ಹಿರಿಯೂರು :
ಎಂದಿಗೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ..! ಮಾಧ್ಯಮಗಳಲ್ಲಿ ನನ್ನನ್ನು ಆರೀತಿ ಬಿಂಬಿಸುತ್ತಿರುವುದು ನಿಜಕ್ಕೂ ನನಗೆ ನೋವು ತಂದಿದೆ. ಎಷ್ಟು ಸಲ ಹೇಳಿದರು ಪದೇ ಪದೇ ನನ್ನನ್ನು ಬಿಜೆಪಿ ಬಿಡುವವರ ಪಟ್ಟಿಯಲ್ಲಿ ಬಿಂಬಿಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಕಾನೂನು ಕ್ರಮಕ್ಕೆ ಚಿಂತನೆ ಮಾಡಬೇಕಾಗುತ್ತದೆ ಎಂಬುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.
ಅಭಿವೃದ್ಧಿ ಕಾರ್ಯ ಮಾಡುವ ನಿಟ್ಟಿನಲ್ಲಿ ಬೇಕಿರುವ ಅನುದಾನಕ್ಕಾಗಿ ಆಡಳಿತ ನಡೆಸುತ್ತಿರುವ ಆಯಾ ಇಲಾಖೆ ಸಚಿವರ ಹತ್ತಿರ ಹೋದರೆ ಅದು ಪಕ್ಷ ಬಿಟ್ಟಂತೆ ಆಗುತ್ತದೆಯೇ..? ಚುನಾವಣೆಗೆ ನಿಂತು ಗೆಲುವು ಸಾಧಿಸುವುದು ಎಷ್ಟು ಕಷ್ಟ ಎಂಬ ಬಗ್ಗೆ ವದಂತಿ ಹಬ್ಬಿಸುವವರಿಗೆ ತಿಳಿದಿದೇಯೇ..? ನಮ್ಮನ್ನು ನೆಮ್ಮದಿಯಾಗಿ ಕೆಲಸ ಮಾಡಿಕೊಂಡು ಹೋಗಲು ಮಾಧ್ಯಮಗಳು ಅವಕಾಶ ಮಾಡಿಕೊಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಹಿರಿಯೂರು ನಗರಕ್ಕೆ ಮಿನಿ ವಿಧಾನಸೌಧ ಕಟ್ಟಡ ಮಂಜೂರು ಮಾಡಿಸಬೇಕು. ಕೆಎಸ್‍ಆರ್‍ಟಿಸಿ ಡಿಪೊ ತರಬೇಕಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು,ಅವರಿಗೆ ನೀರು, ವಲಸೆ ತಡೆಗೆ ಸ್ಥಳೀಯವಾಗಿ ಉದ್ಯೊಗ ಕೊಡಿಸಬೇಕಿದೆ. ಒಣಗುತ್ತಿರುವ ತೆಂಗು, ಅಡಿಕೆ ತೋಟದ ರೈತರಿಗೆ ಯಾವುದಾದರೂ ರೂಪದಲ್ಲಿ ನೆರವು ಕೊಡಿಸಬೇಕಿದೆ. ಒಂದೆರಡು ತಿಂಗಳಲ್ಲಿ ಜಾನುವಾರು ರಕ್ಷಣೆಗೆ ಗೋಶಾಲೆ ಆರಂಭಿಸಬೇಕಿದೆ ಇಷ್ಟೆಲ್ಲಾ ಕೆಲಸಗಳು ನನ್ನ ಮುಂದಿವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
