ದಾವಣಗೆರೆ:
ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಕೊರತೆ ಎದುರಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಅಂಬಾದಾಸ್ ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.ಶ್ರೀತರಳಬಾಳು ಜಗದ್ಗುರು ವಿದ್ಯಾಸಂಸ್ಥೆ, ಸಿರಿಗೆರೆ, ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ, ಅನುಭವ ಮಂಟಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ದಾವಣಗೆರೆ ಇವರ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾನಾಡಿದರು.
ಪ್ರಸ್ತುತ ಬೇಸಿಗೆ ಆರಂಭಕ್ಕೆ ಮುನ್ನವೇ ನೀರಿನ ಕೊರತೆ ಕಾಣಲು. ಇಂದು ಅತೀ ಹೆಚ್ಚು ಪ್ರಮಾಣದಲ್ಲಿ ನೀರು ವ್ಯಯಮಾಡುತ್ತಿರುವುದೇ ಕಾರಣವಾಗಿದೆ. ಆದ್ದರಿಂದ ಜಲ ಸಂರಕ್ಷಣೆಗಾಗಿ ನೀರಿನ ಬಳಕೆ, ಉಳಿಕೆ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ದಿನಗಳಲ್ಲಿ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ನಮ್ಮ ಭಾರತದಲ್ಲಿ ಎಷ್ಟೋ ಗ್ರಾಮಗಳಲ್ಲಿ ಇಂದಿಗೂ ನೀರಿನ ಕೊರತೆಯ ತೀವ್ರ ಸಮಸ್ಯೆ ಇದೆ. ಅಂತರ್ಜಲ ಮಟ್ಟ ಸಂಪೂರ್ಣ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ ಹನಿಹನಿ ನೀರನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಜಾಗೃತಿ ಮೂಡಿಸಲು ಮಾಧ್ಯಮಗಳೂ ಸಹ ಹೆಚ್ಚಿನ ಲೇಖನ ಪ್ರಕಟಿಸುವ ಮೂಲಕ ಜಲಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ನಮ್ಮ ದೇಶವು ವಿಸ್ತೀರ್ಣದಲ್ಲಿ 7ನೇ ಸ್ಥಾನದಲ್ಲಿದ್ದು, ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಭೂಮಿಯ 3 ಭಾಗ ನೀರು, 1 ಭಾಗ ಭೂಮಿ ಇದ್ದರೂಸಹ ಕುಡಿಯುವ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2040ರ ವೇಳೆಗೆ ವಿಶ್ವದ 33 ರಾಷ್ಟ್ರಗಳು ನೀರಿನ ಕೊರತೆ ಎದುರಿಸಲಿವೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಾಬಪ್ಪ ಮಾತನಾಡಿ, ಕುಗ್ಗುತ್ತಿರುವ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅರಿವು ಮೂಡಿಸಲು ಯುವ ಜನಾಂಗ ಪ್ರಯತ್ನ ಮಾಡಬೇಕಿದೆ. ನೀರಿನ ಸಂರಕ್ಷಣೆ ಮತ್ತು ಹಿತಬಳಕೆಯನ್ನು ಸಾಮಾನ್ಯ ಜನರ ಬದ್ದತೆ ವಿಷಯವನ್ನಾಗಿ ರೂಪಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ನಾವು ಈಗಲಾದರೂ ಎಚ್ಚೆತ್ತುಕೊಂಡು ಲಭ್ಯವಿರುವ ಜೀವ ಜಲದ ಸಂರಕ್ಷಣೆಗೆ ಮತ್ತು ಅದರ ಸದುಪಯೋಗಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ಭಾರತದಂತಹ ಅಭಿವೃದ್ದಿಶೀಲ ದೇಶಗಳಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ನೀರಿನ ಮಹತ್ವದ ಬಗ್ಗೆ ಅರಿವು ಬೆಳೆಸಿಕೊಂಡಿಲ್ಲ. ಆಧುನಿಕ ಜೀವನ ಶೈಲಿ, ಐಷರಾಮಿ ಬದುಕುಗಳಿಂದ ಜನರು ನೀರಿನ ಸಂರಕ್ಷಣೆ ಕುರಿತು ಉದಾಸೀನ ಮನೋಭಾವ ತಾಳಿದ್ದಾರೆ. ಅದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಪರಿಣಾಮಕಾರಿ ಕಾರ್ಯಕ್ರಮಗಳ ಅವಶ್ಯವಿದೆ ಎಂದು ತಿಳಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ, ಹಿರಿಯ ವಕೀಲರಾದ ಎಲ್.ಎಚ್.ಅರುಣ್‍ಕುಮಾರ್ ಮಾತನಾಡಿ, ಸಂಶೋಧನೆಗಳ ಪ್ರಕಾರ ಭೂಮಿ ಮಾತ್ರ ಮಾನವ ಯೋಗ್ಯ ತಾಣವಾಗಿದ್ದು, ಶುದ್ದ ಸಿಹಿನೀರು ಸಿಗುವ ಏಕೈಕ ಗ್ರಹವಾಗಿದೆ. ಇಂದು 2.1ಶತಕೋಟಿ ಜನರು ಮನೆಯಲ್ಲಿ ಕುಡಿಯುವ ನೀರು ಇಲ್ಲದೇ ಬದುಕುತ್ತಿದ್ದಾರೆ. ಬೆಳೆಯುತ್ತಿರುವ ಜನಸಂಖ್ಯೆ, ಜಾಗತೀಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕೆಕರಣ, ಅರಣ್ಯನಾಶ ಇನ್ನಿತರ ಕಾರಣಗಳಿಂದ ಅಂತರ್ಜಲ ಮಟ್ಟ ದಿನೇದಿನೆ ಕುಸಿಯುತ್ತಿದೆ.
ಆದರೆ, ಈ ನಿಟ್ಟಿನಲ್ಲಿ ಸರ್ಕಾರಗಳು ವಹಿಸುತ್ತಿರುವ ಪಾತ್ರ ಹಾಗೂ ಜಲ ಸಂರಕ್ಷಣೆಯಲ್ಲಿ ಜನರ ಆಸಕ್ತಿ ಮಟ್ಟ ಅಷ್ಟೇನೂ ಆಶಾದಾಯಕವಾಗಿಲ್ಲ. ಅಮೇರಿಕಾದಂತಹ ರಾಷ್ಟ್ರಗಳು ಪೆಟ್ರೋಲ್ ಮೇಲಿನ ಸಾಮ್ಯತೆಗಾಗಿ ಯುದ್ದಗಳನ್ನು ಮಾಡಿರುವುದು ನೋಡಿದ್ದೇವೆ. ಮುಂದೊಂದು ದಿನ ಜಲಕ್ಷಾಮದಿಂದ ನೀರಿಗಾಗಿ ಯುದ್ದಗಳು ನಡೆದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಟಿ.ನಾಗರಾಜನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಆರ್.ಸಂತೋಷ್‍ಕುಮಾರ್, ಟಿ.ಹಾಲೇಶಪ್ಪ, ಪ್ರಶಿಕ್ಷಾರ್ಥಿ ಎಂ.ಸ್ಮಿತಾ, ಡಿ.ಎಲ್. ರೂಪಾ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
