ತೇವೆ. ಆರ್ಥಿಕ ಸ್ಥಿತಿ ಸುಧಾರಣೆಗೆ, ಜನರ ಜೀವನ ಮಟ್ಟ ಸುಧಾರಿಸಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

   ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap