ಶಿರಾ
ವೃದ್ಧಾಪ್ಯ ವೇತನಕ್ಕಾಗಿ ಫಲಾನುಭವಿಗಳು ಕಂದಾಯ ಇಲಾಖೆಗೆ ವರ್ಷಾನುಗಟ್ಟಲೆ ಚಪ್ಪಲಿ ಸವೆಯುವಂತೆ ಓಡಾಡಿದ್ದೇವೆ ಆದರೂ ಕೆಲಸ ಆಗಲಿಲ್ಲವೆಂಬ ಕೊರಗು ಯಾರಲ್ಲೂ ಬರಬಾರದೆಂಬ ಉದ್ದೇಶದಿಂದ ಇನ್ನು ಮುದೆ ಆಧಾರ್ ಕಾರ್ಡಿನಲ್ಲಿ 60 ವರ್ಷ ತುಂಬಿದೆ ಎಂದು ನಮೂದಾಗುತ್ತಿದ್ದಂತೆಯೇ ನೇರವಾಗಿ ಕಂದಾಯ ಇಲಾಖೆಯ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ನೀಡುವಂತಹ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಬುಕ್ಕಾಪಟ್ಟಣ ರಸ್ತೆಯ ಬೈಪಾಸ್ ಹೆದ್ದಾರಿ ಸಮೀಪದಲ್ಲಿ ಸುಮಾರು 13 ಕೊಟಿ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ಫಲಾನುಭವಿಗಳ ಆಧಾರ್, ಜಾತಿ ವರಮಾನ ಪತ್ರ ಹಾಗೂ ಆದಾಯ ವರಮಾನ ಪತ್ರಗಳೆಲ್ಲವೂ ಕಂದಾಯ ಇಲಾಖೆಯಲ್ಲಿಯೇ ಇರುತ್ತವೆ. 60 ವರ್ಷ ವಯಸ್ಸಾದ ಫಲಾನುಭವಿಗಳ ಸಂಪೂರ್ಣ ದಾಖಲೆಗಳು ನಮ್ಮಲ್ಲಿಯೇ ಇರುವಾಗ ಅವರನ್ನು ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಕೇಳುವುದು ಸಾಧುವಲ್ಲ. ಹೀಗಾಗಿ ಆಯಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳು ಇದರ ಜವಾಬ್ದಾರಿ ಹೊತ್ತು 60 ವರ್ಷ ವಯಸ್ಸಾದೊಡನೆ ಅಂತಹ ಫಲಾನುಭವಿಗಳ ಮನೆ ಬಾಗಿಲಿಗೆ ಸೌಲಭ್ಯ ದೊರಕುವಂತವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆರ್.ಅಶೋಕ್ ಹೇಳಿದರು.
ಆರಂಭವಾಗಿ ಬಳ್ಳಾರಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂತಹ ವೃದ್ಧಾಪ್ಯ ವೇತನವನ್ನು ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೇ ಅಲ್ಲಿ 10,000ಕ್ಕೂ ಹೆಚ್ಚು ಫಲಾನುಭವಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಇಂತಹ ವ್ಯವಸ್ಥೆಯನ್ನು ರೂಪಿಸಲು ರಾಜ್ಯ ಸರ್ಕಾರ ದಿಟ್ಟತನ ತೋರಿದೆ ಎಂದರು.
ರಾಜ್ಯದ ಬಹುತೇಕ ಫಲಾನುಭವಿಗಳಿಗೆ ಮೂರು, ನಾಲ್ಕು ತಿಂಗಳಾದರೂ ಮಾಸಾಶನ ಸಿಕ್ಕಿಲ್ಲದ ಕಾರಣ ಫಲಾನುಭಗಿಗಳ ಆಧಾರ್ ಕಾರ್ಡ್‍ಗಳನ್ನು ಲಿಂಕ್ ಮಡಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಅರ್ಹರೆಲ್ಲರಿಗೂ ಸೌಲಭ್ಯ ಸಿಗಲಿದೆ. ಆಧಾರ್ ಲಿಂಕ್‍ನಿಂದ ಬೋಗಸ್ ಫಲಾನುಭವಿಗಳನ್ನು ಕೈಬಿಡಲಾಗುತ್ತದೆ. ಇದರಿಂದ 7000 ಕೋಟಿ ರೂ ಸರ್ಕಾರಕ್ಕೆ ಉಳಿತಾಯವಾಗಲಿದೆ. ರಾಜ್ಯ ಸರ್ಕಾರ ನೀಡುವ ಮಾಸಾಶಗಳು ಇನ್ನು ಮುಂದೆ ಅಂಚೆ ಕಚೇರಿಯ ಮೂಲಕ ಲಭ್ಯವಾಗುವುದಿಲ್ಲ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕಲಾಗುವುದು. ಇನ್ನು ಮೂರು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಯಲಿದೆ. ಎಂದು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಗಳ ಬಗ್ಗೆ ಆರ್.ಅಶೋಕ್ ತಿಳಿಸಿದರು.
ನಾನು ಕಂದಾಯ ಸಚಿವನಾದ ಒಂದೇ ವರ್ಷದಲ್ಲಿ ರಾಜ್ಯದಲ್ಲಿನ 3,500 ಎಕರೆ ಸರ್ಕಾರಿ ಜಮೀನನ್ನು ಗುರ್ತಿಸಿ ಶಾಲಾ, ಕಾಲೇಜು, ಮೊರಾರ್ಜಿ ಶಾಲೆ, ಸ್ಮಶಾನಗಳಿಗೆ ನೀಡುವ ಕೆಲಸ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲೂ ಕೂಡಾ ಆರಂಭಿಕ ಹಂತದಲ್ಲಿ 120 ಎಕರೆ ಸರ್ಕಾರಿ ಜಮೀನು ಗುರ್ತಿಸಿ ಸಾರ್ವಜಿಕ ಉಪಯೋಗಕ್ಕೆ ನೀಡಲಾಗಿದೆ. ರಾಜ್ಯದ ಎಲ್ಲಾ ಶಾಸಕರು, ಸಂಸದರುಗಳಿಗೂ ಕಂದಾಯ ಇಲಾಖೆಯಿಂದ ಪತ್ರ ಬರೆದು ಸರ್ಕಾರಿ ಜಮೀನುಗಳನ್ನು ಗುರ್ತಿಸಿ ಸಾರ್ವರ್ಜನಿಕ ಉಪಯೋಗಕ್ಕೆ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.
ಸ್ಮಶಾನಕ್ಕೆ ಮೊದಲ ಆದ್ಯತೆ:
ಯಾವುದೇ ವ್ಯಕ್ತಿಯನ್ನು ಗೌರವಯುತವಾಗಿ ಕಳುಹಿಸಿಕೊಡುವುದು ನಮ್ಮ ಧರ್ಮವಾಗಬೇಕು ಎಂಬ ದೃಷ್ಠಿಯಿಂದ ಪ್ರತಿಯೊಂದು ಗ್ರಾಮಗಳಲ್ಲೂ ಸರ್ಕಾರಿ ಜಮೀನನ್ನು ಗುರ್ತಿಸಿ ಸ್ಮಶಾನಕ್ಕೆ ಮೊದಲು ನೀಡುವಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.
13ಕೋಟಿ ರೂ ವೆಚ್ಚದ ಮಿನಿ ವಿಧಾನಸೌಧದ ಉದ್ಘಾಟನೆ ನೆರೇವೇರಿಸಲಾಗಿದ್ದು ಸರ್ಕಾರಿ ಕೆಲಸ ದೇವರ ಕೆಲಸವೆಂದು ಕರ್ತವ್ಯ ನಿರ್ವಹಿಸಬೇಕು. ಸೊಗಸಾದ ಕಟ್ಟಡ, ತಣ್ಣಗೆ ಇದೆ ಎಂದು ಕೈಚೆಲ್ಲಿ ಕೂತು ಕಾಲಾಹರಣ ಮಾಡುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತದೆ. ಶಿರಾ ಭಾಗದ ಜನತೆಗೆ ಈ ಕಟ್ಟಡ ಸದ್ಬಳಕೆಯಾಗಬೇಕು ಎಂದು ಅಶೋಕ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಉತ್ತಮ ಗುಣಪಟ್ಟದಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಚಟುವಟಿಕೆ ನಡೆಯಲಿದ್ದು ಕೆಲವೇ ದಿನಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ನಿರ್ಮಾಣಗೊಂಡು ಎರಡು ವರ್ಷಗಳಾಗಿದ್ದು ಸಾರ್ವಜನಿಕರ ಸೌಲಭ್ಯಕ್ಕಾಗಿ ಬಳಸಿಕೊಳ್ಳಲು ಶೀಘ್ರ ಉದ್ಘಾಟನೆ ನಡೆಸಲಾಗಿದೆಯೇ ಹೊರತು ಬೇರೆ ಇನ್ನಾವ ಉದ್ದೇಶವೂ ಇಲ್ಲ ಎಂದರು.
ಅರಣ್ಯ ಇಲಾಖಾ ಸಚಿವ ಆನಂದ್‍ಸಿಂಗ್, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ರವಿಕುಮಾರ್, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಉಪ ವಿಭಾಗಾಧಿಕಾರಿ ಶ್ರೀಮತಿ ನಂದಿನಿದೇವಿ, ತಹಶೀಲ್ದಾರ್ ಶ್ರೀಮತಿ ನಾಹಿದಾ ಜಮ್ ಜಮ್, ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಪ್ಪ, ನಗರಸಭೆಯ ಅಧಿಕಾರಿ ಪರಮೇಶ್ವರಪ್ಪ, ತಾ.ಪಂ. ಇ.ಓ. ಮೋಹನ್‍ಕುಮಾರ್, ಬಿದಾನಂದ್ ಎಂ.ಗೌಡ, ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
