ಹುಳಿಯಾರು:
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದಿದೆ. ಅಲ್ಲದೆ ಈ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಿ ಜನ ಪ್ರಶಂಸೆಗೆ ಪಡೆದಿದೆ. ಆದರೆ ಶಿಕ್ಷಕರು ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಸಹ ಕಲ್ಪಿಸದೆ ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದಕ್ಕೆ ಹುಳಿಯಾರು ಪಬ್ಲಿಕ್ ಸ್ಕೂಲ್ ನಿದರ್ಶನವಾಗಿದೆ.
ಹೌದು, ಹುಳಿಯಾರಿನಲ್ಲಿ ಈ ವರ್ಷ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿದೆ. ಈ ಶಾಲೆಗೆ ಪ್ರವೇಶ ಪಡೆಯಲು ಜನ ಮುಗಿಬಿದ್ದಿದ್ದರು. ಲಾಟರಿ ಮೂಲಕ ಪ್ರವೇಶ ಲಾಟರಿ ಮೂಲಕ ಪ್ರವೇಶ ಪಡೆದವರು ಹಿರಿಹಿರಿ ಹಿಗ್ಗಿದರು. ಪ್ರವೇಶ ಸಿಗದವರು ಭಾರಿ ನಿರಾಸೆಗೊಂಡರು. ಅಧಿಕಾರಿಗಳೂ ಸಹ ಸರ್ಕಾರಿ ಶಾಲೆಗೆ ಮರಳಿರುವ ಗತಕಾಲದ ವೈಭವ ಕಂಡು ಸಂತಸಗೊಂಡರು.
ಆದರೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆಂದು ಬಾರಿ ಪ್ರಚಾರದೊಂದಿಗೆ ಪಬ್ಲಿಕ್ ಶಾಲೆ ತೆರದ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಶಿಕ್ಷಕರನ್ನೇ ನೀಡದೆ ನಿರ್ಲಕ್ಷ್ಯಿಸಿದೆ. ತಿಂಗಳಾದರೂ ಪಾಠಗಳು ನಡೆಯದೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದ ಖಾಸಗಿ ಶಾಲೆ ಬಿಟ್ಟು ಸರ್ಕಾರ ನಂಬಿ ಪಬ್ಲಿಕ್ ಸ್ಕೂಲಿಗೆ ಸೇರಿಸಿದ ಮಕ್ಕಳು ಅಡಕತ್ತರಿಯಲ್ಲಿ ಸಿಲುಕಿದಂತ್ತಾಗಿದೆ.
ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ಈ ವರ್ಷ ಎಲ್‍ಕೆಜಿಯಿಂದ 7 ನೇ ತರಗತಿಗೆ ಬರೋಬ್ಬರಿ 336 ಮಂದಿ ಪ್ರವೇಶ ಪಡೆದಿದ್ದಾರೆ. ಅಚ್ಚರಿ ಎನ್ನುವಂತೆ ಇದರಲ್ಲಿ ಇಂಗ್ಲೀಷ್ ಮೀಡಿಯಂಗಾಗಿಯೇ 1 ನೇ ತರಗತಿಗೆ 60 ಮಕ್ಕಳು, ಹಾಗೂ 6 ನೇ ತರಗತಿಗೆ 110 ಮಕ್ಕಳು ಪ್ರವೇಶ ಪಡೆದಿದ್ದಾರೆ.
ಸರ್ಕಾರದ ನಿಯಮದಂತೆ 30 ಮಕ್ಕಳಿಗೆ ಒಬ್ಬರಂತೆ ಈ ಶಾಲೆಗೆ ಕನಿಷ್ಟ 10 ಶಿಕ್ಷಕರು ಬೇಕು. ಆದರೆ ಇರೋದು ಕೇವಲ 4 ಮಂದಿ ಮಾತ್ರ. ಇದರಲ್ಲಿ ಒಬ್ಬರು ಹೆರಿಗೆ ರಜೆ ಪಡೆದಿದ್ದರೆ, ಒಬ್ಬರು ಮುಖ್ಯಶಿಕ್ಷಕರು, ಮತ್ತೊಬ್ಬರು ದೈಹಿಕ ಶಿಕ್ಷಣ ಶಿಕ್ಷಕರು!
ಪಬ್ಲಿಕ್ ಶಾಲೆಯ ಮರ್ಯಾದೆ ಉಳಿಸಲೆಂದು 3 ಮಂದಿ ಶಿಕ್ಷಕರನ್ನು ಡೆಪ್ಟೇಷನ್ ಮೇಲೆ ಕೊಟ್ಟಿದ್ದರೂ ಇವರಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರು.
ಪರಿಣಾಮ ಕುರಿ ದೊಡ್ಡಿಯಂತೆ ಮಕ್ಕಳನ್ನು ಒಂದೇ ಕೊಠಡಿಗೆ ತುಂಬಿಕೊಂಡು ಇರುವ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಮಾಜ ಪಾಠವನ್ನು ಇರೋ ಶಿಕ್ಷಕರೇ ಮ್ಯಾನೇಜ್ ಮಾಡಿದರೂ ಹಿಂದಿ ಶಿಕ್ಷಕರಿಲ್ಲದೆ ಪುಸ್ತಕವನ್ನೇ ಮಕ್ಕಳು ಇನ್ನೂ ನೋಡದಾಗಿದ್ದಾರೆ. ಇದರಿಂದ ಗುಣಮಟ್ಟದ ಶಿಕ್ಷಕ ಪಡೆಯುವ ಮಕ್ಕಳ ಕನಸು ನುಚ್ಚು ನೂರಾಗಿದೆ.
ಖಾಸಗಿ ಶಾಲೆಗಳ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಸೊರಗುತ್ತಿವೆ. ಇಂತಹದರಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿದ್ದರೂ ಶಿಕ್ಷಕರು ಮಾತ್ರ ಇಲ್ಲದಾಗಿದ್ದಾರೆ. ವಿಜ್ಞಾನ, ಇಂಗ್ಲೀಷ್, ಹಿಂದಿ ಹಾಗೂ ಜನರಲ್ ಶಿಕ್ಷಕ ಹುದ್ದೆ ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬಿದ್ದಿದೆ. ಇನ್ನಾದರೂ ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳಲ್ಲಿ ಅತೀ ಮುಖ್ಯವಾದ ಶಿಕ್ಷಕರನ್ನು ಕೊಟ್ಟು ಸರ್ಕಾರಿ ಶಾಲೆಗಳನ್ನು ಉಳಿಸಲಿ ಎನ್ನುವುದು ಪೋಷಕರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ