ಕೃಷಿ-ತೋಟಗಾರಿಕೆ ವಾಹನಗಳಿಗೆ ನಿರ್ಬಂಧವಿಲ್ಲ : ಸಚಿವರು

ಮಧುಗಿರಿ

    ಕೃಷಿ, ಆಹಾರ, ತೋಟಗಾರಿಕೆ ಹಾಗೂ ಔಷಧಿ ಸಾಗಾಣಿಕೆ ವಾಹನಗಳಿಗೆ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ತಿಳಿಸಿದರು.

     ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ 21 ದಿನಗಳ ಕಾಲ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಸಿಗುವಂತೆ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಇತರೆ ಯಾವುದೇ ವಾಹನಗಳು ಸಂಚರಿಸದಂತೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

     ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಬೇಕು. ಸರ್ಕಾರದ ಆದೇಶದಂತೆ ಪಡಿತರ ಕಾರ್ಡುದಾರರಿಗೆ ಹೆಬ್ಬೆಟ್ಟಿನ ಗುರುತು ಹಾಗೂ ಓಟಿಪಿ ಪಡೆಯದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಿಸಬೇಕು. ಹೆಚ್ಚು ಕಾರ್ಡುದಾರರು ಇರುವ ಗ್ರಾಮಗಳಿಗೆ ನ್ಯಾಯಬೆಲೆ ಅಂಗಡಿಯವರು ತೆರಳಿ ಅಲ್ಲಿಯೇ ಪಡಿತರ ನೀಡಬೇಕೆಂದು ಸೂಚಿಸಿದರು.

    ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆದು ಅವರು ಇರುವಲ್ಲಿಯೇ ಊಟದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.ಅಗತ್ಯ ವಸ್ತುಗಳ ಪೂರೈಕೆ ಮಾಡುವ ಹಾಗೂ ಅಗತ್ಯ ಸೇವೆ ಒದಗಿಸುವ ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಹಾಕುವಂತೆ ಪೆಟ್ರೋಲ್ ಬಂಕ್ ಅವರಿಗೆ ತಿಳಿಸಬೇಕು ಎಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.

     ಏ.15ರ ವರೆಗೂ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಭೆ ಸಮಾರಂಭಗಳಿಗೆ ಅನುಮತಿ ನೀಡುವಂತಿಲ್ಲ ಎಂದ ಅವರು, ಸರ್ಕಾರದ ಆದೇಶಗಳನ್ನು ಸಾರ್ವಜನಿಕರು ಕಟ್ಟಿನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಇಂದಿರಾ ಕ್ಯಾಂಟೀನ್‍ನಲ್ಲಿ ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ಪ್ರತಿನಿತ್ಯ ಆಹಾರ ಸರಬರಾಜು ಮಾಡಲು ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಿ, ಕಸಬಾ ಹಾಗೂ ದೊಡ್ಡೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಇಓ ದೊಡ್ಡಸಿದ್ದಯ್ಯ ಅವರಿಗೆ ಸೂಚಿಸಿದರು.

      ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋ.ನ.ವಂಶಿಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ, ಉಪವಿಭಾಗಾಧಿಕಾರಿ ಡಾ.ನಂದಿನಿ ದೇವಿ, ಡಿ.ವೈ.ಎಸ್.ಪಿ ಎಂ.ಪ್ರವೀಣ್, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ತಾ.ಪಂ.ಇಓ ಡಿ.ದೊಡ್ಡಸಿದ್ದಯ್ಯ, ಸಮಾಜ ಕಲ್ಯಾಣಾಧಿಕಾರಿ ಹರೀಶ್, ಮುಖ್ಯಾಧಿಕಾರಿ ಅಮರ ನಾರಾಯಣ, ಸಿಡಿಪಿಓ ಅನಿತಾ, ತಾಲ್ಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು, ಸಿಪಿಐ ಸರ್ದಾರ್, ಪಿಎಸ್‍ಐ ಎಲ್.ಕಾಂತರಾಜು, ಪರಿಸರ ಎಂಜಿನಿಯರ್ ಸೌಮ್ಯ ಹಾಗೂ ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link