ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ತಪ್ಪೇನಲ್ಲ : ದಿನೇಶ್ ಗುಂಡೂರಾವ್

ಬೆಂಗಳೂರು

       ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಸುಮಲತಾ ಅವರೊಂದಿಗೆ ಪಕ್ಷದ ಹಿರಿಯ ನಾಯಕರಾದ ಚಲುವರಾಯಸ್ವಾಮಿ,ನರೇಂದ್ರಸ್ವಾಮಿ ಅವರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ತಪ್ಪೇನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

      ಸುಮಲತಾ ಅವರು ಸ್ಪರ್ಧಿಸಲು ಕುಮ್ಮಕ್ಕು ನೀಡಿ,ತೆರೆಯ ಹಿಂದಿನಿಂದ ಬೆಂಬಲ ನೀಡಿದ ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರು ಮೊನ್ನೆ ಭೋಜನಕೂಟವೊಂದರಲ್ಲಿ ಸುಮಲತಾ ಅವರೊಂದಿಗೆ ಪಾಲ್ಗೊಂಡಿದ್ದ ವಿಡಿಯೋ ಭಾರೀ ಸಂಚಲನವನ್ನುಂಟು ಮಾಡಿತ್ತು.

        ಇದರ ಬೆನ್ನಲ್ಲೇ ಮೈತ್ರಿಕೂಟದ ಅಂಗಪಕ್ಷವಾದ ಜೆಡಿಎಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ವಿರೋಧಿಗಳ ಜತೆ ಕುಳಿತು ಊಟ ಮಾಡುವುದನ್ನು ನೋಡಿದರೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲನೆಯಾಗಿಲ್ಲ ಎಂದು ಆರೋಪಿಸಿದ್ದರು.

        ಇದರ ಬೆನ್ನಲ್ಲೇ ಸುಮಲತಾ ಅವರ ಜತೆ ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಊಟ ಮಾಡುತ್ತಿದ್ದ ವಿಷಯ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ರವಾನೆಯಾಗಿತ್ತು.ಹೀಗಾಗಿ ಮೈತ್ರಿಕೂಟದ ಅಂಗಪಕ್ಷಗಳ ವಿವಿಧ ನಾಯಕರು ಭಿನ್ನ ಭಿನ್ನ ಹೇಳಿಕೆಗಳನ್ನು ನೀಡಿದ್ದರು.

       ಈ ಹಿನ್ನೆಲೆಯಲ್ಲಿಯೇ ಇಂದು ತಮ್ಮ ಮುಂದೆ ಖುದ್ದಾಗಿ ಹಾಜರಾಗುವಂತೆ ಹಿರಿಯ ನಾಯಕರಾದ ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೋಟೀಸ್ ನೀಡಿದ್ದರು.ಕೆಪಿಸಿಸಿ ಅಧ್ಯಕ್ಷರ ಬುಲಾವ್ ಹಿನ್ನೆಲೆಯಲ್ಲಿ ಇಂದು ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರುಗಳು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಛೇರಿಗೆ ಬಂದು ಅಧ್ಯಕ್ಷರನ್ನು ಭೇಟಿ ಮಾಡಿ ವಿವರಣೆ ನೀಡಿದರು.

       ಶ್ರೀಮತಿ ಸುಮಲತಾ ಅವರ ಜತೆ ಊಟ ಮಾಡಿದ್ದು ನಿಜ.ಆದರೆ ಊಟ ಮಾಡುವುದು ಸಹಜ ಸಂಪ್ರದಾಯ.ಊಟಕ್ಕೂ,ಪಕ್ಷ ವಿರೋಧಿ ಚಟುವಟಿಕೆಗೂ ತಳಕು ಹಾಕುವುದು ಸರಿಯಲ್ಲ.ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.ಇದೇ ರೀತಿ ಯಾವುದೇ ಪಕ್ಷದಲ್ಲಿರುವ ಆತ್ಮೀಯರು ಭೋಜನಕ್ಕೆ ಆಹ್ವಾನಿಸಿದಾಗ ಅಲ್ಲಿಗೂ ಹೋಗಿದ್ದೇವೆ.ಆ ರೀತಿ ಹೋಗಿದ್ದೇವೆ ಎಂದ ಮಾತ್ರಕ್ಕೆ ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದರ್ಥವಲ್ಲ.

     ಹೀಗಾಗಿ ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರುಗಳು ಕೆಪಿಸಿಸಿ ಅಧ್ಯಕ್ಷರ ಮುಂದೆ ತಮ್ಮ ವಿವರಣೆ ನೀಡಿದರು ಎಂದು ಮೂಲಗಳು ವಿವರ ನೀಡಿವೆ.ಅವರು ನೀಡಿದ ವಿವರಣೆಯಿಂದ ಸಮಾಧಾನಿತರಾದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ:ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಅವರೊಂದಿಗೆ ಚೆಲುವರಾಯಸ್ವಾಮಿ,ನರೇಂದ್ರಸ್ವಾಮಿಯವರು ಊಟ ಮಾಡಿದ್ದು ನಿಜ.

      ಆದರೆ ಹೀಗೆ ಅವರು ಸುಮಲತಾ ಅವರೊಂದಿಗೆ ಊಟ ಮಾಡಿದರು ಎಂಬ ಕಾರಣಕ್ಕಾಗಿ ಅದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಬಾವಿಸಬೇಕಿಲ್ಲ.ಹಾಗೆಯೇ ಅವರೂ ಬಂದು ಊಟದಲ್ಲಿ ಭಾಗಿಯಾದ ಕುರಿತು ವಿವರಣೆ ನೀಡಿದ್ದಾರೆ.ಅವರು ನೀಡಿದ ವಿವರಣೆ ಸಮರ್ಪಕವಾಗಿದೆ .ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆ ಇಲ್ಲ ಎಂದರು.ತದ ನಂತರ ಮಾಜಿ ಸಿಎಂ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ