ಕೊರಟಗೆರೆ
ತೋಟಗಾರಿಕೆ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅನುಷ್ಠಾನವಾಗದೆ ಕೊರಟಗೆರೆ ರೈತರಿಗೆ ಸಮಸ್ಯೆ ಎದುರಾಗಿದೆ ಎಂದು ತಾಪಂ ಉಪಾಧ್ಯಕ್ಷ ವೆಂಕಟಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಪಂ ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸರ್ಕಾರದ ಹಲವಾರು ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯದೆ ಉಳ್ಳವರಿಗೆ ಮಾತ್ರ ಸಿಗುತ್ತಿವೆ. ತೋಟಗಾರಿಕೆ ಇಲಾಖೆ ನಿರ್ದೇಶಕಿ ತಾಪಂ ಸಭೆ ಮತ್ತು ಕೊರಟಗೆರೆ ರೈತರಿಗೆ ಯೋಜನೆಗಳ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ತೋಟಗಾರಿಕೆಗೆ ಬರುವಂತಹ ಯೋಜನೆಗಳ ಮಾಹಿತಿಯೆ ರೈತರಿಗೆ ಸಿಗದಂತಾಗಿದೆ. ಅಧಿಕಾರಿಗಳ ವಿರುದ್ದ ಜಿಪಂ ಮೂಲಕ ಸರ್ಕಾರಕ್ಕೆ ವರದಿ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಪಂ ಅಧ್ಯಕ್ಷೆ ನಾಜೀಮಾಭಿ ಮಾತನಾಡಿ ಮುಂಗಾರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಸಂಗ್ರಹಣೆ ಮಾಡುವುದರ ಜೊತೆ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. 24 ಗ್ರಾಪಂಗಳ ಜೊತೆ ತಾಪಂ ಇಓ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಆಗ್ರಹ ಮಾಡಿದರು.
ಕೊರಟಗೆರೆ ಕ್ಷೇತ್ರದ ರೈತರಿಗೆ ನೀರಾವರಿ ಯೋಜನೆ ಇಲ್ಲದೆ ನೀರಾವರಿಯ ಸಮಸ್ಯೆಯು ಎದುರಾಗಿದೆ. ಮುಂಗಾರು ಮಳೆಯ ಆಶ್ರಯದಿಂದ ಬಿತ್ತನೆ ಮಾಡುವಂತಹ ರಾಗಿ, ಮುಸುಕಿನ ಜೋಳ, ಶೇಂಗಾ, ಅಲಸಂದೆ ಮತ್ತು ಹುರುಳಿ ಜೊತೆ ನೀರಾವರಿ ಬೆಳೆಯಾಗಿ ಭತ್ತ, ರಾಗಿ ಬೆಳೆಯುತ್ತಾರೆ. ಕೃಷಿ ಇಲಾಖೆ ಮುಂಗಾರು ಪ್ರಾರಂಭಕ್ಕೂ ಮುನ್ನಾ ರೈತರಿಗೆ ಅವಶ್ಯಕತೆ ಇರುವಂತಹ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, 2019-20ನೆ ಸಾಲಿನ ಮುಂಗಾರಿನಲ್ಲಿ ನಾಲ್ಕು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಅವಶ್ಯಕತೆ ಇರುವಂತಹ ತೊಗರಿ, ಜೋಳ, ಶೇಂಗಾ, ಭತ್ತ ಸೇರಿ ಒಟ್ಟು 1864.5 ಕ್ವಿಂಟಾಲ್ ದಾಸ್ತಾನು ಮಾಡಿ, 1552.5 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ನೀರಾವರಿ ಖುಷ್ಕಿ ಭೂಮಿಯಾದ 20,595 ಹೆಕ್ಟೇರ್‍ಗಳಲ್ಲಿ ಬಿತ್ತನೆ ಮಾಡಲಾಗಿದ್ದು ಶೇ.76ರಷ್ಟು ಗುರಿ ಸಾಧಿಸಲಾಗಿದೆ ಎಂದರು.
ತಾಪಂ ನೆರವು ಯೋಜನೆಯಡಿ ಸಸ್ಯ ಸಂರಕ್ಷಣೆ, ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯಡಿ ಒಟ್ಟು 1,15,000 ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 1,12,500 ರೂ. ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ರೈತರ ಜಮೀನಿನಲ್ಲಿ 44 ಬದು ನಿರ್ಮಾಣ, 47 ಕೃಷಿ ಹೊಂಡ, 11 ಎರೆಹುಳು ತೊಟ್ಟಿಗಳು ನಿರ್ಮಾಣ ಮಾಡಲಾಗಿದೆ. ಪ್ರ್ರದಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ 21,700 ರೈತರ ಬ್ಯಾಂಕ್ ಖಾತೆಗಳಿಗೆ ಹಣ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ತಾಪಂ ಇಓ ಶಿವಪ್ರಕಾಶ್, ಸದಸ್ಯರಾದ ಈರಣ್ಣ, ಸುಮರಾಜು, ಜ್ಯೋತಿ, ನರಸಮ್ಮ, ಕೃಷಿ ಎಡಿಎ ನಾಗರಾಜು, ತೋಟಗಾರಿಕೆ ಪುಪ್ಪಲತಾ, ಸಾಮಾಜಿಕ ಅರಣ್ಯ ಇಲಾಖೆಯ ನವಚೇತನ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿವರ್ಗ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ