ನಿಗಮ ಮಂಡಳಿಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ:ಎಚ್.ಡಿ.ರೇವಣ್ಣ

0
37

ಬೆಂಗಳೂರು

      ಜೆಡಿಎಸ್ ಪಕ್ಷಕ್ಕೆ ನೀಡಿರುವ ನಿಗಮ ಮಂಡಳಿಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಮಾತನ್ನು ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಕೇಳಬೇಕಾಗುತ್ತದೆ. ನಮ್ಮ ನಿರ್ಧಾರಕ್ಕೆ ಅಡ್ಡಿಪಡಿಸಿದರೆ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಮೈತ್ರಿ ಮುರಿದುಕೊಳ್ಳುವ ಎಚ್ಚರಿಕೆಯನ್ನು ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟವಾಗಿ ಕಾಂಗ್ರೆಸ್ ನಾಯಕರಿಗೆ ರವಾನಿಸಿದ್ದಾರೆ.

      ಹೇಮಾವತಿ ಜಲಾನಯನ ಪ್ರದೇಶ ನೀರು ಹಂಚಿಕೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ , ಕಾಂಗ್ರೆಸ್‍ಗೆ ನೀಡಲಾಗಿರುವ ನಿಗಮ ಮಂಡಳಿ ಸ್ಥಾನಗಳನ್ನು ನಾವ್ಯಾಕೆ ತೆಗೆದುಕೊಳ್ಳೋಣ? ಹಾಗೆಂದು ನಮ್ಮ ಪಾಲಿನ ರಾಜಕೀಯ ಅಧಿಕಾರವನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟುಕೊಡುವುದಿಲ್ಲ. ಈ ವಿಚಾರದಲ್ಲಿ ಪಕ್ಷದ ನಿಲುವು ಅಚಲ ಎಂದು ರೇವಣ್ಣ ಪುನರುಚ್ಚರಿಸಿದ್ದಾರೆ.

        ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಹೇಳಿಕೆಗೆ ಗರಂ ಆದ ರೇವಣ್ಣ ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಸುಧಾಕರ್ ಯಾರು ಎಂದು ಪ್ರಶ್ನಿಸಿದ್ದಾರೆ. ನಮಗೆ ಹೇಳುವುದಕ್ಕೆ ,ಕೇಳುವುದಕ್ಕೆ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿ ದೇವೇಗೌಡರು ಇದ್ದಾರೆ. ಏನೇ ಕೇಳುವುದು ಹೇಳುವುದಿದ್ದರೆ ಅವರ ಪಕ್ಷದ ಅಧ್ಯಕ್ಷರ ಬಳಿ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.

       ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ಹಿಡಿತ ಇಟ್ಟುಕೊಳ್ಳುವ ಹೇಳಿಕೆಯನ್ನು ಪುನರುಚ್ಚರಿಸಿದ ಸಚಿವ ರೇವಣ್ಣ ನಿಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ಎಂದು ಮತ್ತೊಮ್ಮೆ ದಿನೇಶ್ ಗುಂಡೂರಾವ್ ಗೆ ಬಿಸಿ ಮುಟ್ಟಿಸಿದ್ದಾರೆ.

      ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಹಲವು ವಿಚಾರಗಳಲ್ಲಿ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಬೆನ್ನಲ್ಲೇ ಸಚಿವ ರೇವಣ್ಣ ಕಠೋರವಾದ ಹೇಳಿಕೆಗಳನ್ನು ನೀಡುತ್ತಿದ್ದು ಮೈತ್ರಿ ಸರ್ಕಾರದ ಒಳವಲಯದಲ್ಲಿ ಏನೋ ನಡೆಯುತ್ತಿದೆ ಎನ್ನುವ ಗುಮಾನಿ ಕಾಣಿಸಿಕೊಂಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here