ತುಮಕೂರು
ಲಾಕ್‍ಡೌನ್ ಹಿನ್ನೆಲೆಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಯಾವುದೇ ತೊಂದರೆ ಇಲ್ಲ. ಮಾರುಕಟ್ಟೆ ದಿನವಿಡೀ ತೆರೆದಿರುತ್ತದೆ. ಆದರೆ, ಕೊರೊನಾ ಸೋಂಕು ಹರಡುವುದನ್ನು ತಡೆಯಲು ಇಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ವ್ಯಾಪಾರಿಗಳಾಗಲಿ, ತರಕಾರಿ ತರುವ ರೈತರಾಗಲಿ, ಖರೀದಿಗೆ ಬರುವವರಾಗಲಿ ಮಾಸ್ಕ್ ಧರಿಸಿಯೇ ಮಾರುಕಟ್ಟೆ ಪ್ರವೇಶಿಸಬೇಕು. ಒಳಗೆ ಅಂಗಡಿಗಳ ಬಳಿ ನೂಕುನುಗ್ಗಲಾಗದಂತೆ, ಸಾಮಾಜಿಕ ಅಂತರ ಕಾಪಾಡಬೇಕು. ಇದನ್ನೆಲ್ಲಾ ನಿಯಂತ್ರಿಸಲು ಪೊಲೀಸರು ಹಾಗೂ ಎಪಿಎಂಸಿ ಅಧಿಕಾರಿಗಳು ಕಾವಲಿರುತ್ತಾರೆ.
ಕೊರೊನಾ ಭೀತಿ ಶುರುವಾದ ಮೇಲೆ ಮಾರುಕಟ್ಟೆಯ ಚಟುವಟಿಕೆ ಬೆಳಗಿನ ಜಾವ 4 ಗಂಟೆಯಿಂದಲೇ ಆರಂಭವಾಗುತ್ತದೆ. ಆಗಿನಿಂದ ರೈತರು ತಾವು ಬೆಳೆದ ತರಕಾರಿಯನ್ನು ವಾಹನಗಳಲ್ಲಿ ಮಾರುಕಟ್ಟೆಗೆ ತರುವುದು ಶುರುವಾಗುತ್ತದೆ. ಆಗಾಗಲೇ ಪೊಲೀಸರು ಹಾಗೂ ಅಧಿಕಾರಿಗಳು ಹಾಜರಿರುತ್ತಾರೆ. ತರಕಾರಿ ತರುವ ರೈತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಅಧಿಕಾರಿಗಳು ಎಚ್ಚರ ವಹಿಸುತ್ತಾರೆ.
ಬೆಳಿಗ್ಗೆ 5ಗಂಟೆ ಸುಮಾರಿನಿಂದ ತರಕಾರಿ ಖರೀದಿಗೆ ಚಿಲ್ಲರೆ ವ್ಯಾಪಾರಿಗಳು, ಮನೆ ಬಳಕೆಗೆ ಕೊಳ್ಳುವವರು ಬರತೊಡಗುತ್ತಾರೆ. ಮಾರುಕಟ್ಟೆ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಜನರನ್ನು ನಿಯಂತ್ರಿಸುತ್ತಾರೆ. ಬೆಳಿಗ್ಗೆಯೇ ತರಕಾರಿ ಕೊಳ್ಳುವವರ ದೊಡ್ಡ ಸಾಲು ಮಾರುಕಟ್ಟೆ ಎದುರು ಸೇರುತ್ತದೆ. ಪೊಲೀಸರು ಜನಜಂಗುಳಿಯಾಗದಂತೆ ಒಬ್ಬರ ನಂತರ ಒಬ್ಬರಂತೆ, ಮಾಸ್ಕ್ ಧರಿಸಿದವರನ್ನು ಒಳಗೆ ಬಿಡುತ್ತಾರೆ. ಮಾಸ್ಕ್ ಇಲ್ಲದವರ ಪ್ರವೇಶ ತಡೆಯುತ್ತಾರೆ.
ಮಾರುಕಟ್ಟೆಯ ಒಳಗೂ ಪೊಲೀಸರ ತಂಡವಿದ್ದು ಜನ ಮುನ್ನೆಚ್ಚರಿಕೆಗಳ ಪಾಲನೆ ಬಗ್ಗೆ ಗಮನಹರಿಸುತ್ತಾರೆ. ಅಂಗಡಿಗಳ ಮುಂದೆ ಅಂತರ ಕಾಪಾಡುವ ಚೌಕಾಕಾರ ಬರೆದಿದ್ದು, ಅದರಲ್ಲಿ ನಿಂತು ಜನ ತರಕಾರಿ ಖರೀದಿಸಬೇಕು, ನಿಯಮ ಮೀರಿದವರನ್ನು ಪೊಲೀಸರು ಹಾಗೂ ವ್ಯಾಪಾರಿಗಳು ಎಚ್ಚರಿಸುತ್ತಾರೆ.
ಮಾರುಕಟ್ಟೆಯಲ್ಲಿ ಈಗ ಮೊದಲಿದ್ದಂತೆ ವ್ಯಾಪಾರಿಗಳು ಅಂಗಡಿ ಎದುರಿನ ರಸ್ತೆಯಲ್ಲಿ ತರಕಾರಿ ಹರಡಿಕೊಂಡು ಮಾರುವುದನ್ನು ಅಧಿಕಾರಿಗಳು ತಡೆದಿದ್ದಾರೆ. ಅಂಗಡಿಗಳ ಮುಂದೆ ಕಬ್ಬಿಣದ ಗ್ರಿಲ್‍ಗಳ ತಡೆ ನಿಲ್ಲಿಸಿ, ಎರಡು ಅಂಗಡಿಗೊಂದರಂತೆ ಪ್ರವೇಶಕ್ಕೆ ಜಾಗ ಮಾಡಿದ್ದಾರೆ. ಹೀಗಾಗಿ ಅಂಗಡಿ ಎದುರಿನ ರಸ್ತೆ ಈಗ ವಿಶಾಲವಾಗಿದೆ. ಕಿರಿಕಿರಿ ಇಲ್ಲದೆ ಜನ, ವಾಹನ ಓಡಾಡಬಹುದಾಗಿದೆ.
ಕೊರೊನಾ ಪ್ರಭಾವದಿಂದ ಮಾರುಕಟ್ಟೆಯಲ್ಲಿ ಈಗ ಶಿಸ್ತುಬದ್ಧ ಚಟುವಟಿಕೆ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಜನ ಸಂದಣಿ ಹೆಚ್ಚುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಎಸ್ಪಿ ಡಾ. ಕೋನಂ ವಂಶಿಕೃಷ್ಣ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿ ಮಾರುಕಟ್ಟೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿ ಇಂತಹ ಕ್ರಮಕ್ಕೆ ಸಲಹೆ ನೀಡಿದ್ದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ವ್ಯಾಪಾರಿಗಳು ಹಾಗೂ ಅಲ್ಲಿನ ಅಂಗಡಿಗಳ ಕೆಲಸಗಾರರನ್ನು ಪೊಲೀಸರು ತಡೆಯುತ್ತಾರೆ. ನಮಗೆಲ್ಲಾ ಪಾಸ್ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಪಾಸ್ ಕೊಡದಿದ್ದರೆ ವ್ಯಾಪಾರ ವಹಿವಾಟು ಬಂದ್ ಮಾಡುವುದಾಗಿಯೂ ಎಚ್ಚರಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆಯ ಒಂದು ಅಂಗಡಿಗೆ ಇಬ್ಬರಂತೆ ಪಾಸ್ ಕೊಟ್ಟಿದ್ದಾರೆ. ಆದರೆ, ಒಂದೊಂದು ಅಂಗಡಿಯಲ್ಲಿ ಐದಾರು ಜನ ಕೆಲಸಗಾರರಿರುತ್ತಾರೆ.
ಅವರು ನಗರದ ವಿವಿಧೆಡೆಗಳಿಂದ, ಅಕ್ಕಪಕ್ಕದ ಊರುಗಳಿಂದ ಬೆಳಗಿನ ಜಾವ ಮಾರುಕಟ್ಟೆಗೆ ಬರಬೇಕಾಗುತ್ತದೆ. ರಸ್ತೆಗಳಲ್ಲಿ ಕಾವಲಿರುವ ಇವರನ್ನು ಪೊಲೀಸರು ತಡೆಯುತ್ತಾರೆ, ಎಲ್ಲಾ ಕೆಲಸಗಾರರಿಗೂ ಪಾಸ್ ಕೊಡಬೇಕು ಎಂದು ಅಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುವ ನಾಗವಲ್ಲಿ ಬಳಿಯ ದುಮ್ಮನಕುಪ್ಪೆ ನಿರಂಜನ್ ಹೇಳಿದರು.
ಕೊರೊನಾ ಬಂದ ಮೇಲೆ ಮಾರುಕಟ್ಟೆಯಲ್ಲಿ ವ್ಯಾಪಾರ ಡಲ್ ಆಗಿದೆ, ಖರೀದಿಗೆ ಬರುತ್ತಿದ್ದ ಜನ ಈಗ ಕಮ್ಮಿಯಾಗಿದ್ದಾರೆ. ಕೊರೊನಾ ಭಯದಿಂದ ಮನೆಗೆ ಸಮೀಪದ ಅಂಗಡಿಗಳಲ್ಲೇ ತರಕಾರಿ ಕೊಳ್ಳಬಹುದು. ಜೊತೆಗೆ ಹಾಪ್‍ಕಾಮ್ಸ್ ಹಾಗೂ ಖಾಸಗಿಯವರು ಬಡಾವಣೆವಾರು ತರಕಾರಿ ವ್ಯಾಪಾರ ಆರಂಭಿಸಿರುವುದರಿಂದ ಗ್ರಾಹಕರ ಸಂಖ್ಯೆ ಮೊದಲಿನಷ್ಟಿಲ್ಲ ಎಂದು ಅಲ್ಲಿನ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಲಾಕ್‍ಡೌನ್‍ಗಿಂತಾ ಮೊದಲು ಇದ್ದ ತರಕಾರಿ ಬೆಲೆ ಈಗ ದುಬಾರಿಯಾಗಿದೆ. ವಾಹನಗಳ ಕೊರತೆಯಿಂದ ದೂರದ ಊರುಗಳ ರೈತರು ಮಾರುಕಟ್ಟೆಗೆ ತರಕಾರಿ ತರುತ್ತಿಲ್ಲ. ಹೆಬ್ಬೂರು, ನಾಗವಲ್ಲಿ, ತ್ಯಾಮಗೊಂಡ್ಲು, ದಾಬಸ್‍ಪೇಟೆ, ಬಿಲ್ಲಿನಕೋಟೆ ಕಡೆಗಳ ರೈತರು ತರಕಾರಿ ತರುತ್ತಾರೆ. ತಿಪಟೂರು ಭಾಗದ ರೈತರ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತದೆ. ಅಲ್ಲದೆ ನಗರ ಸಮೀಪದ ಜಗನ್ನಾಥಪುರ, ಪುಟ್ಟಸ್ವಾಮಯ್ಯನ ಪಾಳ್ಯದ ರೈತರು ಸೊಪ್ಪು ತರಕಾರಿ ತರುತ್ತಾರೆ ಎಂದರು.ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಯಾವುದೇ ಕಿರಿಕಿರಿಯಿಲ್ಲ, ನಿರ್ಬಂಧವಿಲ್ಲ. ಆದರೆ, ಮಾಸ್ಕ್ ಧರಿಸಿ ಬಂದು, ಸಾಮಾಜಿಕ ಅಂತರ ಕಾಪಾಡಿಕೊಂಡು ನಿರಾಳವಾಗಿ ತರಕಾರಿ ಖರೀದಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ