ದಾವಣಗೆರೆ:
ರಾಜ್ಯ ಸರ್ಕಾರ ಯಾವುದೇ ಕಾಣಕ್ಕೂ ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಆಗ್ರಹಿಸಿದರು.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮದ್ಯಪಾನವು ಸಮಾಜದ ಬಹುದೊಡ್ಡ ಸಮಸ್ಯೆಯಾಗಿದೆ. ಕುಡಿತವೇ ಎಲ್ಲ ಸಮಸ್ಯೆಗಳ ತಾಯಿಬೇರು. ಹೀಗಿರುವಾರ ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಇನ್ನಷ್ಟು ಅನಾಹುತ ಸಂಭವಿಸುತ್ತವೆ. ಆನ್‍ಲೈನ್ ಮದ್ಯ ಮಾರಾಟವು ಹಿಂದಿನ ಸರ್ಕಾರದ ನಿರ್ಧಾರವಾಗಿದ್ದು, ಅದನ್ನು ಜಾರಿಗೆ ತರುವುದಿಲ್ಲವೆಂಬ ಮಾತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬದ್ಧರಾಗಿರಬೇಕೆಂದು ಒತ್ತಾಯಿಸಿದರು.
ಮದ್ಯಪಾನವನ್ನು ಸಂಪೂರ್ಣ ನಿಷೇಧಿಸಿದಾಗ ಮಾತ್ರ ಶರಣರ ಸರ್ವರ ಹಿತದ ಕಲ್ಯಾಣ ರಾಜ್ಯ ನಿರ್ಮಿಸಲು ಸಾಧ್ಯ. ಮದ್ಯದ ಆದಾಯ ನೆಚ್ಚಿಕೊಂಡು ಸರ್ಕಾರ ಮೃದುಧೋರಣೆ ತಳೆಯುವುದು ಸರಿಯಲ್ಲ. ಮದ್ಯಪಾನದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದ್ದರಿಂದ ಬಿಹಾರ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಸಂಪೂರ್ಣ ಮದ್ಯ ನಿಷೇಧ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ದುಶ್ಚಟಮುಕ್ತ ದಾವಣಗೆರೆ ಜಿಲ್ಲಾ ವೇದಿಕೆಯ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಯುವಜನರು ಜೀವನ ಮೌಲ್ಯಗಳನ್ನೇ ಮರೆತಿರುವ ಇಂದಿನ ದಿನಗಳಲ್ಲಿ ಮೊಬೈಲ್, ಇಂಟರ್‍ನೆಟ್, ಮಾದಕ ವಸ್ತುಗಳ ಸೇವನೆ ಟ್ರೆಂಡ್ ಆಗಿದೆ. ಇಂತಹ ಸಂದರ್ಭದಲ್ಲಿ ಆನ್‍ಲೈನ್ ಮೂಲಕ ಮದ್ಯಪಾನ ತರಿಸುವ ಅವಕಾಶ ಕೊಟ್ಟರೆ ಯುವಕರು ಇನ್ನಷ್ಟು ಹಾಳಾಗುವ ಸಂಭವ ಹೆಚ್ಚು. ಅನ್ನಭಾಗ್ಯ, ತಾಳಿಭಾಗ್ಯ ಮುಂತಾದ ಭಾಗ್ಯಗಳನ್ನು ನೀಡುವ ಸರ್ಕಾರ ಆನ್‍ಲೈನ್ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಹೆಣ್ಣುಮಕ್ಕಳ ತಾಳಿ, ಅನ್ನ ಕಿತ್ತುಕೊಂಡಂತೆ. ಸಮಾಜವನ್ನು ದುಶ್ಚಟಗಳ ಹಾವಳಿಯಿಂದ ಮುಕ್ತಗೊಳಿಸಿ, ಸುಂದರ ವಾತಾವರಣ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ಆವರಗೆರೆ ರುದ್ರಮುನಿ, ಆರ್.ಬಿ.ಪಾಟೀಲ್, ವೀಣಾ ಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ