ಹುಳಿಯಾರು:
ನಮ್ಮ ಬೀದಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿಯ ಮೋಟ್ರು ಕೆಟ್ಟು 15 ದಿನಗಳಾದರೂ ರಿಪೇರಿ ಮಾಡಿಸೌರಿಲ್ಲ ಸ್ವಾಮಿ. ಅಕ್ಕಪಕ್ಕದ ಜಮೀನುಗಳಿಗೆ ಹೋಗಿ ಅವರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯ ಕಮ್ಮ ನಮ್ಮದಾಗಿದೆ ಎಂದು ಹುಳಿಯಾರು ಪಪಂ ವ್ಯಾಪ್ತಿಯ ತಿಮ್ಲಾಪುರ ಕೋಡಿ ನಿವಾಸಿಗಳು ಅವಲತ್ತುಕೊಳ್ಳುತ್ತಿದ್ದಾರೆ.
ತಿಮ್ಲಾಪುರ ಕೋಡಿಯಲ್ಲಿನ ಕೈ ಪಂಪು ಹುಳಿಯಾರು ಪಟ್ಟಣಕ್ಕೆ ಹತ್ತಾರು ವರ್ಷಗಳ ಕಾಲ ಕುಡಿಯುವ ನೀರು ಸರಬರಾಜು ಮಾಡಿತ್ತು. ಸರಿಯಾದ ಮಳೆಯಿಲ್ಲದೆ ಕೊಳವೆಬಾಯಿಯ ಅಂತರ್ಜಲ ಕಡಿಮೆಯಾಯಿತು. ಹಾಗಾಗಿ ಎರಡ್ಮೂರು ವರ್ಷಗಳ ಹಿಂದೆ ಕೈ ಪಂಪು ತೆಗೆದು ಮೋಟರ್ ಬಿಟ್ಟು ಇರುವ ನೀರನ್ನು ಸಿಸ್ಟನ್ ಮೂಲಕ ಕೋಡಿಯ ನಿವಾಸಿಗಳಿಗೆ ನೀಡಲಾಗುತ್ತಿತ್ತು.
ಎರಡ್ಮೂರು ವರ್ಷ ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ನಂತರ ಕೊಳವೆಬಾವಿಗೆ ಬಿಟ್ಟಿದ್ದ ಮೋಟರ್ ಕೆಡಲು ಆರಂಭವಾಯಿತು. ಗ್ರಾಪಂಗೆ ಎಷ್ಟು ಹೇಳಿದರೂ ಕೇಳದಿದ್ದಾಗ ಸ್ಥಳೀಯರೆ ಮನೆಗಿಷ್ಟು ಎಂದು ಹಣ ಹಾಕಿ ರೆಡಿ ಮಾಡಿಸಿ ಬಿಡುತ್ತಿದ್ದರು. ಹೀಗೆ ಮೂರ್ನಾಲ್ಕು ಬಾರಿ ರೆಡಿ ಮಾಡಿಸಿದ್ದರು. ಆದರೆ ಈಗ ಪುನಃ ಮೋಟರ್ ಕೆಟ್ಟಿದೆ.
ಹೀಗೆ ಪದೇಪದೇ ರೆಡಿ ಮಾಡಿಸಿ ಸೋತಿರುವ ಸ್ಥಳೀಯರು ಪಟ್ಟಣ ಪಂಚಾಯ್ತಿಯವರೇ ಒಳ್ಳೆಯ ಕಡೆ ರೆಡಿ ಮಾಡಿಸಲಿ ಅಥವಾ ಮೋಟರ್ ಬದಲಾಯಿಸಲೆಂದು ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿ 15 ದಿನಗಳಾದರೂ ಯಾರೊಬ್ಬರೂ ಇತ್ತ ಗಮನ ಹರಿಸದೆ ನಿರ್ಲಕ್ಷ್ಯಿಸಿದ್ದಾರೆ. ಪರಿಣಾಮ ನೀರಿನ ಹಾಹಾಕಾರ ಆರಂಭವಾಗಿದೆ.
ಮುಂಜಾನೆ ತ್ರಿಫೇಸ್ ಕರಂಟ್ ಕೊಟ್ಟಾಗ ಅಕ್ಕಪಕ್ಕದ ಜಂಇನಿಗೆ ಹೋಗಿ ಅಲ್ಲಿನ ಮಾಲೀಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅವರೂ ಬಿಡದಿದ್ದರೆ ಮೂರ್ನಲ್ಕು ಕಿ.ಮೀ.ದೂರಕ್ಕೆ ಹೋಗಿ ನೀರನ್ನು ತರಬೇಕಿದೆ. ಹಾಗಾಗಿ ದಿನಬೆಳಗಾದರೆ ಇಲ್ಲಿನ ಮಹಿಳೆಯರಿಗೆ ನೀರು ತರುವುದೇ ಗೋಳಾಗಿ ಪರಿಣಮಿಸಿದೆ.
ಅಲ್ಲದೆ ಈ ಸ್ಥಳ ಪಟ್ಟಣ ಪ್ರದೇಶದಿಂದ 1 ಕಿ.ಮೀ.ದೂರವಿದ್ದು ಕೆರೆಯ ಕೋಡಿಯ ಬಳಿಯಿದೆ. ಇಲ್ಲಿನ ನಿವಾಸಿಗಳು ಆಸ್ಪತ್ರೆ, ಸಂತೆ, ಅಂಗಡಿ, ಶಾಲೆಗಳಿಗೆ ಬರಲು 1 ಕಿ.ಮೀ ನಡೆಯುವುದು ಅನಿವಾರ್ಯವಾಗಿದೆ. ವಿಧಿಯಿಲ್ಲದೆ ನಡೆದುಕೊಂಡೆ ಓಡಾಡುವ ಇಲ್ಲಿನ ಜನರಿಗೆ ಈ ರಸ್ತೆಯ ಇಕ್ಕೆಲಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಜಾಲಿ ಗಿಡಗಳು ತೊಡಕಾಗಿದ್ದು ತೆರವು ಮಾಡಿಸುವಂತೆ ಪಪಂ ಅಧಿಕಾರಿಗಳಿಗೆ ಹೇಳಿದರೂ ತೆರವು ಮಾಡಿಸಿಲ್ಲ
ಇನ್ನು ಈ ರಸ್ತೆಯ ಕಂಬಳಿಗೆ ಬೀದಿದೀಪಗಳನ್ನು ಕಟ್ಟಿ ವರ್ಷಗಳೇ ಕಳೆದಿದೆ. ಹಾಗಾಗಿ ರಾತ್ರಿ ಸಂದರ್ಭದಲ್ಲಿ ಅಂಗೈಯಲ್ಲಿ ಜೀವ ಹಿಡಿದು ಓಡಾಡುತ್ತಿದ್ದಾರೆ. ಅಲ್ಲದೆ ಮನೆಗಳಿರುವ ಸ್ಥಳದಲ್ಲೂ ಬೀದಿ ದೀಪ ಕಟ್ಟದೆ ನಿರ್ಲಕ್ಷಿಸಿದ್ದು ಈ ಬಡಾವಣೆಯ ಜನ ಕತ್ತಲೆಯಲ್ಲಿ ದಿನ ದೂಡುತ್ತಿದ್ದಾರೆ. ಪ್ರತಿ ನಿತ್ಯ ನೀರು, ಬೀದಿದೀಪ, ಜಾಲಿ ತೆರವಿಗೆ ಕೇಳಿಕೇಳಿ ಸಾಕಾಗಿ ಹೋಗಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಸ್ಪಂಧಿಸದೆ ಮೌನವಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ