ಕಠೋರ ನಿಯಮ ಪಾಲನೆ ಮಾಡುವ ತೇರಾಪಂಥ್ ನಂತಹ ಮತ್ತೊಂದು ಧರ್ಮ ಜಗತ್ತಿನಲ್ಲೆಲ್ಲೂ ಇಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು

      ಅಹಿಂಸಾ ಯಾತ್ರೆಯ ಪ್ರವರ್ತಕ ತೇರಾಪಂತ್ ನ ಆಚಾರ್ಯ ಮಹಾಶ್ರವಣ್ಜೀ ಸ್ವಾಮೀಜಿ ಅವರು ಅತ್ಯಂತ ಇಷ್ಟೊಂದು ಕಠೋರವಾದ ನಿಯಮ ಪಾಲನೆ ಮಾಡಿಕೊಂಡು, ಶಾಂತಿ ಸ್ಥಾಪನೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

      ನಗರದ ಅರಮನೆ ಮೈದಾನದಲ್ಲಿ ಆಚಾರ್ಯ ಮಹಾಶ್ರವಣ್ಜೀ ಸ್ವಾಮೀಜಿ ಅವರಿಗೆ ಬೆಂಗಳೂರು ನಾಗರಿಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಅಹಿಂಸಾ ಮಾರ್ಗವನ್ನು ಪರಿಪಾಲಿಸುತ್ತಿರುವ ಜೈನ ಸಮಾಜದ ಪ್ರತಿ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸಲಿದೆ. ಇಂತಹ ಕಠೋರ ಆಚರಣೆ ಮೂಲಕ ವಿಶ್ವ ಶಾಂತಿ ಬಯಸುವ ಮತ್ತೊಂದು ಧರ್ಮವನ್ನು ತಾವು ಕಂಡಿಲ್ಲ. ಮನುಕುಲಕ್ಕೆ ಒಳಿತು ಬಯಸುವ ತೇರಾಪಂತ್ ನ ಧರ್ಮಗುರು ಮಹಾಶ್ರವಣ್ಜೀ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ವಿಶ್ವಕ್ಕೆ ಶಾಂತಿ ದೊರೆಯುತ್ತದೆ ಎಂದರು. 

      ಅಹಿಂಸಾ ಮಾರ್ಗದಿಂದ ಎಲ್ಲವನ್ನು ಗೆಲ್ಲಬಹುದು. ಆದರೆ ಇದನ್ನು ಮರೆತಾಗ ಇಡೀ ದೇಶದಲ್ಲೇ ಅಲ್ಲೋಲ-ಕಲ್ಲೋಲ ವಾತಾವರಣ ಉಂಟಾಗಿ ಅರಾಜಕತೆ ಸೃಷ್ಟಿಯಾಗಲಿದೆ. ಶಾಂತಿ ಪಾಲನೆ ಜತೆಗೆ ಮಾರ್ಗದರ್ಶನ ಕೊಟ್ಟು, ತನ್ನದೇ ಆದ ನೀತಿ, ಸಂಸ್ಕೃತಿ ಉಳಿಸಿಕೊಂಡು ಬಂದಿರುವುದು ಈ ಧರ್ಮದ ವಿಶೇಷವಾಗಿದೆ. ಇಂತಹ ವಿನೂತನ ಧರ್ಮ ಇಡೀ ಪ್ರಪಂಚದಲ್ಲೇ ಬೇರೆಲ್ಲೂ ಇಲ್ಲ ಎಂದರು. 

      ನಮ್ಮ ಸಾಧು, ಸಂತರು, ಮುನಿಗಳು ನಡೆದುಕೊಂಡು ಬಂದ ದಾರಿ ನಮಗೆಲ್ಲರಿಗೂ ದಾರಿ ದೀಪವಗಿದೆ. ಶಾಂತಿ ನೆಲಸಿ, ಮಾರ್ಗದರ್ಶನ ಕೊಟ್ಟು, ತನ್ನದೇ ಆದ ನೀತಿ, ಸಂಸ್ಕೃತಿ ಉಳಿಸಿಕೊಂಡು ಬಂದಿರುವುದಕ್ಕೆ ಮಹಾಶ್ರವಣ್ಜೀ ಸ್ವಾಮೀಜಿ ಅವರೇ ನಿದರ್ಶನವಾಗಿದ್ದಾರೆ. ಅವರು ನಡೆದಾಡುವ ದೇವರಿದ್ದಂತೆ ಎಂದರು. 

      ಪುರುಂದರ ದಾಸರು ಹೇಳಿದಂತೆ ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವದು. ಪದುಮನಾಭನ ಪಾದದಲ್ಲಿ ಪರಮ ಸುಖವಯ್ಯ ಎನ್ನುವಂತೆ ತೇರಾಪಂತ್ ನ ಧರ್ಮಗುರುಗಳು ಪುರಂದರ ವಾಣಿಯಂತೆ ನಡೆದುಕೊಂಡು ಬರುತ್ತಿದ್ದಾರೆ. ಶಾಂತಿ ಕಾಪಾಡಿ, ಧರ್ಮ ಉಳಿಸುವ ಪ್ರಯತ್ನ ನಡೆಸಿದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ಯಾವುದಾದರೂ ದೇವನೊಬ್ಬನೇ, ಧರ್ಮ ಹಲವಾದರೂ ನಿಷ್ಠೆ ಒಂದೇ. ಅದಕ್ಕಾಗಿಯೇ ದೇವನೊಬ್ಬ ನಾಮ ಹಲವು ಎನ್ನುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಬಣ್ಣಿಸಿದರು. 

     ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾಶ್ರವಣ್ಜೀ ಅವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದ ನಂತರ ಮಾತನಾಡಿ,  ಅಹಿಂಸಾ ಯಾತ್ರೆಯ ಪ್ರವರ್ತಕರಾಗಿರುವ ಶರ್ಮಾಂಜಿ ಅವರು ೨೦೧೪ ರ ನವೆಂಬರ್ ೯ ರಂದು ರಂದು ದೆಹಲಿಯ ಕೆಂಪುಕೋಟೆಯಲ್ಲಿ ತಮ್ಮ ಯಾತ್ರೆ ಆರಂಭಿಸಿ ನೂರಾರು ಶಿಷ್ಯರೊಂದಿಗೆ ಕಾಲ್ನಡಿಗೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದರು. 

      ತಮ್ಮ ಅಹಿಂಸಾ ಯಾತ್ರೆಯಲ್ಲಿ ಸಾರ್ವತ್ರಿಕ ಸದ್ಭಾವನೆ, ಸಮರಸತೆ, ನೈತಿಕತೆ, ವ್ಯಸನಮುಕ್ತಿ ಅಂಶಗಳನ್ನು ಪ್ರಚಾರ ಮಾಡುತ್ತಾ, ಇಲ್ಲಿಯವರೆಗೆ ೪೮,೦೦೦ ಸಾವಿರ ಮೈಲಿಗಳಷ್ಟು ಕ್ರಮಿಸಿ ರಾಜ್ಯಕ್ಕೆ ಪಾದಾರ್ಪಣೆ ಮಾಡಿರುವುದು ಶುಭದ ಸಂಕೇತ. ಈ ಪುಣ್ಯ ಎಲ್ಲರಿಗೂ ದೊರಕುವಂತಾಗಲಿ ಎಂದು ಹಾರೈಸಿದರು. 

       ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಮತ್ತು ತೇರಾಪಂತ್ ನ ಧರ್ಮಗುರುಗಳ ನಡುವೆ ಅವಿನಾಭಾವ ಬಾಂಧವ್ಯವಿದೆ. ಪ್ರತಿ ಚಾತುರ್ಮಾಸ ಸಂದರ್ಭದಲ್ಲೂ ಆಚಾರ್ಯರನ್ನು ಭೇಟಿ ಮಾಡಿ ಗೌರವ ಸಲ್ಲಿಸುವ ಪರಿಪಾಠವನ್ನು ಅನುಸರಿಸಿಕೊಂಡು ಬಂದಿದೆ. ಇದೀಗ ಮಹಾಶರ್ಮಾಂಜಿ ಅವರು ನಗರಕ್ಕೆ ಆಗಮಿಸಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದರು. 

      ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ  ಜಗತ್ತಿನ ಪ್ರತಿಯೊಬ್ಬರು ಅಹಿಂಸಾ ಮಾರ್ಗ ಅನುಸರಿಸಿದರೆ ಅಶಾಂತಿ ನಿವಾರಣೆಯಾಗಿ ಮಾನಸಿಕ ನೆಮ್ಮದಿ ದೊರೆಯಲಿದೆ. ಮಹಾತ್ಮ ಗಾಂಧೀಜಿ ನೇಲ್ಸನ್ ಮಂಡೇಲಾ ಅವರಂತಹ ಮಹಾನ್ ವ್ಯಕ್ತಿಗಳು ಅಹಿಂಸಾ ಮಾರ್ಗದಿಂದಲೇ ಎಲ್ಲವನ್ನು ಗೆಲ್ಲಬಹುದು ಎಂಬುದನ್ನು ಜಗತ್ತಿಗೆ ಸಾರಿದರು. ಈ ಸಾಧಕರ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದರು.

      ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ತಮ್ಮ ತಾತ ಜಯಚಾಮರಾಜೇಂದ್ರ ಒಡೆಯರವರ ಕಾಲದಲ್ಲಿ ತುಳಸಿ ಆಚಾರ್ಯ ಅವರು ರಾಜ್ಯಕ್ಕೆ ಬಂದಿದ್ದಾಗ ಸ್ವಾಗತ ನೀಡಿದ್ದರು. ಈಗ ಆಚಾರ್ಯ ಮಹಾಶ್ರಮಾಂಜಿ ಅವರು ರಾಜ್ಯಕ್ಕೆ ಬಂದಿರುವಾಗ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇವೆ. ಮೈಸೂರು ಮಹಾಸಂಸ್ಥಾನಕ್ಕೂ, ಜೈನ ಧರ್ಮಕ್ಕೂ ನಿಕಟಸಂಪರ್ಕವಿದೆ. ಅದು ಹಾಗೆಯೇ ಮುಂದುವರೆಯಲಿದೆ ಎಂದರು. 

    ವಸತಿ ಸಚಿವ ಎಂ.ಟಿ.ಬಿ. ನಾಗರಾಜು ಮಾತನಾಡಿ, ಧರ್ಮ ಹಾದಿಯಲ್ಲಿ ಜೈನ ಸಮಾಜದವರು ನಡೆದುಕೊಂಡು ಬಂದಿದ್ದಾರೆ. ಸರಳ ಜೀವನ ನಡೆಸಿ ಭಕ್ತಿಭಾವಗಳನ್ನು ಅಳವಡಿಸಿಕೊಂಡು ಬದುಕುತ್ತಿರುವುದು ಎಲ್ಲ ಧರ್ಮಗಳಿಗೂ ಮಾದರಿ ಎಂದು  ಹೇಳಿದರು.ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿಭಾಯಿ ಮಾತನಾಡಿ, ಅಹಿಂಸೆಗೆ ಆದ್ಯತೆ ನೀಡಿರುವ ಜೈನ ಸಮುದಾಯದ ಕುಟುಂಬದ ಹೆಣ್ಣು ಮಕ್ಕಳಿಂದಲೂ ಮಹಿಳಾ ಆಯೋಗಕ್ಕೆ ದೂರು ಬರುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು. ಆಚಾರ್ಯ ಮಹಾಶ್ರವಣ್ ಚತುರ್ಥ ಮಾಸ ಪ್ರವಾಸ್ ವ್ಯವಸ್ಥಾಪನಾ  ಸಮಿತಿಯ ಅಧ್ಯಕ್ಷ ಮೂಲಚಂದ್ ನರ್ಹ್, ಜಂಟಿ ಕಾರ್ಯಾದರ್ಶಿ ದೀಪಕ್ ಚಂದ್ ನರ್ಹ್ ಅವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap