ದಾವಣಗೆರೆ
ಆಯುರ್ವೇದಕ್ಕೆ ಸಂಶೋಧನೆಯ ಅವಶ್ಯಕತೆ ಇಲ್ಲ. ಯುವ ವಿದ್ಯಾರ್ಥಿಗಳು ಸುಶೃತ ಮತ್ತು ಚರಕರ ಗ್ರಂಥಗಳನ್ನು ಅಧ್ಯಯನ ಮಾಡಿ, ಅದರ ಪ್ರಕಾರ ಚಿಕಿತ್ಸಾ ಪದ್ದತಿಯನ್ನು ರೂಢಿಸಿಕೊಂಡರೆ ಆಯುರ್ವೇದವನ್ನು ಉಳಿಸಿ, ಉನ್ನತ ಮಟ್ಟಕ್ಕೆ ಬೆಳೆಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‍ಗೌಡ ಪ್ರತಿಪಾದಿಸಿದರು.
ಇಲ್ಲಿನ ದೇವರಾಜ ಅರಸು ಬಡಾವಣೆಯ ನಗರದ ಲಯನ್ಸ್ ಕ್ಲಬ್‍ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಲಯನ್ಸ್ ಕ್ಲಬ್, ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಸುಶೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಆಯುರ್ವೇದ ಔಷಧಿ ಪ್ರತಿನಿಧಿಗಳು, ವಿತರಕರು ಮತ್ತು ಮಾರಾಟಗಾರರು, ಕೆಜಿಎಎಂಒಎ, ಎಎಫ್‍ಐ & ಎನ್‍ಐಎಂಎ ಜಿಲ್ಲಾ ಘಟಕ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಯೋಗ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 4ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯುರ್ವೇದ ಪದ್ದತಿಯು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೇರಿಕಾ ಸೇರಿದಂತೆ ಒಟ್ಟು 26 ರಾಷ್ಟ್ರಗಳಲ್ಲಿ ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದೆ. ಆಯುರ್ವೇದ ಎಂಬುದು ಪ್ರಾಚೀನ ವೈದ್ಯ ಪದ್ದತಿಯಾಗಿದ್ದು, ಭಾರತೀಯರು ಬಹು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ಮನೆಮದ್ದಿನ ಪದ್ದತಿ ಇದಾಗಿದೆ ಎಂದು ಹೇಳಿದರು.
ಆಯುರ್ವೇದಕ್ಕೆ ಸುಮಾರು ಐದು ಸಾವಿರ ವರ್ಷಗಳ ಹಿನ್ನಲೆ ಇದೆ. ನಮ್ಮ ಹಿರಿಯರು ರೋಗಗಳ ನಿವಾರಣೆಗಾಗಿ ತಮ್ಮಲ್ಲಿ ಲಭ್ಯವಿರುವ ಗಿಡಮೂಲಿಕೆಗಳಿಂದ ಔಷಧಗಳನ್ನು ಸಿದ್ದಪಡಿಸಿ, ಚಿಕಿತ್ಸೆ ನೀಡುತ್ತಿದ್ದರು. ಅಂದಿನಿಂದ ಆಯುರ್ವೇದ ಚಿಕಿತ್ಸೆ ಆರಂಭವಾಗಿದೆ ಎಂದರೆ ತಪ್ಪಾಗಲಾರದು. ನಮ್ಮ ದೇವತಾ ಲೋಕದಲ್ಲಿ ಸುರ-ಅಸುರರ ಅಮೃತ ಮಂಥನ ಸಮಯದಲ್ಲಿ ವಿಷ್ಣುವಿನ ಅವತಾರವೆತ್ತಿ ಜನಿಸಿದವನು ಧನ್ವಂತರಿ. ಈ ಧನ್ವಂತರಿಯು ಮುಂದೆ ವೈದ್ಯ ಪಂಡಿತನಾಗಿ ಆಯುರ್ವೇದದ ಪಿತಾಮಹಾನಾದ ಎಂದು ವಿವರಿಸಿದರು.
ನಮ್ಮ ಯುವ ಜನಾಂಗಕ್ಕೆ ಆಹಾರ ಮತ್ತು ವಿಹಾರ ಪದ್ದತಿಯ ಬಗ್ಗೆ ತಿಳಿಸಲು ಆಯುರ್ವೇದ ದಿನಾಚರಣೆ ಸಹಾಯಕವಾಗಿದ್ದು, ಜಂಕ್‍ಫುಡ್‍ಗಳ ದಾಸರಾಗಿರುವವರಿಗೆ ನಮ್ಮ ಹಳೆಯ ಆಹಾರ ಪದ್ದತಿ ಮತ್ತು ಜೀವನ ಶೈಲಿಯ ಬಗ್ಗೆ ತಿಳಿ ಹೇಳುವ ಅಗತ್ಯವಿದೆ. ನಮ್ಮ ಈ ವರ್ಷದ ಘೋಷ ವಾಕ್ಯದಂತೆ ‘ದೀರ್ಘಾಯುಷ್ಯಕ್ಕಾಗಿ ಆಯುರ್ವೇದ’ ಇದನ್ನು ಹೊಂದಲು ಉತ್ತಮ ಆಹಾರ ಪದ್ದತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಿ.ಎಸ್.ಅಜ್ಜಪ್ಪ, ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಶೈಲಿಯಿಂದ ನಮ್ಮ ಸಂಸ್ಕøತಿ, ಸಂಪ್ರದಾಯಗಳನ್ನು ತೊರೆದು ಬಾಳುವಂತಾಗಿದೆ. ಆಯುರ್ವೇದದ ಕೆಲವೊಂದು ನೀತಿ ಮತ್ತು ನಿಯಮಗಳನ್ನು ಅನುಸರಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಆಯುರ್ವೇದ ಬಳಕೆಯಲ್ಲಿದೆ. ಇತ್ತಿಚಿನ ದಿನಗಳಲ್ಲಿ ಅಲೋಪಥಿ ಬಂದಿದೆ. ಮನುಷ್ಯನ ಹುಟ್ಟಿನಿಂದಲೂ ಆಯುರ್ವೇದ ಇದೆ ಎಂದರು.ತಪೋವನ ಕಾಲೇಜಿನ ಪ್ರಾಂಶುಪಾಲರಾದ ಸತ್ಯಾನಂದ ಮಾತನಾಡಿ, ಆಯುರ್ವೇದ ವ್ಯವಸ್ಥೆ ಮತ್ತು ಇತರೆ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಆಯುರ್ವೇದವನ್ನು ಉತ್ತಮವಾಗಿ ತಿಳಿದು ಕೆಲಸ ಮಾಡಬೇಕು ಎಂದರು.
ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜಿನ ಚೇರ್ಮನ್ ಎಂ.ಎನ್.ಹಿರೇಮಠ್ ಮಾತನಾಡಿ, ಹಿಂದೆ ದಾವಣಗೆರೆಯಲ್ಲಿ ಬೆರಳಿಣಿಕೆಯಷ್ಟು ಆಯುರ್ವೇದ ವೈದ್ಯರುಗಳಿದ್ದರು. ಆದರೆ ಇಂದು 1500 ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ವೈದ್ಯರು ಕರ್ತವ್ಯ ನಿರ್ವಹಿಸುತ್ತಿರುವುದು ಖುಷಿಯ ವಿಷಯ. ವಿದ್ಯಾರ್ಥಿಗಳು ಆಯುರ್ವೇದದ ಪಂಚಕರ್ಮ ಮತ್ತು ಚಾರಸೂತ್ರದ ಬಗ್ಗೆ ಹೆಚ್ಚಿನ ಜ್ಞಾನ ಹೊಂದುವುದರಿಂದ ಉತ್ತಮವಾಗಿ ಕೆಲಸ ಮಾಡಬಹುದೆಂದು ತಿಳಿಸಿದರು.
ಲಯನ್ಸ್ ಕ್ಲಬ್‍ನ ಪ್ರಾಂತೀಯ ಅಧ್ಯಕ್ಷ ಬೆಳ್ಳೋಡಿ ಶಿವಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿವೃತ್ತ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶಿ, ಲಯನ್ಸ್ ಕ್ಲಬ್‍ನ ಅಧ್ಯಕ್ಷ ಲಯನ್ ವೈ.ವಿ ಸತೀಶ್ ಮತ್ತು ಲಯನ್ಸ್ ಕ್ಲಬ್‍ನ ಸದಸ್ಯರು, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಉತ್ತಂಗಿ, ನಿ.ಮ ಸಂಸ್ಥೆಯ ಅಧ್ಯಕ್ಷ ಡಾ.ಉಮೇಶ್, ತಪೋವನ ಕಾಲೇಜು ಮತ್ತು ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯಾಧಿಕಾರಿ ಡಾ.ಸುಚಿತ್ರ.ಎಸ್.ಎಸ್ ಅವರು ಅಪೌಷ್ಠಿಕತೆ-ಮಹಿಳೆ ಮತ್ತು ಮಕ್ಕಳು: ಹೆಣ್ಣು ಮಕ್ಕಳ ಆರೋಗ್ಯ ಕುಟುಂಬದ ಸೌಭಾಗ್ಯ ಕುರಿತು, ಆಯುರ್ವೇದ ವೈದ್ಯಾಧಿಕಾರಿ ಡಾ.ಸಿದ್ದೇಶ್.ಈ.ಬಿಸನಳ್ಳಿ ಅವರು ಪರಿಸರ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರ: ಗಿಡಮೂಲಿಕೆ ಬೆಳಿಸಿ ಪರಿಸರ ಉಳಿಸಿ ಎಂಬ ವಿಷಯ ಕುರಿತು, ಆಯುರ್ವೇದ ವೈದ್ಯಾಧಿಕಾರಿ ಡಾ.ಸಯ್ಯದ್ ಶಂಷುದ್ದೀನ್ ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ತೊಂದರೆಗಳಿಗೆ ಆಯುರ್ವೇದ ಪರಿಹಾರ: ಬದಲಾಯಿಸಿ ಜೀವನ ಶೈಲಿ, ಉತ್ತಮ ಆರೋಗ್ಯ ನಿಮ್ಮ ಕೈಲಿ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ