ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಪೋಲೀಸ್ ಠಾಣೆಯು ಸೌಲಭ್ಯ ವಂಚಿತ ಠಾಣೆಯಾಗಿದೆ ಎಂಬುದು ಠಾಣಾ ವ್ಯಾಪ್ತಿಯ ಗ್ರಾಮಗಳ ನಾಗರಿಕರ ಆರೋಪವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂಬಂತೆ ದಶಕಗಳ ಹಿಂದೆ ಪೋಲೀಸ್ ಸಿಬ್ಬಂದಿಗೆ ಹನ್ನೆರಡು ವಸತಿ ನಿಲಯಗಳನ್ನು ನಿರ್ಮಿಸಲಾಗಿತ್ತು. ಸದರಿ ಮನೆಗಳು ಪಾಯದಿಂದ ಮೊದಲುಗೊಂಡು ಮೇಲ್ಛಾವಣಿಯವರೆಗೆ ಕಲ್ಲಿನ ಚಪ್ಪಡಿಗಳಿಂದ ನಿರ್ಮಾಣವಾಗಿದ್ದವು.
ಇವುಗಳು ಹಳೆಯವುಗಳಾಗಿ ಅಲ್ಪ ಸ್ವಲ್ಪ ಮಳೆ ಬಂದರೂ ಸಹ ಸೋರುತ್ತಿದ್ದು, ವಾಸಕ್ಕೆ ಯೋಗ್ಯವಿಲ್ಲದಂತಾಗಿರುತ್ತವೆ. ಹಾಗಾಗಿ ಹನ್ನೆರಡರಲ್ಲಿ ಒಂಭತ್ತು ಮನೆಗಳನ್ನು ಕೆಡವಲು ಆದೇಶವನ್ನು ಕಳೆದ ವರ್ಷವೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನೀಡಿದ್ದರು.
ಆದರೆ ಇಂದಿನವರೆವಿಗೂ ಆ ಕಾರ್ಯ ಆಗಿರುವುದಿಲ್ಲ ಹಾಗೂ 2017 ನೆ ಸಾಲಿನಲ್ಲಿ ಇದೇ ಪೋಲೀಸ್ ಠಾಣೆಯ ಕಾಂಪೌಂಡಿನ ಒಳ ಭಾಗದಲ್ಲಿ ಗೃಹ ನಿರ್ಮಾಣ ಇಲಾಖೆಯ ಯೋಜನೆಯಡಿಯಲ್ಲಿ ಹನ್ನೆರಡು ನೂತನ ವಸತಿಗೃಹ ನಿರ್ಮಿಸಲು ಎರಡು ಕೋಟಿ ರೂ.ಗಳ ಅನುದಾನವನ್ನು ಮಂಜೂರು ಆಗಿತ್ತು. ಇದೀಗ ನಿರ್ಮಾಣ ಕಾರ್ಯ ಶೇ. 80 ರಷ್ಟು ಪೂರ್ಣಗೊಂಡಿದೆ. ಆದರೆ ಇನ್ನೂ ಕುಡಿಯುವ ನೀರು, ಶೌಚಾಲಯಗಳಿಗೆ ನೀರು ಒದಗಿಸಿಲ್ಲ.
ಸಂಪುಗಳು ಮಾತ್ರ ನಿರ್ಮಾಣವಾಗಿವೆ. ಉದ್ಘಾಟನೆಯು ಬಾಕಿಯಿರುತ್ತದೆ. ಈ ಮಧ್ಯೆ ಸದರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ವರ್ಗಾವಣೆಗೊಂಡು ಒಂದು ತಿಂಗಳು ಕಳೆದಿದ್ದು, ಸ್ಥಾನ ಖಾಲಿಯಿದೆ. ಮೂರುಜನ ಎ.ಎಸ್.ಐಗಳು ಹಾಗೂ ಹತ್ತು ಜನ ಮುಖ್ಯ ಪೇದೆಗಳಲ್ಲಿ ಒಂಭತ್ತು ಜನ, ಇಪ್ಪತ್ತು ಪೇದೆಗಳಲ್ಲಿ ಹದಿನೈದು ಜನ ಮಹಿಳಾ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಒಟ್ಟು 34 ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ವಸತಿಗೃಹಗಳು ವಾಸಿಸಲು ಸದ್ಯಕ್ಕೆ ಲಭ್ಯವಿಲ್ಲದ ಕಾರಣದಿಂದ ಬೇರೆ ಸ್ಥಳದಿಂದ ಓಡಾಡಿಕೊಂಡು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಿರುತ್ತದೆ. ಠಾಣಾ ವ್ಯಾಪ್ತಿಗೆ ಸೇರಿದ 94 ಗ್ರಾಮಗಳ ಪೈಕಿ ಹೊಸಕೆರೆ, ಐ.ಡಿ.ಹಳ್ಳಿ ಹಾಗೂ ಗಡಿನಾಡ ಚಂದ್ರಬಾವಿ ಗ್ರಾಮಗಳ ಬಸ್ ನಿಲ್ದಾಣಗಳಿಗೆ ಮಾತ್ರ ರಾತ್ರಿ ಪಹರೆ ಸೀಮಿತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
