ಕೊರಟಗೆರೆ
ಕೊರೊನಾ ಎಂಬ ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿರುವ ಅವಧಿಯಲ್ಲಿ ಸೀಲ್ ಮಾಡಿರುವ ಮದ್ಯ ಮಾರಾಟ ಸನ್ನದುಗಳಲ್ಲಿನ ಮದ್ಯ ದಾಸ್ತಾನು ತಪಾಸಣೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ತಾಲ್ಲೂಕು ಅಬಕಾರಿ ಇನ್‍ಸ್ಪೆಕ್ಟರ್ ರಾಮಮೂರ್ತಿ ತಂಡದೊಂದಿಗೆ ಪರಿಶೀಲಿಸಿದರು.
ಕೊರಟಗೆರೆ ತಾಲ್ಲೂಕು ವಲಯದಲ್ಲಿ ಸುಮಾರು 20 ಮದ್ಯ ಮಾರಾಟ ಮಳಿಗೆಗಳಿದ್ದು, ಇದರಲ್ಲಿ 12 ವೈನ್‍ಶಾಪ್‍ಗಳು, 3 ಎಂಎಸ್‍ಐಎಲ್ ಮದ್ಯದ ಅಂಗಡಿಗಳು, 5 ಬಾರ್ ಅಂಡ್ ರೆಸ್ಟೋರೆಂಟ್‍ಗಳಿವೆ. ಎಲ್ಲಾ ಮಳಿಗೆಗಳ ಮದ್ಯ ದಾಸ್ತಾನುಗಳನ್ನು ಪರಿಶೀಲನೆ ನಡೆಸಲು ಮೇಲಧಿಕಾರಿಗಳ ಆದೇಶದಂತೆ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಎಲ್ಲಾ ಮದ್ಯ ಮಾರಾಟ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಅಬಕಾರಿ ಇನ್‍ಸ್ಪೆಕ್ಟರ್ ರಾಮಮೂರ್ತಿ ತಿಳಿಸಿದರು.
ಸರ್ಕಾರದ ಆದೇಶದಂತೆ ಲಾಕ್‍ಡೌನ್ ಮಾಡಿದಂತಹ ಸಂದÀರ್ಭದಲ್ಲಿ ತಾಲ್ಲೂಕಿನ ಎಲ್ಲಾ ಮದ್ಯ ಮಳಿಗೆಗಳಲ್ಲಿ ದಾಸ್ತಾನು ಪರಿಶೀಲಿಸಿ ಸೀಲ್ ಮಾಡಲಾಗಿತ್ತು. ಹಾಗೆಯೆ ಮೇ 4 ರ ಸೋಮವಾರ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ್ದು, ಸೀಲ್ ಮಾಡಲಾಗಿದ್ದ ದಾಸ್ತಾನುಗಳನ್ನು ಪರಿಶೀಲನೆ ಮಾಡಿದ ನಂತರ ಮಾರಾಟ ಮಾಡಬಹುದಾಗಿದೆ.
ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮದ್ಯ ಪಡೆದು ಕೊಳ್ಳಬೇಕು. ಅದೇ ರೀತಿ ಸನ್ನದು ಮಾಲೀಕರು ಗ್ರಾಹಕರನ್ನು ಗುಂಪು ಗುಂಪಾಗಿ ಸೇರದಂತೆ ಮದ್ಯ ಮಾರಾಟ ಮಾಡಬೇಕು. ಒಂದು ವೇಳೆ ಕಾನೂನು ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ದ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ 20 ಮಳಿಗೆಗಳಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಿರುವುದಿಲ್ಲ. ಆದರಂತೆಯೆ 20 ಮಳಿಗೆಗಳ ಪೈಕಿ 12 ವೈನ್ ಶಾಪ್ ಹಾಗೂ 3 ಎಂ.ಎಸ್.ಐ.ಎಲ್ ಅಂಗಡಿಗಳಿಗೆ ಮಾತ್ರವೆ ತೆರೆಯಲು ಅನುಮತಿ ನೀಡಲಾಗಿದೆ. ಇನ್ನುಳಿದ 5 ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ಮುಂದಿನ ಆದೇಶ ಬರುವವರೆಗೂ ಆ ಮಳಿಗೆಗಳನ್ನು ತೆರೆಯಲು ಅನುಮಾತಿ ನೀಡಿರುವುದಿಲ್ಲ. ಅನುಮತಿ ಪಡೆದಿರುವ ಎಲ್ಲಾ ಮದ್ಯದ ಅಂಗಡಿಗಳು ನಿಯಮ ಪಾಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಸಬ್‍ಇನ್‍ಸ್ಪೆಕ್ಟರ್‍ಗಳಾದ ಅರುಣ್‍ಕುಮಾರ್, ವೈಷ್ಣವಿ ಕುಲಕರ್ಣಿ, ಆರಕ್ಷಕರಾದ ಅಮಿತ್, ಮಂಜುನಾಥ್ ಸೇರಿದಂತೆ ಸಿಬ್ಬಂದಿ ವರ್ಗ ತಂಡದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ