ಬೆಂಗಳೂರು
ಮಹಾಮಾರಿ ಕೊರೊನಾ ತಂದಿರುವ ಆರ್ಥಿಕ ತೊಂದರೆಯ ನೆಪ ಮಾಡಿ ಸರ್ಕಾರಿ ನೌಕರರ ವೇತನವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಸರ್ಕಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಲಾಕ್‍ಡೌನ್ ಹಿನ್ನಲೆಯಲ್ಲಿ ಸರ್ಕಾರವೇ ನೌಕರರನ್ನು ಕರ್ತವ್ಯಕ್ಕೆ ಬರಬಾರದು ಎಂದು ಸೂಚನೆ ನೀಡಿದ್ದರಿಂದ ನೌಕರರು ಕೆಲಸಕ್ಕೆ ಹಾಜರಾಗಿಲ್ಲದಿರುವುದರಿಂದ ವೇತನ ಕಡಿತ ಮಾಡುವ ಪ್ರಸ್ತಾಪ ಏಕೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡುವ ಚಿಂತನೆಯಿದ್ದರೆ ಕೂಡಲೇ ಸರ್ಕಾರ ಅದನ್ನು ಕೂಡಲೇ ಕೈ ಬಿಡಬೇಕು ಸರ್ಕಾರಿ ನೌಕರರು ಈಗ ಮನೆಯಲ್ಲಿದ್ದಾರೆ. ಅವರ ಬದುಕು ಕೂಡ ಅತಂತ್ರವಾಗಿದೆ. ಒಂದು ವೇಳೆ ವೇತನವನ್ನು ಕಡಿತಗೊಳಿಸಿದಲ್ಲಿ ನೌಕರರ ಬದುಕು ದುಸ್ತರವಾಗುತ್ತದೆ ಎಂದು ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಬಿಬಿಎಂಪಿ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು .ಕಾಮಗಾರಿಗಳಿಗೆ ಹಣ ಹೂಡಬಾರದು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ಈ ಸಚಿವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಬರಗಾಲ ಇನ್ನೇನು ಸಮೀಪಿಸುತ್ತಿದೆ. ಆದರೂ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಪ್ರತಿ ಹಳ್ಳಿಗಳಲ್ಲಿ ಸಂಚರಿಸುವ ಹಾಲಿನ ವ್ಯಾನ್‍ಗಳನ್ನು ಬಳಸಿಕೊಂಡು ರೈತರು ಬೆಳೆದ ಪದಾರ್ಥಗಳನ್ನು ಪಟ್ಟಣಗಳಿಗೆ ತರುವ ಬಗ್ಗೆ ಸರ್ಕಾರ ಗಮನಹರಿಸಬೇಕು. ಇದರಿಂದ ರೈತನಿಗೆ ನ್ಯಾಯ ಸಲ್ಲಿಸದಂತಾಗುತ್ತದೆ. ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಅಡಿಕೆಯನ್ನು ಕ್ಯಾಂಪ್ಕೊ ಸಂಸ್ಥೆ ಖರೀದಿಸುವಂತೆ ನಿರ್ದಶನ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಗ್ರಾಮೀಣ ಜನರಿಗೆ ವೈಯಕ್ತಿಕ ಉದ್ಯೋಗಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಜನ ಬೀದಿಗಿಳಿಯುವ ದಿನಗಳು ದೂರವಿಲ್ಲ. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿಗಳಲ್ಲಿ ನೋಂದಣಿ ಮಾಡಿಸಿ, ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಕೆಪಿಸಿಸಿಯಿಂದಲೇ ಈ ಕೆಲಸ ಮಾಡಿ,ಅದರ ವಿಡೀಯೋ ತೆಗೆದು ಜಾಹೀರಾತು ನೀಡಬೇಕು ಎಂದು ಹೇಳಿದರು.
ಸಂದರ್ಶನವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಚ್ಚರಿಸಿದ್ದಾರೆ.ಆದರೆ ಇದು ಎಚ್ಚರಿಕೆಯಾಗಿಯೇ ಉಳಿಯಬಾರದು. ಸಂದೇಶ ಮತ್ತು ಜಾಹೀರಾತು ಮೂಲಕ ಪ್ರಕಟಿಸಬೇಕು. ಹಾಗೂ ಇಂತಹ ಕೆಲಸ ಮಾಡುತ್ತಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಹೊರತಾಗಿ ಬೇರೆ ಚಿಕಿತ್ಸೆಗಳು ಸಿಗುತ್ತಿಲ್ಲ. ಕೆಲ ವೈದ್ಯರು ಮನೆಯಲ್ಲೇ ಕುಳಿತ್ತಿದ್ದಾರೆ. ಅಂತಹ ವೈದ್ಯರನ್ನು ಸಂಪರ್ಕಿಸಿ ಅವರ ಸೇವೆಯನ್ನು ಬಳಸಿಕೊಳ್ಳಬೇಕು. ಹಾಗೂ ಮುಚ್ಚಿಲ್ಪಟ್ಟಿರುವ ಆಸ್ಪತ್ರೆಗಳನ್ನು ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ತೆರೆಯಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶ ಸಲೀಂ ಅಹ್ಮದ್, ಮಾಜಿ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ