ಪರಮೇಶ್ವರ್ ಖಾತೆ ಬದಲಾವಣೆ ಕಾಂಗ್ರೇಸ್ ನಾಯಕರ ಕುತಂತ್ರ : ಹೆಚ್ ಡಿ ಆರ್

ಬೆಂಗಳೂರು

         ದಲಿತ ಸಮುದಾಯಕ್ಕೆ ಸೇರಿದ ಹಿರಿಯ ನಾಯಕ ಜಿ.ಪರಮೇಶ್ವರ್ ಅವರನ್ನು ಗೃಹ ಖಾತೆಯಿಂದ ಎತ್ತಂಗಡಿ ಮಾಡಿದ ಕಾಂಗ್ರೆಸ್ ಕ್ರಮ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿರುಗು ಬಾಣವಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

         ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ,ಹಲವು ಬಾರಿ ಸಚಿವರಾಗಿದ್ದ,ಕಳೆದ ಆರು ತಿಂಗಳಿನಿಂದ ಒಳ್ಳೆಯ ಕೆಲಸ ಮಾಡಿದ್ದ ಪರಮೇಶ್ವರ್ ಅವರನ್ನು ಗೃಹ ಖಾತೆಯಿಂದ ಎತ್ತಂಗಡಿ ಮಾಡಿರುವುದರ ಹಿಂದೆ ಕಾಂಗ್ರೆಸ್ ನಾಯಕರ ಸಂಚಿರಬಹುದೇ ಹೊರತು ನಮ್ಮ ಪಾತ್ರವೇನಿಲ್ಲ ಎಂದಿದ್ದಾರೆ.

          ಹಾಗೆಯೇ ನಡೆಯುವುದನ್ನೆಲ್ಲ ನೋಡಿಕೊಂಡು ಸಿಎಂ ಬಹಳ ಕಾಲ ಸುಮ್ಮನಿರಲು ಸಾಧ್ಯವಿಲ್ಲ.ಸುಮ್ಮನೆ ಇರುವುದೂ ಇಲ್ಲ.ನಾವು ಪುಟುಗೋಸಿ ಮಂತ್ರಿಗಿರಿಗಾಗಿ ಕಾದುಕೊಂಡು ಕೂತವರಲ್ಲ ಎಂದೂ ಅವರು ಗುಡುಗಿದ್ದಾರೆ.

           ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಇಲಾಖೆಯಲ್ಲಿ ವರ್ಗಾವಣೆಗಳಲ್ಲಿ ರೇವಣ್ಣ ಹಸ್ತಕ್ಷೇಪ ಮಾಡಿದ್ದರಿಂದ ನೊಂದ ಪರಮೇಶ್ವರ್ ಅವರು ಗೃಹ ಖಾತೆ ಬಿಟ್ಟುಕೊಟ್ಟಿದ್ದಾರೆ ಎಂದು ನಡೆಸುತ್ತಿರುವ ಅಪಪ್ರಚಾರದ ಹಿಂದೆ ಯಾರಿದ್ದಾರೋ?ಅವರೇ ಪರಮೇಶ್ವರ್ ಅವರ ಎತ್ತಂಗಡಿಗೆ ಕಾರಣ ಎಂದು ಮಾರ್ಮಿಕವಾಗಿ ನುಡಿದರು.

           ಇಂತಹ ಕೆಲಸಗಳಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ದುಸ್ಥಿತಿಗೆ ಬಂದಿದೆ.ಪರಮೇಶ್ವರ್ ಅವರನ್ನು ಎತ್ತಂಗಡಿ ಮಾಡಿದ ಕೂಡಲೇ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಮಾತನಾಡಿದ್ದಾರೆ ಎಂದರು.

           ನಾನು ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಿರಲಿ,ಒಬ್ಬ ಅಟೆಂಡರ್ ವರ್ಗಾವಣೆಗೂ ಅವರ ಬಳಿ ಹೋಗಿಲ್ಲ.ನನ್ನ ಕ್ಷೇತ್ರದ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸಗಳಿಗಾಗಿಯೂ ಅವರ ಬಳಿಗೆ ಹೋಗಿಲ್ಲ.ನಾನು ಮಾತ್ರವಲ್ಲ,ಮುಖ್ಯಮಂತ್ರಿಗಳೂ ಹಸ್ತಕ್ಷೇಪ ಮಾಡಿಲ್ಲ ಎಂದರು.

          ನಾನೇನಾದರೂ ಹಸ್ತಕ್ಷೇಪ ಮಾಡಿದ್ದರೆ ಪೊಲೀಸ್ ಮಹಾ ನಿರ್ದೇಶಕರನ್ನು ಕೇಳಲಿ,ಗೃಹ ಕಾರ್ಯದರ್ಶಿಗಳನ್ನು ಕೇಳಲಿ.ಅದನ್ನು ಬಿಟ್ಟು ತಾವು ಮಾಡಿದ ಕೆಲಸಕ್ಕೆ ನನ್ನನ್ನು ಹೊಣೆ ಮಾಡಿ ಟಿವಿಗಳಲ್ಲಿ ಪ್ರಚಾರ ಕೊಡಿಸಿದರೆ ಹೆದರಿಕೊಂಡು ಓಡಿ ಹೋಗುತ್ತೇನೆ ಎಂದುಕೊಂಡರೆ ಅದು ಭ್ರಮೆ ಎಂದು ವ್ಯಂಗ್ಯವಾಡಿದರು.

          ಪರಮೇಶ್ವರ್ ಅವರ ಇಂದಿನ ಸ್ಥಿತಿಗೆ ಕಾರಣರಾದವರು ನನ್ನ ಮೇಲೆ ಗೂಬೆ ಕೂರಿಸಿದರೆ ಅದಕ್ಕೆ ಅಂಜುವವನು ನಾನಲ್ಲ.ಆದರೆ ಈ ಬೆಳವಣಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಹಾನಿಯುಂಟು ಮಾಡಲಿದೆ ಎಂದರು.

         ಪರಮೇಶ್ವರ್ ಅವರ ಗೃಹ ಖಾತೆಯಲ್ಲಿ ಶಾಸಕರ ಒತ್ತಡ ಹೆಚ್ಚಾಗಿರುತ್ತದೆ.ಅದು ಸಹಜ.ಹೀಗಿರುವಾಗ ನಾನು ಹೇಗೆ ಹಸ್ತಕ್ಷೇಪ ಮಾಡಲು ಸಾಧ್ಯ?ಎಂದು ಪ್ರಶ್ನಿಸಿದ ಅವರು,ಪರಮೇಶ್ವರ್ ಅವರನ್ನು ಎತ್ತಂಗಡಿ ಮಾಡಿಸಿದವರೇ ಈಗ ಟಿವಿಗಳಲ್ಲಿ,ಅಣ್ಣ,ತಮ್ಮಂದಿರ ಒತ್ತಡ ಹೆಚ್ಚಾಗಿದ್ದೇ ಪರಮೇಶ್ವರ್ ಆ ಖಾತೆ ಬಿಡಲು ಕಾರಣ ಎಂದೆಲ್ಲ ಪ್ರಚಾರ ಕೊಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ದಲಿತ ಸಮುದಾಯದ ಒಬ್ಬ ನಾಯಕನನ್ನು, ಅದರಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ನಾಯಕನನ್ನು ಹೀಗೆ ಎತ್ತಂಗಡಿ ಮಾಡಬಾರದಿತ್ತು. ಆದರೆ ಖಾತೆ ಹಂಚಿಕೆ ಅವರ ಪಕ್ಷಕ್ಕೆ ಸಂಬಂಧಿಸಿದ ವಿಷಯ ಎಂದರು.

         ಇನ್ನು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ,ರಾಜಕೀಯ ಕಾರ್ಯದರ್ಶಿ,ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ನೇಮಕ ಮಾಡುವಾಗ ಉಭಯ ಪಕ್ಷಗಳ ನಾಯಕರು,ರಾಷ್ಟ್ರೀಯ ಅಧ್ಯಕ್ಷರು ಚರ್ಚೆ ನಡೆಸಬೇಕು. ಆದರೆ ಅಂತಹ ಚರ್ಚೆಯನ್ನು ಯಾರು?ಎಲ್ಲಿ ನಡೆಸಿದ್ದಾರೆ?ಎಂಬುದು ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ನಿಮ್ಮನ್ನು ಕೇಳದೆ ಕೆ.ಆರ್.ಡಿ.ಎಲ್ ನಂತಹ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ರೀತಿಯ ನೇಮಕಾತಿಯಾಗಿರುವುದು ನನಗೆ ಗೊತ್ತಿಲ್ಲ.ನೇಮಕಾತಿಯಾಗಿದೆ ಎಂದು ಗೊತ್ತಾದರೆ ಮಾತನಾಡಬಹುದು ಎಂದರು.

ಸಿದ್ದುಗೆ ತಿರುಗೇಟು

           ಅಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಕ್ತಪಡಿಸಿದ ವಿರೋಧಕ್ಕೆ ತಿರುಗೇಟು ನೀಡಿದ ಅವರು, ಯಾಕೆ ಬಡವರ ಮಕ್ಕಳು ಇಂಗ್ಲೀಷ್ ಓದಬಾರದೇ? ಓದಿ ಮುಂದೆ ಬರಬಾರದೇ? ಎಂದು ತಿರುಗೇಟು ಹೊಡೆದರು.
ಕೇವಲ ದುಡ್ಡಿದ್ದವರ ಮಕ್ಕಳು,ಸಾಹಿತಿಗಳ ಮಕ್ಕಳು ಇಂಗ್ಲೀಷ್ ಓದಬೇಕು.ಬಡವರ ಮಕ್ಕಳು ಓದಬಾರದೇ? ಈ ವಿಷಯದಲ್ಲಿ ನಾನು ಬಡವರ ಪರ.ಬಡವರ ಮಕ್ಕಳು ಇಂಗ್ಲೀಷ್ ಓದಲಿ, ಬದಲಾದ ಕಾಲಘಟ್ಟದಲ್ಲಿ ಅವರು ಓದಿ ಶಕ್ತಿ ಪಡೆಯಲಿ ಎಂದು ಹೇಳಿದರು.
ಈ ವಿಷಯದಲ್ಲಿ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ.ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಕೋರುತ್ತೇನೆ ಎಂದು ಅವರು ವಿವರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap