ಯುಗಾದಿ ನಿರಾಂತಕ ಆಚರಣೆ  : ವರ್ಷದೊಡಕಿನ ಮಾಂಸ-ಮದ್ಯಕ್ಕೂ ತೊಂದರೆ  ಆಗಿಲ್ಲ..!

ಚಿಕ್ಕನಾಯಕನಹಳ್ಳಿ
    ಯುಗಾದಿ ನಂತರದ ಮಾರನೆ ದಿನ ವರ್ಷದೊಡಕಿನ ಪ್ರಯುಕ್ತ ಗುರುವಾರ ಬೆಳಗ್ಗೆ ಪಟ್ಟಣದಲ್ಲಿ ಅಗತ್ಯ ಸಾಮಗ್ರಿಗಳಿಗಾಗಿ ಜನರ ಓಡಾಟಕ್ಕೆ ಕೆಲ ಕಾಲ ವಿನಾಯ್ತಿ ನೀಡಲಾಗಿತ್ತು. ಉಳಿದಂತೆ ದಿನವಿಡೀ ಪೊಲೀಸ್ ಗಸ್ತು ನಡೆಯುತ್ತಲೆ ಇತ್ತು. ಮಾತು ಕೇಳದ ಹುಡುಗರಿಗೆ ಪೊಲೀಸರು ನೆಹರೂ  ವೃತ್ತದಲ್ಲಿ ಬಸ್ಕಿ ಹೊಡೆಸಿ  ಎಚ್ಚರಿಕೆ ನೀಡಿದರು.
    ಪಟ್ಟಣದಲ್ಲಿ ಬಹುತೇಕ ಕರ್ಪ್ಯೂವನ್ನು ಜನರೆ ಬೆಂಬಲಿಸಿ, ಸ್ವಯಂ ಪ್ರೇರಣೆಯಿಂದ ಮನೆಯಲ್ಲೇ ಉಳಿದು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿದರು. ಯುಗಾದಿ ಹಬ್ಬದ ವಿಶೇಷವಾದ ತೈಲಮಜ್ಜನದ ಸಲುವಾಗಿ ಹುಡುಗರು ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಬೀದಿಯಲ್ಲಿ ಓಡಾಡುವುದು, ಆಟ ಆಡುವುದನ್ನು ಪ್ರತಿ ವರ್ಷದಂತೆ ನಡೆಸಲು ಕೆಲವರು ಮುಂದಾದರು.
   
    ಯಾವಾಗ ಪೊಲೀಸರು ಕಂಡ ಕಂಡಲ್ಲಿ ಲಾಠಿ ಏಟಿನ ಜೊತೆಗೆ, ಹಿಡಿದು ಬಸ್ಕಿ ಹೊಡೆಸಲು ಮುಂದಾದರೊ  ಆಗ ಉಳಿದವರು ಆಚೆ ಇಣುಕಿಯೂ ನೋಡಲಿಲ್ಲ. ಇನ್ನು ಜನ ಸಾಮಾನ್ಯರಿಗೆ ಹಬ್ಬಕ್ಕೆ ಅವಶ್ಯಕವಾದ ಸಾಮಗ್ರಿಗಳನ್ನು ಕೊಳ್ಳಲು ಅನುವು ಮಾಡಿಕೊಡಲಾಗಿತ್ತು.  ದಿನಸಿ ಅಂಗಡಿ, ತರಕಾರಿ, ಹಣ್ಣು, ಹೂವಿನ ಅಂಗಡಿ, ಮಾಂಸದಂಗಡಿ ಬಳಿ ಒಂದು ಮೀಟರ್ ಅಂತರಕ್ಕೊಂದರಂತೆ ಬಣ್ಣದಲ್ಲಿ ವೃತ್ತಾಕಾರವನ್ನು ಪುರಸಭೆಯವರೆ ರಚಿಸಿ, ಆ ವೃತ್ತದಲ್ಲಿ ನಿಂತು, ಅಂತರ ಕಾಯ್ದುಕೊಂಡು  ವ್ಯಾಪಾರ ವಹಿವಾಟು ನಡೆಸಲು ಜನತೆಗೆ ಅವಕಾಶ ಮಾಡಿಕೊಟ್ಟರು.
 ಮಕ್ಕಳೆಲ್ಲಾ ಮನೆ ಒಳಗೆ, ಕೆಲವು ಯುವಕರು ತೋಟದ ಸಾಲುಗಳಲ್ಲಿ ಆಟ: 
 
    ಹಬ್ಬದೂಟದ ನಂತರ ಮನೋಲ್ಲಾಸಕ್ಕಾಗಿ ಕೆಲವರು ಒಳಾಂಗಣ ಆಟಗಳಾದ ಕೇರಂ, ಚೆಸ್, ಅಳುಗುಣಿ ಮನೆ, ಆಟವನ್ನಾಡಿದರೆ, ಇನ್ನು ಕೆಲವರು ಮೊಬೈಲ್, ಟೀವಿಗಳಲ್ಲಿ ಮುಳುಗಿದರು. ಇನ್ನು ಪಡ್ಡೆ ಹುಡುಗರ ಗುಂಪು ಯುಗಾದಿಯಲ್ಲಿ ಸಾಮಾನ್ಯವಾಗಿ ಜೂಜಾಡುವುದನ್ನು ರೂಢಿಸಿಕೊಂಡಿರುವವರು ತೋಟದ ಸಾಲುಗಳಲ್ಲಿ ತಮ್ಮ ಕ್ರೀಡಾ ಪ್ರೇಮವನ್ನು ಮೆರೆದರು.
ಮಾಂಸಕ್ಕಾಗಿ ಪರದಾಟ: 
 
     ಗುರುವಾರ ವರ್ಷದೊಡಕಿನ ಅಂಗವಾಗಿ ಮಾಂಸ ಪ್ರಿಯರು ಚೀಟಿಗಳನ್ನು ಮಾಡಿಕೊಂಡು ಕುರಿ, ಟಗರು, ಹೋತ, ಮೇಕೆಗಳ ಮಾಂಸವನ್ನು ಪಾಲು ಹಾಕಿಕೊಂಡರು. ಉಳಿದವರು ಮಾಂಸದಂಗಡಿಯಲ್ಲಿ ಮಾಮೂಲಿಗಿಂತ ತುಸು ಹೆಚ್ಚಿನ ದುಡ್ಡು ಕೊಟ್ಟು ಕೊಂಡು ತಂದರು. ಕೆಲವರು ಕೋಳಿಗೆ ಮುಗಿ ಬಿದ್ದರು. ಆದರೆ ಯಾವಾಗ ಪುರಸಭೆಯವರು ಒಂದೆರಡು ಅಂಗಡಿಗಳಲ್ಲಿನ ಕೋಳಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತೊ ಆಗ, ಉಳಿದವರು ಎಚ್ಚರಗೊಂಡು ಕೋಳಿ ಮಾರುವುದನ್ನು ನಿಲ್ಲಿಸಿದರು. ಮದ್ಯದಂಗಡಿಗಳಲ್ಲಿ ಮಾಮೂಲಿನಂತೆ ಕದ್ದುಮುಚ್ಚಿ ನಡೆಸುವ ವ್ಯವಹಾರ ನಡೆಯಿತು.
ತಾಲೂಕು ಮಟ್ಟದ ಅಧಿಕಾರಿಗಳ ಸಭೆ: 
   
    ಗುರುವಾರ ಬೆಳಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ತಾಲ್ಲೂಕು ಕಚೇರಿಯಲ್ಲಿ ಕರೆದು, ಕರೋನಾ ತಡೆಗಟ್ಟಲು ತಾಲ್ಲೂಕಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು. ದಿನ ನಿತ್ಯದ ಬದುಕಿಗೆ ಅವಶ್ಯವಿರುವ ಸೇವೆಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಉಳಿದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಮುಂದುವರೆಸುವಂತೆ ಸೂಚಿಸಿದರು. ನಂತರ ಮಧ್ಯಾಹ್ನದ ಮೇಲೆ ಶಿರಾ ತಾಲ್ಲೂಕಿನ ಅಧಿಕಾರಿಗಳ ಸಭೆಗೆ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link